ಸೋಶಿಯಲ್ ಮೀಡಿಯಾ ಅನ್ನೋದು ಒಂದೊಂದು ಸಾರಿ ಒಳ್ಳೊಳ್ಳೆ ಕೆಲಸಕ್ಕೆ ಬಳಕೆಯಾದ್ರೆ, ಇನ್ನೊಂದು ಸಾರಿ ಸಮಾಜದ ಕ್ರೂರ ಮುಖವನ್ನ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತೆ. ಈಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಎಂತವರ ಕಣ್ಣಲ್ಲೂ ನೀರು ಬರುತ್ತೆ ಬಾಸ್.. ಹೆತ್ತ ತಾಯಿಯೇ ತನ್ನ ಮಗನ ಮೇಲೆ ರಾಕ್ಷಸಿಯಂತೆ ಅಟ್ಟಹಾಸ ಮೆರೆದಿದ್ದಾಳೆ! ಮಗ ಮಾನಸಿಕವಾಗಿ ಸ್ವಲ್ಪ ಹಿಂದುಳಿದಿದ್ದಾನೆ ಅನ್ನೋ ಕನಿಷ್ಠ ಜ್ಞಾನವೂ ಇಲ್ಲದೆ ಆಕೆ ನಡೆಸಿರೋ ಈ ಹ*ಲ್ಲೆ ಈಗ ಇಡೀ ದೇಶದಲ್ಲೇ ಕಿಚ್ಚು ಹಚ್ಚಿದೆ.
ಅಸಲಿಗೆ ಆ ವಿಡಿಯೋದಲ್ಲೇನಿದೆ?
ಈಗ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹರಿದಾಡ್ತಿರೋ ವಿಡಿಯೋ ನೋಡಿದ್ರೆ ಮನುಷ್ಯತ್ವ ಅನ್ನೋದು ಸತ್ತು ಹೋಗಿದ್ಯಾ ಅಂತ ಅನ್ನಿಸೋದು ಗ್ಯಾರಂಟಿ. ಅದರಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನ ಮನಬಂದಂತೆ ಹಿಗ್ಗಾಮಗ್ಗಾ ಚಚ್ಚುತ್ತಿದ್ದಾಳೆ. ಆ ಮಗು ಬೇರೆ ಮಕ್ಕಳ ತರ ಅಲ್ಲ, ಅದೊಂದು 'ಸ್ಪೆಷಲ್ ಮಗು'. ಅಂದ್ರೆ ಮಾನಸಿಕವಾಗಿ ಮಗುವಿಗೆ ಕೆಲವು ತೊಂದರೆಗಳಿವೆ, ಮಂಡೆ ಅಷ್ಟು ಚುರುಕಿಲ್ಲದ ಕಾರಣ ವಿಷಯಗಳನ್ನ ಬೇರೆಯವರ ಹಾಗೆ ಬೇಗ ಅರ್ಥ ಮಾಡಿಕೊಳ್ಳೋ ಶಕ್ತಿ ಆ ಪುಟ್ಟ ಮಗುವಿಗಿಲ್ಲ.
🇮🇳Indian Mom's extreme and abusive treatment of her child. pic.twitter.com/Zjr9siotIK
— 🅰️SIADecoded (@asia_decode2) May 7, 2026
ಆ ಮಗು ಏನೇ ಸಣ್ಣ ತಪ್ಪು ಮಾಡಿದ್ರೂ ಆ ತಾಯಿಗೆ ಸಿಟ್ಟು ನೆತ್ತಿಗೇರುತ್ತೆ. ಮಗು ಪಾಪ ನೋವಿನಿಂದ ಕಿರುಚಾಡ್ತಿದ್ರೂ, ಅಳ್ತಿದ್ರೂ ಸುಮ್ಮನಾಗದ ಆ ಹೆಂಗಸು, ಆತನನ್ನ ಹಿಂಸಿಸ್ತಾ, ಕಾಡ್ತಾ ಕಾಪಾಳಕ್ಕೆ ಬಾರಿಸುತ್ತಿದ್ದಾಳೆ. ಆ ಮಗುವಿಗೆ ತನ್ನ ನೋವನ್ನ ಸರಿಯಾಗಿ ಹೇಳಿಕೊಳ್ಳೋಕೂ ಬರೋದಿಲ್ಲ, ಅಂತಹ ಅಸಹಾಯಕ ಮಗುವಿನ ಮೇಲೆ ಈಕೆ ರಾಕ್ಷಸಿಯಂತೆ ವರ್ತಿಸಿದ್ದಾಳೆ. ಈ ವಿಡಿಯೋವನ್ನ ಮನೆಯವರೇ ಕದ್ದು ಮುಚ್ಚಿ ಶೂಟ್ ಮಾಡಿದ ಹಾಗೆ ಕಾಣ್ತಿದೆ. ಅಂದ್ರೆ ಮನೆ ಮಂದಿಯ ಕಣ್ಣ ಮುಂದೆಯೇ ಈ ಘೋರ ಅನ್ಯಾಯ ನಡೆದಿದೆ ಅನ್ನೋದು ಮಾತ್ರ ಅಪ್ಪಟ ಸತ್ಯ
ಕಠಿಣ ಕ್ರಮಕ್ಕೆ ಆಗ್ರಹ;
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಿಡಿದೆದ್ದಿದ್ದಾರೆ. ಎಷ್ಟೋ ಜನರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಟ್ಯಾಗ್ ಮಾಡಿ, ಈ ತಾಯಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. "ತಾಯಿ ಅನ್ನೋ ಪವಿತ್ರ ಸ್ಥಾನಕ್ಕೆ ಇವಳು ಕಳಂಕ" ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಬಹಳಷ್ಟು ಜನರು ಕೇಳುತ್ತಿರುವ ಪ್ರಶ್ನೆ ಎಂದರೆ - "ಆ ಮನೆಯಲ್ಲಿರುವ ತಂದೆ ಅಥವಾ ಬೇರೆ ಸಂಬಂಧಿಕರು ಏನು ಮಾಡುತ್ತಿದ್ದಾರೆ?". ವಿಡಿಯೋದಲ್ಲಿ ಹಿಂಸೆ ನಡೆಯುತ್ತಿರುವಾಗ ಯಾರೂ ಅಡ್ಡ ಬಂದು ಮಗುವನ್ನ ರಕ್ಷಿಸದಿರುವುದು ನೋಡಿದರೆ, ಆ ಮನೆಯಲ್ಲಿ ಈ ರೀತಿ ಹಿಂಸೆ ನಡೆಯುವುದು ಮಾಮೂಲಿ ಇರಬಹುದು ಎಂದು ಶಂಕಿಸಲಾಗಿದೆ. ಅಷ್ಟಕ್ಕೂ ತನ್ನ ಮಗುವಿನ ರಕ್ಷಣೆ ಮಾಡಲಾಗದ ತಂದೆ ಇರುವುದಾದರೂ ಏತಕ್ಕೆ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.
ಕಾನೂನು ಏನು ಹೇಳುತ್ತದೆ?
ವಿಶೇಷ ಚೇತನ ಮಕ್ಕಳಿಗೆ ಅಥವಾ ಮಾನಸಿಕ ಅಸ್ವಸ್ಥರಿಗೆ ಹಿಂಸೆ ನೀಡುವುದು ಗಂಭೀರ ಅಪರಾಧ. ಇಂತಹ ಮಕ್ಕಳಿಗೆ ವಿಶೇಷ ಕಾಳಜಿ ಮತ್ತು ಪ್ರೀತಿಯ ಅವಶ್ಯಕತೆ ಇರುತ್ತದೆ. ಆದರೆ, ಇಲ್ಲಿ ಪ್ರೀತಿ ಕೊಡಬೇಕಾದ ತಾಯಿಯೇ ಮಗುವನ್ನ ನರಕಕ್ಕೆ ತಳ್ಳಿದ್ದಾಳೆ. ಮಕ್ಕಳ ರಕ್ಷಣಾ ಆಯೋಗ ಈ ಪ್ರಕರಣವನ್ನ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು, ಮಗುವನ್ನ ಆ ರಾಕ್ಷಸ ತಾಯಿಯಿಂದ ದೂರ ಮಾಡಿ ಸುರಕ್ಷಿತ ಕೇಂದ್ರಕ್ಕೆ ಕಳುಹಿಸಬೇಕು ಎನ್ನುವುದು ಎಲ್ಲರ ಆಗ್ರಹವಾಗಿದೆ.
ಸಮಾಜಕ್ಕೊಂದು ಪಾಠ
ಇಂತಹ ಘಟನೆಗಳು ನಮ್ಮ ಸಮಾಜ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದನ್ನ ತೋರಿಸುತ್ತದೆ. ಒಂದು ಕಡೆ ವಿಶೇಷ ಮಕ್ಕಳನ್ನ ದೇವರೆಂದು ಭಾವಿಸುವವರು ಇದ್ದರೆ, ಇನ್ನೊಂದು ಕಡೆ ಅವರಿಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣಕ್ಕೆ ಈ ರೀತಿ ಹಿಂಸಿಸುವವರು ಇದ್ದಾರೆ. ಮಾನಸಿಕವಾಗಿ ಹಿಂದುಳಿದಿರುವ ಮಗು ನಮ್ಮ ಅಳು, ಸಿಟ್ಟು ಅಥವಾ ಹೊಡೆತವನ್ನ ಅರ್ಥ ಮಾಡಿಕೊಳ್ಳಲಾರದು. ಅವರಿಗೆ ಬೇಕಿರುವುದು ಕೇವಲ ತಾಳ್ಮೆ ಮತ್ತು ಸಹಾನುಭೂತಿ ಮಾತ್ರ.
ಮಗುವನ್ನ ಹೊಡೆಯುತ್ತಿರುವ ಆ ವಿಡಿಯೋವನ್ನ ಪೂರ್ತಿಯಾಗಿ ನೋಡಲು ಸಾಧ್ಯವಿಲ್ಲ ಅಷ್ಟು ದಯನೀಯವಾಗಿದೆ. ಪ್ರಾಣಿಗಳೂ ಕೂಡ ತಮ್ಮ ಮರಿಗಳನ್ನ ಪ್ರೀತಿಯಿಂದ ರಕ್ಷಿಸುತ್ತವೆ, ಆದರೆ ಮನುಷ್ಯ ಮಾತ್ರ ಕ್ರೂರಿಯಾಗುತ್ತಿದ್ದಾನೆ. ಪೊಲೀಸ್ ಇಲಾಖೆ ಮತ್ತು ಮಕ್ಕಳ ಹಕ್ಕುಗಳ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಈ ಮಹಿಳೆಗೆ ತಕ್ಕ ಪಾಠ ಕಲಿಸಬೇಕು. ಜೊತೆಗೆ ಆ ಮನೆಯಲ್ಲಿರುವ ಇತರೆ ಸದಸ್ಯರ ಮೇಲೆಯೂ ತನಿಖೆಯಾಗಬೇಕು!