May 7, 2026 Languages : ಕನ್ನಡ | English

ಚುನಾವಣೆ ಮುಗಿದರೂ ನಿಲ್ಲದ ರಣಬೇಟೆ - ಚಂದ್ರನಾಥ್ ರಥ್ ಹತ್ಯೆಯ ಹಿಂದಿನ ಅಸಲಿ ರಹಸ್ಯ ಇಲ್ಲಿದೆ ನೋಡಿ!!

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಹಿಂಸಾಚಾರದ ಕಿಡಿ ಹೊತ್ತಿಕೊಂಡಿದೆ. ರಾಜಕೀಯ ದ್ವೇಷಕ್ಕೆ ಈಗ ಒಬ್ಬ ಪ್ರಭಾವಿ ನಾಯಕನ ಆಪ್ತ ಸಹಾಯಕ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ್ ಹ*ತ್ಯೆ
ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ್ ಹ*ತ್ಯೆ

ನಡುರಸ್ತೆಯಲ್ಲೇ ನಡೆದ ಭೀಕರ ದಾಳಿ

ಬುಧವಾರ ರಾತ್ರಿ (ಮೇ 6, 2026) ಸುಮಾರು 9 ಗಂಟೆಯ ಸಮಯ. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೊಹರಿಯಾ ಪ್ರದೇಶದಲ್ಲಿ ಚಂದ್ರನಾಥ್ ರಥ್ ಅವರು ತಮ್ಮ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಅಷ್ಟರಲ್ಲಿ ಬೈಕ್‌ನಲ್ಲಿ ಬಂದ ಮುಖವಾಡಧಾರಿ ದುಷ್ಕರ್ಮಿಗಳು ಕಾರ್ ಅನ್ನು ಅಡ್ಡಗಟ್ಟಿದ್ದಾರೆ.

ಯೋಚಿಸುವ ಮುನ್ನವೇ ಪಿಸ್ತೂಲು ಹೊರತೆಗೆದ ಹಂತಕರು, ಕಾರಿನ ಗಾಜು ಒಡೆದು ಚಂದ್ರನಾಥ್ ಅವರ ಮೇಲೆ ಅತಿ ಸಮೀಪದಿಂದ ಗುಂಡಿನ ಮಳೆ ಕರೆದಿದ್ದಾರೆ. ಚಂದ್ರನಾಥ್ ಅವರ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಸುಮಾರು 3 ರಿಂದ 4 ಗುಂಡುಗಳು ತಗುಲಿವೆ.

ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಯ್ತು!

ಗುಂಡಿನ ದಾಳಿ ನಡೆದ ತಕ್ಷಣ ಚಂದ್ರನಾಥ್ ರಕ್ತದ ಮಡುವಿನಲ್ಲಿ ವಾಹನದೊಳಗೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನು ಇದೇ ದಾಳಿಯಲ್ಲಿ ಚಂದ್ರನಾಥ್ ಅವರ ಜೊತೆಗಿದ್ದ ಬುದ್ಧದೇವ್ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಕಿಡಿ ಕಾರಿದ ಸುವೇಂದು ಅಧಿಕಾರಿ

ತನ್ನ ಆಪ್ತನ ಕೊಲೆ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಓಡಿಬಂದ ಸುವೇಂದು ಅಧಿಕಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ಕಾಕತಾಳೀಯವಾಗಿ ನಡೆದ ಘಟನೆಯಲ್ಲ, ಇದೊಂದು ವ್ಯವಸ್ಥಿತ ರಾಜಕೀಯ ಪಿತೂರಿ. ಕಳೆದ ಮೂರು ದಿನಗಳಿಂದ ಹಂತಕರು ರೆಕ್ಕಿ ನಡೆಸಿ ಚಂದ್ರನಾಥ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಇದು ಪೂರ್ವನಿಯೋಜಿತ ಹತ್ಯೆ" ಎಂದು ಗುಡುಗಿದ್ದಾರೆ.

ಬಂಗಾಳದ ಮಣ್ಣಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸತ್ತು ಹೋಗಿದೆ. ವಿರೋಧ ಪಕ್ಷದವರನ್ನು ಹತ್ತಿಕ್ಕಲು ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ರಾಜಕೀಯ ಕೆಸರೆರಚಾಟ

ಈ ಹತ್ಯೆಯ ಬೆನ್ನಲ್ಲೇ ಬಂಗಾಳ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ:

ಬಿಜೆಪಿ ವಾದ: ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಪ್ರತಿಪಕ್ಷದ ನಾಯಕರಿಗೆ ರಕ್ಷಣೆ ಇಲ್ಲ. ಈ ಕೇಸನ್ನು ಕೂಡಲೇ ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು. ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ.

ಟಿಎಂಸಿ ಉತ್ತರ: ಈ ಹತ್ಯೆಗೂ ತೃಣಮೂಲ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ದ್ವೇಷ ಅಥವಾ ಯಾವುದಾದರೂ ವ್ಯವಹಾರದ ಹಿನ್ನೆಲೆಯಲ್ಲಿ ನಡೆದ ಘಟನೆ ಇರಬಹುದು. ವಿನಾಕಾರಣ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದು ಹೇಳಿದೆ.

ಜನರಲ್ಲಿ ಆತಂಕ

ಚುನಾವಣೆ ಮುಗಿದ ನಂತರ ಶಾಂತಿಯಾಗಬಹುದು ಎಂದುಕೊಂಡಿದ್ದ ಜನರಿಗೆ ಈ ಘಟನೆ ನಡುಕ ಹುಟ್ಟಿಸಿದೆ. ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಪ್ರದೇಶದಲ್ಲೇ ಇಂತಹ ಘಟನೆ ನಡೆದಿರುವುದು ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆ ಮೂಡಿಸಿದೆ. ಸದ್ಯ ದೊಹರಿಯಾ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಹಂತಕರಿಗಾಗಿ ಬಲೆ ಬೀಸಲಾಗಿದೆ.

ಬಂಗಾಳದ ಈ "ರಕ್ತದ ರಾಜಕೀಯ" ಎಲ್ಲಿಗೆ ಬಂದು ನಿಲ್ಲುತ್ತದೆಯೋ ಎಂದು ಇಡೀ ದೇಶ ಕಾತರದಿಂದ ನೋಡುತ್ತಿದೆ. ಚಂದ್ರನಾಥ್ ಅವರ ಕುಟುಂಬದ ಕ್ರಂದನ ಆಸ್ಪತ್ರೆಯ ಆವರಣದಲ್ಲಿ ಮುಗಿಲು ಮುಟ್ಟಿದೆ.

Latest News