ಜಿಲ್ಲೆಯ ಸಿಂದಗಿ ತಾಲೂಕಿನ ಬಂಡಾಲ್ ಗ್ರಾಮದಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ಮಾಜಿ ಪ್ರಿಯಕರನೊಬ್ಬ ಮಾಡಿದ ಕುತಂತ್ರಕ್ಕೆ 22 ವರ್ಷದ ಜಯಶ್ರೀ ಬಿರಾದಾರ ಎಂಬ ಯುವತಿ ಬಲಿಯಾಗಿದ್ದಾಳೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ಬಂಡಾಲ್ ಗ್ರಾಮದ ಜಯಶ್ರೀಗೆ ವಿವಾಹ ನಿಶ್ಚಯವಾಗಿತ್ತು. ಬರುವ ಏಪ್ರಿಲ್ 27ಕ್ಕೆ ಮದುವೆ ದಿನಾಂಕವೂ ನಿಗದಿಯಾಗಿತ್ತು. ಮನೆಯವರೆಲ್ಲಾ ಮದುವೆಯ ತಯಾರಿ ನಡೆಸುತ್ತಿದ್ದರು, ಹೊಸ ಬಟ್ಟೆ, ಆಮಂತ್ರಣ ಪತ್ರಿಕೆ ಅಂತಾ ಎಲ್ಲರೂ ಖುಷಿಯಾಗಿದ್ದರು. ಆದರೆ ಈ ಸಂಭ್ರಮಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟವನೇ ಶ್ರೀಶೈಲ್ ಬದನೂರು.
A young woman from Bandal village in Vijayapura's Sindagi taluk jumped into a well and ended her life. Her wedding was called off because of something her ex-lover did.
— Hate Detector 🔍 (@HateDetectors) April 13, 2026
The deceased has been identified as 22-year-old Jayashree Biradar from Bandal village. Her wedding was… https://t.co/Zms42q9VAi pic.twitter.com/i1xiZxxXiT
ಜಯಶ್ರೀ ಮತ್ತು ಶ್ರೀಶೈಲ್ ಈ ಹಿಂದೆ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಕೆಲವು ಕಾರಣಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು. ಈಗ ಜಯಶ್ರೀಗೆ ಬೇರೆ ಕಡೆ ಮದುವೆ ನಿಶ್ಚಯವಾಗಿರುವುದನ್ನು ತಿಳಿದ ಶ್ರೀಶೈಲ್, ಹೇಗಾದರೂ ಮಾಡಿ ಈ ಸಂಬಂಧವನ್ನು ಕೆಡಿಸಬೇಕೆಂದು ಪ್ಲಾನ್ ಮಾಡಿದ್ದಾನೆ. ತಾನು ಮತ್ತು ಜಯಶ್ರೀ ಈ ಹಿಂದೆ ಒಟ್ಟಿಗಿದ್ದಾಗ ತೆಗೆದಿದ್ದ ಕೆಲವು ಖಾಸಗಿ ಫೋಟೋಗಳನ್ನು ಯುವತಿಯ ಮದುವೆಯಾಗಬೇಕಿದ್ದ ವರನ ಕುಟುಂಬಸ್ಥರಿಗೆ ಮೊಬೈಲ್ ಮೂಲಕ ಕಳುಹಿಸಿದ್ದಾನೆ.
ಮುರಿದುಬಿದ್ದ ಮದುವೆ, ನೊಂದ ಜೀವ
ಯಾವಾಗ ಈ ಫೋಟೋಗಳು ವರನ ಕಡೆಯವರ ಕೈ ಸೇರಿದವೋ, ಪರಿಸ್ಥಿತಿ ತಲೆಕೆಳಗಾಯಿತು. ಫೋಟೋಗಳನ್ನು ನೋಡಿದ ವರನ ಕುಟುಂಬಸ್ಥರು ತಕ್ಷಣವೇ ಮದುವೆಯನ್ನು ರದ್ದುಗೊಳಿಸುವುದಾಗಿ ತಿಳಿಸಿದರು. ಇದರಿಂದ ಜಯಶ್ರೀಗೆ ದೊಡ್ಡ ಆಘಾತವಾಯಿತು. ತನ್ನ ಹಳೆಯ ಜೀವನದ ವಿಚಾರಗಳು ಹೀಗೆ ಬಹಿರಂಗಗೊಂಡು, ಮದುವೆ ನಿಂತು ಹೋದದ್ದು ಆಕೆಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.
"ಊರಿನಲ್ಲಿ ಮರ್ಯಾದೆ ಹೋಯಿತು, ಇನ್ನು ನಾನು ಹೇಗೆ ಬದುಕಲಿ?" ಎಂಬ ನೋವಿನಲ್ಲಿ ಜಯಶ್ರೀ ಅತೀವ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೇ ಬೇಸರದಲ್ಲಿ ಗ್ರಾಮದ ಮದೀನಾ ಮಸೀದಿ ಹತ್ತಿರವಿದ್ದ ಬಾವಿಗೆ ಹಾರಿ ತನ್ನ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ತಾಯಿಯ ಕಣ್ಣೀರು, ತನಿಖೆ ಚುರುಕು
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಯಶ್ರೀ ತಾಯಿ ಸಾವಿತ್ರಿ ಅವರು ಕಣ್ಣೀರು ಹಾಕುತ್ತಾ, "ನನ್ನ ಮಗಳ ಸಾವಿಗೆ ಆ ಶ್ರೀಶೈಲ್ ನೇ ನೇರ ಕಾರಣ. ಆತ ಫೋಟೋ ಕಳಿಸದೇ ಇದ್ದಿದ್ದರೆ ಇಂದು ನನ್ನ ಮಗಳು ಬದುಕಿರುತ್ತಿದ್ದಳು. ಪೊಲೀಸರು ತಕ್ಷಣವೇ ಅವನನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು," ಎಂದು ಆಗ್ರಹಿಸಿದ್ದಾರೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜಯಶ್ರೀ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಶ್ರೀಶೈಲ್ ಬದನೂರು ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.