Apr 14, 2026 Languages : ಕನ್ನಡ | English

ಹೆತ್ತ ಮಗನನ್ನೇ ನದಿಗೆ ಎಸೆದ ಪಾಪಿ ತಂದೆ - ಹುಟ್ಟುಹಬ್ಬದ ದಿನವೇ ಬಯಲಾದ ತಂದೆಯ ಕ್ರೂರ ಮುಖ!!

ಸಂಶಯ ಎಂಬ ಭೂತ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿ ಮಾಡುತ್ತದೆ ಎಂಬುದಕ್ಕೆ ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ ಆರು ವರ್ಷದ ಪುಟ್ಟ ಮಗುವನ್ನು ಸ್ವಂತ ತಂದೆಯೇ ನದಿಗೆ ಎಸೆದು ಕೊಲೆ ಮಾಡಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಬೇರೆಯವರ ಮಾತಿಗೆ ಮರುಳಾಗಿ ಸ್ವಂತ ಮಗನನ್ನೇ ಬಲಿ ಪಡೆದ ಕಟುಕ
ಬೇರೆಯವರ ಮಾತಿಗೆ ಮರುಳಾಗಿ ಸ್ವಂತ ಮಗನನ್ನೇ ಬಲಿ ಪಡೆದ ಕಟುಕ

ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಎಂಬಾತನೇ ಈ ಕೃತ್ಯ ಎಸಗಿದ ಕಟುಕ ತಂದೆ. ಈತನಿಗೆ ಭಾಗ್ಯಶ್ರೀ ಎಂಬಾಕೆಯೊಂದಿಗೆ ಮದುವೆಯಾಗಿ ಆರು ವರ್ಷದ ಸಿದ್ಧಾರ್ಥ್ ಎಂಬ ಮಗನಿದ್ದ. ಆದರೆ, ಈ ಮಗುವಿನ ಹುಟ್ಟಿನ ಬಗ್ಗೆ ಮಲ್ಲಿಕಾರ್ಜುನನಿಗೆ ಮೊದಲಿನಿಂದಲೂ ಅನುಮಾನವಿತ್ತು. "ಮಗು ನೋಡಲು ನಿನ್ನಂತಿಲ್ಲ, ನಿನ್ನ ಹೋಲಿಕೆ ಇಲ್ಲ" ಎಂದು ಯಾರೋ ಚುಚ್ಚಿ ಮಾತನಾಡಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಈತ, ಮಗುವಿನ ಮೇಲೆ ದ್ವೇಷ ಸಾಧಿಸಲು ಶುರು ಮಾಡಿದ್ದ.

ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಷಯಕ್ಕೆ ಗಂಡ-ಹೆಂಡತಿ ನಡುವೆ ದೊಡ್ಡ ಜಗಳಗಳಾಗುತ್ತಿದ್ದವು. ಡಿಎನ್​ಎ ಪರೀಕ್ಷೆ ಮಾಡಿಸಿ ಸತ್ಯ ತಿಳಿದುಕೊಳ್ಳುವ ಬದಲು, ಮಗುವನ್ನೇ ಮುಗಿಸಲು ಈ ಪಾಪಿ ಸಂಚು ರೂಪಿಸಿದ್ದ.

ಶಾಲೆಗೆಂದು ಕರೆದೊಯ್ದು ನದಿಗೆ ಎಸೆದ

ಮಾರ್ಚ್ 16ರಂದು ಮಗನಿಗೆ ಹೊಸ ಬಟ್ಟೆ ಹಾಕಿಸಿ, "ಹಾಸ್ಟೆಲ್ ಸೇರಿಸಲು ಶಾಲಾ ಅಡ್ಮಿಷನ್‌ಗೆ ಕರೆದುಕೊಂಡು ಹೋಗುತ್ತೇನೆ" ಎಂದು ಪತ್ನಿಗೆ ಸುಳ್ಳು ಹೇಳಿ ಮಗುವನ್ನು ಕರೆದೊಯ್ದಿದ್ದಾನೆ. ವಿಜಯಪುರದಿಂದ ಮಹಾರಾಷ್ಟ್ರದ ಕರಾಡ್‌ಗೆ ಕರೆದೊಯ್ದು, ಅಲ್ಲಿನ ವಡೋಲಿ ಭಿಕೇಶ್ವರ ಬಳಿ ಹರಿಯುತ್ತಿದ್ದ ಕೃಷ್ಣಾ ನದಿಗೆ ಆ ಮಗುವನ್ನು ದಯೆಯಿಲ್ಲದೆ ಎಸೆದಿದ್ದಾನೆ. ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಂತರ ಏನೂ ತಿಳಿಯದವನಂತೆ ಮನೆಗೆ ಮರಳಿದ್ದಾನೆ.

ಹುಟ್ಟುಹಬ್ಬದ ದಿನ ಬಯಲಾದ ಸತ್ಯ

ಮನೆಯಲ್ಲಿ ಹೆಂಡತಿ ಕೇಳಿದಾಗ "ಮಗುವನ್ನು ಹಾಸ್ಟೆಲ್‌ಗೆ ಸೇರಿಸಿದ್ದೇನೆ" ಎಂದು ನಂಬಿಸಿದ್ದ. ಆದರೆ, ಏಪ್ರಿಲ್ 1ರಂದು ಮಗ ಸಿದ್ಧಾರ್ಥ್‌ನ ಹುಟ್ಟುಹಬ್ಬವಿತ್ತು. ಅಂದು ಮಗನನ್ನು ನೋಡಲೇಬೇಕು ಎಂದು ತಾಯಿ ಹಠ ಹಿಡಿದಾಗ ಮಲ್ಲಿಕಾರ್ಜುನ ತಡಬಡಾಯಿಸಿದ್ದಾನೆ. ಇದರಿಂದ ಅನುಮಾನಗೊಂಡ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ಮಲ್ಲಿಕಾರ್ಜುನನ ಮೊಬೈಲ್ ಲೊಕೇಶನ್ ಮಹಾರಾಷ್ಟ್ರದ ಕರಾಡ್ ಬಳಿ ಇರುವುದು ಪತ್ತೆಯಾಯಿತು. ಪೊಲೀಸರ ಏಟಿಗೆ ಹೆದರಿದ ಈತ, ತಾನೇ ಮಗನನ್ನು ನದಿಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಾರ್ಚ್ 18ಕ್ಕೇ ಕರಾಡ್ ಪೊಲೀಸರಿಗೆ ಮಗುವಿನ ಶವ ಸಿಕ್ಕಿತ್ತು, ಆದರೆ ಗುರುತು ಪತ್ತೆಯಾಗಿರಲಿಲ್ಲ. ಈಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.