Mar 30, 2026 Languages : ಕನ್ನಡ | English

ಡಿವೋರ್ಸ್ ಸಿಕ್ಕ ಖುಷಿಗೆ 9 ಕಿ.ಮೀ ದೀಡ ನಮಸ್ಕಾರ - ಈ ಯುವಕನ ಹರಕೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!!

ಸಾಮಾನ್ಯವಾಗಿ ಯಾರಾದರೂ ಡಿವೋರ್ಸ್ (ವಿಚ್ಛೇದನ) ಪಡೆದರೆ ಅದು ದುಃಖದ ವಿಚಾರ ಅಂದುಕೊಳ್ಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಆದವರು 'ಡಿವೋರ್ಸ್ ಪಾರ್ಟಿ' ಮಾಡಿಕೊಂಡು ಸಂಭ್ರಮಿಸುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಉತ್ತರ ಪ್ರದೇಶದ ಯುವಕನೊಬ್ಬ ಮಾಡಿರುವ ಕೆಲಸ ಮಾತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಏನದು ಅಂತೀರಾ? ಡಿವೋರ್ಸ್ ಸಿಕ್ಕಿದ ಖುಷಿಗೆ ಆತ ದೇವರಿಗೆ ಹರಕೆ ತೀರಿಸಲು ಬರೋಬ್ಬರಿ 9 ಕಿಲೋಮೀಟರ್ ದೀಡ ನಮಸ್ಕಾರ ಹಾಕಿದ್ದಾನೆ!

ಮದುವೆ ಮುರಿದುಬಿದ್ದ ಸಂಭ್ರಮ | Photo Credit: @HateDetectors
ಮದುವೆ ಮುರಿದುಬಿದ್ದ ಸಂಭ್ರಮ | Photo Credit: @HateDetectors

ಏನಿದು ಘಟನೆ? ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ಜೋಗೇಶ್ ಎಂಬುವವರೇ ಈ ವಿಚಿತ್ರ ಸಾಹಸ ಮಾಡಿರೋದು. ಜೋಗೇಶ್ ಅವರಿಗೆ 2022ರಲ್ಲಿ ಮದುವೆಯಾಗಿತ್ತು. ಆದರೆ, ಮದುವೆಯಾದ ಮೊದಲ ದಿನದಿಂದಲೇ ದಾಂಪತ್ಯ ಜೀವನದಲ್ಲಿ ಜಗಳ, ಮನಸ್ತಾಪಗಳು ಶುರುವಾದವಂತೆ. ಸಂಸಾರ ಸಾಗಿಸುವುದು ಕಷ್ಟ ಎನ್ನುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ಈ ಕಿರಿಕಿರಿಗಳಿಂದ ಬೇಸತ್ತ ಜೋಗೇಶ್, ಹೇಗಾದರೂ ಮಾಡಿ ಈ ಸಂಬಂಧದಿಂದ ಮುಕ್ತಿ ಸಿಗಲಿ ಎಂದು ಅಂದುಕೊಂಡಿದ್ದರು. ಒಂದು ವೇಳೆ ನ್ಯಾಯಾಲಯದಲ್ಲಿ ವಿಚ್ಛೇದನ ಸಿಕ್ಕರೆ, ದೇವರಿಗೆ ದೀಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದರು.

ಅದರಂತೆ, ಈ ವರ್ಷದ ಜನವರಿಯಲ್ಲಿ ಕೋರ್ಟ್ ಜೋಗೇಶ್ ಅವರಿಗೆ ಅಧಿಕೃತವಾಗಿ ವಿಚ್ಛೇದನ ನೀಡಿತು. ತನಗೆ ಕಿರಿಕಿರಿ ತುಂಬಿದ ದಾಂಪತ್ಯದಿಂದ ಮುಕ್ತಿ ಸಿಕ್ಕ ಖುಷಿಯಲ್ಲಿದ್ದ ಜೋಗೇಶ್, ಕೊಟ್ಟ ಮಾತಿನಂತೆ ತನ್ನ ಹರಕೆಯನ್ನು ತೀರಿಸಲು ಮುಂದಾದರು.

12 ಗಂಟೆಗಳ ಕಠಿಣ ಯಾತ್ರೆ ನವರಾತ್ರಿಯ ಶುಭ ದಿನದಂದು ಬೆಳಿಗ್ಗೆಯೇ ತನ್ನ ಹರಕೆ ತೀರಿಸಲು ಜೋಗೇಶ್ ಹೊರಟರು. ತಮ್ಮ ಗ್ರಾಮದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ‘ಬೈದಾ ಸಮಯ ಮಾತಾ’ ದೇವಸ್ಥಾನಕ್ಕೆ ನೆಲದ ಮೇಲೆ ಮಲಗಿ, ಸಾಷ್ಟಾಂಗ ನಮಸ್ಕಾರ ಹಾಕುತ್ತಲೇ ಸಾಗಿದರು. ಈ ಕಠಿಣ ಯಾತ್ರೆ ಪೂರ್ಣಗೊಳ್ಳಲು ಅವರಿಗೆ ಸುಮಾರು 12 ಗಂಟೆಗಳು ಬೇಕಾದವು. ಇಡೀ ದಿನ ಏನನ್ನೂ ತಿನ್ನದೆ, ಉಪವಾಸವಿದ್ದು ‘ಜೈ ಶ್ರೀರಾಮ್’, ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗುತ್ತಾ ದೇವಸ್ಥಾನ ತಲುಪಿದರು.

ಈ ವಿಶಿಷ್ಟ ಯಾತ್ರೆಗೆ ಸ್ಥಳೀಯ ಆಡಳಿತದಿಂದ (SDM) ಮುಂಚಿತವಾಗಿಯೇ ಅನುಮತಿ ಪಡೆದಿದ್ದ ಜೋಗೇಶ್‌ಗೆ, ದಾರಿಯುದ್ದಕ್ಕೂ ಯಾವುದೇ ತೊಂದರೆಯಾಗದಂತೆ ಪೊಲೀಸರು ಭದ್ರತೆ ಒದಗಿಸಿದ್ದರು. ಜೋಗೇಶ್ ಅವರ ತಂದೆ-ತಾಯಿ ಹಾಗೂ ಕುಟುಂಬದವರು ಕೂಡ ಈ ಸಾಹಸದ ಸಮಯದಲ್ಲಿ ಅವರ ಜೊತೆಗಿದ್ದರು. ಕೊನೆಗೆ ದೇವಸ್ಥಾನ ತಲುಪಿದ ಮೇಲೆ, ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ ತನ್ನ ಹರಕೆಯನ್ನು ಮುಗಿಸಿದರು.

ವೈರಲ್ ಆಯ್ತು ವಿಡಿಯೋ ಸದ್ಯ ಜೋಗೇಶ್ ಅವರ ಈ ವಿಚಿತ್ರ ಯಾತ್ರೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಇವರ ಧೈರ್ಯವನ್ನು ನೋಡಿ ಆಶ್ಚರ್ಯಪಟ್ಟರೆ, ಇನ್ನು ಕೆಲವರು ಡಿವೋರ್ಸ್ ಸಿಕ್ಕಿದ್ದಕ್ಕೆ ಇಷ್ಟೊಂದು ಸಂಭ್ರಮವೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಯುವಕನ ಹರಕೆ ತೀರಿಸುವ ವಿಧಾನ ಈಗ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ.