ಯೋಗೀಶ್ ಗೌಡ ಹ*ತ್ಯೆ ಕೇಸ್‌ಗೆ ಬಿಗ್ ಕ್ಲೈಮ್ಯಾಕ್ಸ್ - ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಗೆ ಜೀವಾವಧಿ ಶಿಕ್ಷೆ!!

ಧಾರವಾಡದ ಬಿಜೆಪಿ ನಾಯಕ ಯೋಗೀಶ್ ಗೌಡ ಹ*ತ್ಯೆ ಪ್ರಕರಣ ಈಗ ಕ್ಲೈಮ್ಯಾಕ್ಸ್ ತಲುಪಿದೆ. ಕಳೆದ ಎಂಟು ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಲ್ಲಿದ್ದ ಈ ಕೇಸ್‌ನಲ್ಲಿ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿಯನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪು ಹೊರಬೀಳುತ್ತಿದ್ದಂತೆ ಕುಲಕರ್ಣಿ ಬೆಂಬಲಿಗರಿಗೆ ಆಘಾತವಾದರೆ, ಯೋಗೀಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ ಎಂಬ ಸಮಾಧಾನ ಮೂಡಿದೆ.

ಎಂಟು ವರ್ಷದ ಹೋರಾಟಕ್ಕೆ ಅಂತ್ಯ – ಯೋಗೀಶ್ ಗೌಡ ಕುಟುಂಬಕ್ಕೆ ನ್ಯಾಯ!!
ಎಂಟು ವರ್ಷದ ಹೋರಾಟಕ್ಕೆ ಅಂತ್ಯ – ಯೋಗೀಶ್ ಗೌಡ ಕುಟುಂಬಕ್ಕೆ ನ್ಯಾಯ!!

ತಮ್ಮದೇ ಜಿಮ್‌ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹ*ತ್ಯೆಯಾದ ಯೋಗೀಶ್ ಗೌಡ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಆಸ್ತಿ ವಿವಾದದ ಕಥೆ ಕಟ್ಟಿ ಪ್ರಕರಣದ ದಿಕ್ಕು ತಪ್ಪಿಸಲು ಸಂಚು ರೂಪಿಸಲಾಗಿತ್ತು. ಆದರೆ, ಅನ್ಯಾಯದ ವಿರುದ್ಧ ಸಿಡಿದೆದ್ದ ಕುಟುಂಬಸ್ಥರ ಪಟ್ಟು ಮತ್ತು ನಿರಂತರ ಕಾನೂನು ಹೋರಾಟದ ಮುಂದೆ ರಾಜಕೀಯ ಪ್ರಭಾವಗಳು ಸೋತು, ಹಂತಕರಿಗೆ ಈಗ ತಕ್ಕ ಶಿಕ್ಷೆಯಾಗಿದೆ.

2019ರಲ್ಲಿ ಯಾವಾಗ ಈ ಕೇಸ್ ಸಿಬಿಐ ಕೈಗೆ ಹೋಯಿತೋ, ಅಲ್ಲಿಂದ ಇಡೀ ಕಥೆಯೇ ಉಲ್ಟಾ ಆಯ್ತು! ಅಲ್ಲಿಯವರೆಗೂ ಇದೊಂದು ಸಣ್ಣ ಪುಟ್ಟ ಜಗಳದ ಜೀವಹಾನಿ ಅಂದುಕೊಂಡಿದ್ದವರಿಗೆ ಸಿಬಿಐ ಶಾಕ್ ಕೊಟ್ಟಿತ್ತು. ಇದು ಕೇವಲ ವೈಯಕ್ತಿಕ ದ್ವೇಷ ಅಲ್ಲ, ಇದರ ಹಿಂದೆ ದೊಡ್ಡ ರಾಜಕೀಯ ಸಂಚು ಇದೆ ಅನ್ನೋದನ್ನ ಸಿಬಿಐ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.

ಇದೇ ಕಾರಣಕ್ಕೆ 2020ರ ನವೆಂಬರ್‌ನಲ್ಲಿ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ಅರೆಸ್ಟ್ ಮಾಡಿತ್ತು. ಸುಮಾರು 9 ತಿಂಗಳು ಜೈಲಿನಲ್ಲಿ ಕಾಲ ಕಳೆದ ಕುಲಕರ್ಣಿ, ಆಮೇಲೆ ಸುಪ್ರೀಂ ಕೋರ್ಟ್‌ನಿಂದ ಬೇಲ್ ತಗೊಂಡು ಹೊರಬಂದಿದ್ರು. ಈ ಕೇಸ್‌ನಲ್ಲಿ ಒಟ್ಟು 21 ಜನರ ಮೇಲೆ ಆರೋಪ ಇತ್ತು. ಅದರಲ್ಲಿ ಇಬ್ಬರು ಮಾಫಿಸಾಕ್ಷಿಗಳಾದ್ರೆ (ಅಪ್ರೂವರ್), ಇನ್ನುಳಿದ 19 ಜನರ ಮೇಲೆ ವಿಚಾರಣೆ ನಡೆದಿತ್ತು. ಈಗ ಅಂತಿಮವಾಗಿ 17 ಮಂದಿ ತಪ್ಪು ಮಾಡಿದ್ದಾರೆ ಅಂತ ಕೋರ್ಟ್ ಗಂಭೀರ ಶಿಕ್ಷೆ ಪ್ರಕಟಿಸಿದೆ. ಅಕ್ಷರಶಃ ಎಂಟು ವರ್ಷದ ಲಾಂಗ್ ಫೈಟ್ ಈಗ ಒಂದು ತಾರ್ಕಿಕ ಅಂತ್ಯ ಕಂಡಿದೆ.

ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿರುವುದರಿಂದ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಈಗ ದೊಡ್ಡ ಅಪಾಯ ಎದುರಾಗಿದೆ. ಕೇಂದ್ರ ಸರ್ಕಾರದ ಪ್ರಜಾ ಪ್ರತಿನಿಧಿ ಕಾಯ್ದೆಯ ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಅವರು ತಕ್ಷಣವೇ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಆ ಪ್ರಕಾರ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ವಜಾಗೊಳ್ಳುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ, ಶಿಕ್ಷೆ ಪೂರ್ಣಗೊಂಡ ನಂತರವೂ ಮುಂದಿನ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ವಿನಯ್ ಕುಲಕರ್ಣಿ (A15) ಹೊರತಾಗಿ ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್, ವಿನಾಯಕ್, ಮಹಾಬಲೇಶ್ವರ್, ಸಂತೋಷ್, ದಿನೇಶ್, ಅಶ್ವಥ್, ಸುನಿಲ್, ನಜೀರ್ ಅಹಮದ್, ಷಾನವಾಜ್, ನೂತನ್, ಹರ್ಷಿತ್, ಚಂದ್ರು ಮಾಮ, ವಿಕಾಸ ಕಲಬುರ್ಗಿ ಹಾಗೂ ಚನ್ನಕೇಶವ ಟಿಂಗರಿಕರ್ ಅವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನುಳಿದ ಇಬ್ಬರು ಆರೋಪಿಗಳಾದ ವಾಸುದೇವ ನಿಲೇಕಣಿ ಹಾಗೂ ಸೋಮಶೇಖರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ.

ಧಾರವಾಡದ ಬೀದಿಗಳಲ್ಲಿ ರಕ್ತ ಚೆಲ್ಲಿದ್ದ ಈ ಪ್ರಕರಣಕ್ಕೆ ಇಂದು ಕಾನೂನಾತ್ಮಕವಾಗಿ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ. ವಿನಯ್ ಕುಲಕರ್ಣಿ ಅವರು ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಮೆಟ್ಟಿಲೇರಬಹುದು. ಆದರೆ, ಸದ್ಯಕ್ಕಂತೂ ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ದೊಡ್ಡ ಕಂಪನ ಸೃಷ್ಟಿಸಿದೆ.

Latest News