ವಿಜಯನಗರ: ಸಾಮಾನ್ಯವಾಗಿ ಪೆಟ್ರೋಲ್, ಡೀಸೆಲ್ ಶಾರ್ಟೇಜ್ ಆಯ್ತು ಅಂದರೆ ಮೊದಲು ಟೆನ್ಷನ್ ಮಾಡಿಕೊಳ್ಳುವುದು ಸಿಟಿಯಲ್ಲಿರೋ ಬೈಕ್ ಮತ್ತು ಕಾರ್ ಸವಾರರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹೊಲ ಉಳುಮೆ ಮಾಡಲು, ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್ ಓಡಿಸಲು ಡೀಸೆಲ್ ಸಿಗದೆ ನಮ್ಮ ಅನ್ನದಾತರು ರಸ್ತೆಗೆ ಇಳಿಯುವ ಪರಿಸ್ಥಿತಿ ಬಂದಿದೆ! ಹೌದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಡೀಸೆಲ್‌ಗಾಗಿ ರೈತರು ಪಡುತ್ತಿರುವ ಪಾಡು ಸದ್ಯ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿದೆ.
ಕೃಷಿ ಕೆಲಸಗಳಿಗೆ ತೀರಾ ಅಗತ್ಯವಿರುವ ಇಂಧನ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಹೂವಿನಹಡಗಲಿ ಭಾಗದ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಕಾಲದಲ್ಲಿ ಮಳೆಯಾಗಿ ಬಿತ್ತನೆ ಕೆಲಸ ಮಾಡೋಣ ಎಂದರೆ ಟ್ರ್ಯಾಕ್ಟರ್, ಇಂಜಿನ್‌ಗಳಿಗೆ ಹಾಕಲು ಡೀಸೆಲ್ ಇಲ್ಲದೆ ಇಡೀ ಕೃಷಿ ಚಟುವಟಿಕೆಯೇ ಸ್ತಬ್ಧವಾಗುವ ಆತಂಕ ಎದುರಾಗಿದೆ.
ಮೈಲಾರ ಗ್ರಾಮದ ಬಂಕ್‌ನಲ್ಲಿ ಹಗಲು-ರಾತ್ರಿ ಕ್ಯೂ!
ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಪೆಟ್ರೋಲ್ ಬಂಕ್ ಒಂದರಲ್ಲಿ ಇಂತಹದ್ದೊಂದು ಕರುಣಾಜನಕ ದೃಶ್ಯ ಕಂಡುಬಂದಿದೆ. ಬಂಕ್‌ನಲ್ಲಿ ಡೀಸೆಲ್ ಸ್ಟಾಕ್ ಖಾಲಿಯಾಗಿದೆ ಎಂದು ಗೊತ್ತಿದ್ದರೂ, ರೈತರು ಮನೆಗೆ ಹೋಗದೆ ತಮ್ಮ ಕೃಷಿ ಕೆಲಸಗಳಿಗಾಗಿ ರಾತ್ರಿಯಿಡೀ ಕ್ಯೂನಲ್ಲಿ ನಿಂತಿದ್ದಾರೆ. ಕೈಯಲ್ಲಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಹಿಡಿದುಕೊಂಡು, ಅವುಗಳನ್ನೇ ಸರದ ಸಾಲಿನಲ್ಲಿ ಸಾಲಾಗಿ ಜೋಡಿಸಿಟ್ಟು ಡೀಸೆಲ್ ಸಿಗಬಹುದು ಅನ್ನೋ ಒಂದೇ ಒಂದು ಆಸೆಯಿಂದ ತಡರಾತ್ರಿಯವರೆಗೂ ಕಾದು ಕುಳಿತಿದ್ದಾರೆ.
ಆ ಭಾಗದ ಬಹುತೇಕ ಪೆಟ್ರೋಲ್ ಬಂಕ್‌ಗಳ ಮುಂದೆ ಈಗಾಗಲೇ 'ನೋ ಸ್ಟಾಕ್' (No Stock) ಬೋರ್ಡ್‌ಗಳನ್ನು ತೂಗು ಹಾಕಲಾಗಿದೆ. ಆದರೂ ರೈತರು ಮಾತ್ರ ಜಾಗ ಬಿಟ್ಟು ಕದಲುತ್ತಿಲ್ಲ. ಯಾಕಂದ್ರೆ, ತಡರಾತ್ರಿ ಅಥವಾ ಮುಂಜಾನೆ ವೇಳೆಗೆ ಎಲ್ಲಾದರೂ ಡೀಸೆಲ್ ತುಂಬಿದ ಟ್ಯಾಂಕರ್ ಬರಬಹುದು, ಬಂದರೆ ಮೊದಲು ನಮಗೇ ಸಿಗಲಿ ಎಂಬ ನಿರೀಕ್ಷೆಯಲ್ಲಿ ಅನ್ನದಾತರು ನಿದ್ದೆ ಗೆಟ್ಟು ಬಂಕ್‌ಗಳ ಮುಂದೆಯೇ ಕಾಲ ಕಳೆಯುತ್ತಿದ್ದಾರೆ.
ರೈತರ ಆಕ್ರೋಶಕ್ಕೆ ಕಾರಣವೇನು?
"ನಮಗೆ ದಿನಾ ಆಫೀಸ್‌ಗೆ ಹೋಗೋಕೆ ಪೆಟ್ರೋಲ್ ಬೇಕಾಗಿಲ್ಲ ಮಾರಾಯ್ರೇ, ಹೊಲದಲ್ಲಿ ದುಡಿಯೋ ನಮ್ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಬೇಕು. ಒಂದು ದಿನ ತಡವಾದ್ರೂ ಬಿತ್ತನೆ ಕೆಲಸ ಕೈ ತಪ್ಪಿ ಹೋಗುತ್ತೆ. ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ನಮಗೆ ಬೇಕಾದ ಇಂಧನ ಪೂರೈಕೆ ಮಾಡಬೇಕು" ಎಂದು ಕ್ಯೂನಲ್ಲಿ ನಿಂತಿದ್ದ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂಧನ ಕೊರತೆ ಅನ್ನೋದು ಕೇವಲ ಪ್ರಯಾಣಿಕರ ಸಮಸ್ಯೆಯಾಗಿ ಉಳಿದಿಲ್ಲ, ಅದು ನೇರವಾಗಿ ದೇಶಕ್ಕೆ ಅನ್ನ ಕೊಡುವ ರೈತನ ಹೊಟ್ಟೆಗೆ ಹೊಡೆಯುವ ಮಟ್ಟಿಗೆ ಬಂದು ನಿಂತಿರುವುದು ನಿಜಕ್ಕೂ ಬೇಸರದ ಸಂಗತಿ. ಸರ್ಕಾರ ಇತ್ತ ಗಮನ ಹರಿಸಿ ತಕ್ಷಣವೇ ಬಂಕ್‌ಗಳಿಗೆ ಡೀಸೆಲ್ ಪೂರೈಕೆ ಮಾಡಬೇಕಿದೆ.