ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ರಾಜಾಪೂರ ಗ್ರಾಮದಲ್ಲಿ ವಿದ್ಯಾರ್ಥಿಗಳು ದಿಢೀರ್ ರಸ್ತೆ ತಡೆ ನಡೆಸಿದ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರತಿದಿನ ಈ ಮಾರ್ಗದಲ್ಲಿ ಸಂಡೂರು ತಾಲೂಕಿನಿಂದ ಹೊಸಪೇಟೆ ಕಡೆ ನೂರಾರು ಬಸ್‌ಗಳು ಸಂಚಾರ ಮಾಡುತ್ತವೆ. ಆದರೆ ಮಾರ್ಗಮಧ್ಯೆ ಬಸ್‌ಗಳು ನಿಲ್ಲದೆ ಹೋಗುವುದರಿಂದ ಗ್ರಾಮಸ್ಥರು, ವಿಶೇಷವಾಗಿ ವಿದ್ಯಾರ್ಥಿಗಳು, ತೊಂದರೆ ಅನುಭವಿಸುತ್ತಿದ್ದಾರೆ.
ಸ್ಕೂಲ್ ಹಾಗೂ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲು ಬಸ್‌ಗಳೇ ಮುಖ್ಯ ಸಾರಿಗೆ. ಆದರೆ ಬಸ್‌ಗಳು ನಿಗದಿತ ಸ್ಟಾಪ್‌ಗಳಲ್ಲಿ ನಿಲ್ಲದೆ ಹೋಗುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ತಡವಾಗಿ ತಲುಪುತ್ತಿದ್ದಾರೆ. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು.
ಹೌದು, ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ತಿಳಿದುಕೊಂಡರು. ಬಳಿಕ ಡಿಪೋ ಮ್ಯಾನೇಜರ್ ಅವರನ್ನು ಕರೆಸಿ, ಸಕಾಲಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಬಸ್‌ಗಳು ನಿಗದಿತ ಸ್ಟಾಪ್‌ಗಳಲ್ಲಿ ನಿಲ್ಲುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯರು “ನಮ್ಮ ಮಕ್ಕಳಿಗೆ ಶಿಕ್ಷಣ ಮುಖ್ಯ. ಬಸ್‌ಗಳು ನಿಲ್ಲದೆ ಹೋಗುವುದರಿಂದ ಅವರ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ” ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಗ್ರಾಮಸ್ಥರೂ ಬೆಂಬಲ ವ್ಯಕ್ತಪಡಿಸಿದರು.
ಒಟ್ಟಾರೆ ಹೇಳಬೇಕು ಅಂದರೆ, ಕಲ್ಲಹಳ್ಳಿ – ರಾಜಾಪೂರ ಮಾರ್ಗದಲ್ಲಿ ನಡೆದ ಈ ಘಟನೆ, ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆಯ ಸಮಸ್ಯೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ವಿದ್ಯಾರ್ಥಿಗಳ ಧ್ವನಿಗೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ. ಈ ಘಟನೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಗ್ರಾಮೀಣ ಜನರ ಜೀವನದಲ್ಲಿ ಎಷ್ಟು ಮಹತ್ವದ್ದೆಂಬುದನ್ನು ನೆನಪಿಸಿದೆ.