ಹೆತ್ತ ಮಗಳನ್ನೇ ಮಾರಿದ ತಾಯಿ - ದೇವಸ್ಥಾನದಲ್ಲಿ ನಕಲಿ ಮದುವೆಯಾಗಿ 12 ವರ್ಷದ ಬಾಲಕಿ ಮೇಲೆ ಸತತ ಅ*ತ್ಯಾಚಾರ!!

ಉತ್ತರ ಪ್ರದೇಶದಲ್ಲಿ ಅತ್ಯಂತ ಮನಕಲಕುವ ಮತ್ತು ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೆತ್ತ ಕರುಳೇ ಹಣ ಮತ್ತು ಸೀರೆಗಾಗಿ ತನ್ನ 12 ವರ್ಷದ ಮಗಳನ್ನು ಮಾರಾಟ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದಿದೆ. ಕೇವಲ ಹಣದ ಆಸೆಗಾಗಿ ಹೆತ್ತ ತಾಯಿಯೇ ಮಗಳನ್ನು ನರಕಕೂಪಕ್ಕೆ ದೂಡಿದ್ದು, ಬಾಲಕಿ ಸತತ ನಾಲ್ಕು ತಿಂಗಳ ಕಾಲ ಅ*ತ್ಯಾಚಾರ ಮತ್ತು ದೌರ್ಜನ್ಯವನ್ನು ಅನುಭವಿಸಿದ್ದಾಳೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!

ಹಣದ ಆಸೆಗೆ ಕರುಳಿನ ಕುಡಿತನ್ನೇ ಕಾಮುಕನಿಗೆ ಒಪ್ಪಿಸಿದ ಹೆತ್ತ ಕರುಳು; | Photo Credit: https://x.com/timesofindia
ಹಣದ ಆಸೆಗೆ ಕರುಳಿನ ಕುಡಿತನ್ನೇ ಕಾಮುಕನಿಗೆ ಒಪ್ಪಿಸಿದ ಹೆತ್ತ ಕರುಳು; | Photo Credit: https://x.com/timesofindia

₹16,000 ಮತ್ತು 10 ಸೀರೆಗೆ ಮಗಳ ಮಾರಾಟ;

ಈ ದಾರುಣ ಘಟನೆ ನಡೆದಿರುವುದು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ. ಕಳೆದ ಜನವರಿ ತಿಂಗಳಲ್ಲಿ ಬಾಲಕಿಯ ತಾಯಿ, ಕೇವಲ 16,000 ರೂಪಾಯಿ ನಗದು ಮತ್ತು 10 ಸೀರೆಗಳನ್ನು ಪಡೆದುಕೊಂಡು ತನ್ನ 12 ವರ್ಷದ ಅಪ್ರಾಪ್ತ ಮಗಳನ್ನು 40 ವರ್ಷದ ಲಾಹ್ರು ಯಾದವ್ ಎಂಬಾತನಿಗೆ ಒಪ್ಪಿಸಿದ್ದಾಳೆ. ಹಣ ಮತ್ತು ಸೀರೆ ಸಿಕ್ಕ ತಕ್ಷಣ ಹೆತ್ತ ತಾಯಿಗೆ ಮಗಳ ಭವಿಷ್ಯದ ಬಗ್ಗೆ ಯಾವುದೇ ಚಿಂತೆ ಇಲ್ಲದಂತೆ ವರ್ತಿಸಿರುವುದು ನಿಜಕ್ಕೂ ಆಘಾತಕಾರಿ!

ಬಾಲಕಿಯನ್ನು ಕರೆದುಕೊಂಡು ಹೋದ ಲಾಹ್ರು ಯಾದವ್, ಯಾರೂ ಅನುಮಾನ ಪಡಬಾರದು ಎಂಬ ಕಾರಣಕ್ಕೆ ದೇವಸ್ಥಾನವೊಂದರಲ್ಲಿ ಆಕೆಯೊಂದಿಗೆ ನಕಲಿ ಮದುವೆ ನಾಟಕವಾಡಿದ್ದಾನೆ. ಮದುವೆಯ ಹೆಸರಿನಲ್ಲಿ ಬಾಲಕಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡ ಆತ, ಕಳೆದ ನಾಲ್ಕು ತಿಂಗಳುಗಳಿಂದ ಆಕೆಯ ಮೇಲೆ ಸತತವಾಗಿ ಅ*ತ್ಯಾಚಾರ ಎಸಗಿದ್ದಾನೆ. ತನ್ನ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ, ಆ ಪುಟ್ಟ ಹೆಣ್ಣುಮಗಳು ದಿನವೂ ನರಕಯಾತನೆ ಅನುಭವಿಸಿದ್ದಾಳೆ.

ವಾರಾಣಸಿ ರೈಲ್ವೆ ನಿಲ್ದಾಣದ ಬಳಿ ಕೈಬಿಟ್ಟ ಪಾಪಿ

ನಾಲ್ಕು ತಿಂಗಳುಗಳ ಕಾಲ ಬಾಲಕಿಯ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ ಲಾಹ್ರು ಯಾದವ್, ಇತ್ತೀಚೆಗೆ ಅಂದರೆ ಮೇ 19 ರಂದು ಆಕೆಯನ್ನು ವಾರಾಣಸಿಯ ರೈಲ್ವೆ ನಿಲ್ದಾಣದ ಹತ್ತಿರ ತಂದು ಯಾರಿಗೂ ತಿಳಿಯದಂತೆ ಬಿಟ್ಟು ಓಡಿಹೋಗಿದ್ದಾನೆ. ಅಪರಿಚಿತ ಜಾಗದಲ್ಲಿ ಏನು ಮಾಡಬೇಕೆಂದು ತಿಳಿಯದೆ, ಭಯದಿಂದ ದಿಕ್ಕುತೋಚದಂತಿದ್ದ ಬಾಲಕಿಗೆ ಅಲ್ಲಿಯೂ ಮತ್ತೊಂದು ಗಂಡಾಂತರ ಕಾದಿತ್ತು.

ಅಲ್ಲಿಗೆ ಬಂದ ರವಿ ವರ್ಮಾ ಎಂಬ ಆಟೋ ಚಾಲಕ, ಒಂಟಿಯಾಗಿದ್ದ ಬಾಲಕಿಯನ್ನು ನೋಡಿ ಸಹಾಯ ಮಾಡುವ ನೆಪದಲ್ಲಿ ಸಾರನಾಥ್ ಎಂಬ ಪ್ರದೇಶದ ಬಳಿ ಕರೆದುಕೊಂಡು ಹೋಗಿ ಆಕೆಯ ಮೇಲೆ ಮತ್ತೆ ದೌರ್ಜನ್ಯ ಎಸಗಿದ್ದಾನೆ. ಆ ಪುಟ್ಟ ಮಗುವಿನ ಅಸಹಾಯಕತೆಯನ್ನು ಇಬ್ಬರು ಕಾಮುಕರು ತಮ್ಮ ಕ್ರೂರತನಕ್ಕೆ ಬಳಸಿಕೊಂಡಿದ್ದಾರೆ.

ಸಾರ್ವಜನಿಕರ ಸಮಯಪ್ರಜ್ಞೆ ಮತ್ತು ಬಾಲಕಿಯ ರಕ್ಷಣೆ

ಆಟೋ ಚಾಲಕ ರವಿ ವರ್ಮಾ ಬಾಲಕಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಮೇ 21 ರಂದು ಸ್ಥಳೀಯ ಸಾರ್ವಜನಿಕರು ತಡಮಾಡದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಪೊಲೀಸರು ಬಾಲಕಿಯನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಸದ್ಯ ಆಕೆಯನ್ನು ಸುರಕ್ಷಿತ ಕಸ್ಟಡಿಯಲ್ಲಿ ಇಡಲಾಗಿದೆ. ಆಕೆಗೆ ಅಗತ್ಯವಿರುವ ಕೌನ್ಸೆಲಿಂಗ್ ಮತ್ತು ರಕ್ಷಣೆಯನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಆರೋಪಿಗಳ ಬಂಧನ;

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಶನಿವಾರದ ಒಳಗಾಗಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯನ್ನು ಕ್ರೂರವಾಗಿ ಅ*ತ್ಯಾಚಾರ ಮಾಡಿದ ಲಾಹ್ರು ಯಾದವ್, ಆಕೆಯನ್ನು ಮಾರಾಟ ಮಾಡಿದ ಹೆತ್ತ ತಾಯಿ ಹಾಗೂ ರೈಲ್ವೆ ನಿಲ್ದಾಣದ ಬಳಿ ದೌರ್ಜನ್ಯ ಎಸಗಿದ ಆಟೋ ಚಾಲಕ ರವಿ ವರ್ಮಾ ಮೂವರನ್ನೂ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಅ*ತ್ಯಾಚಾರ ಹಾಗೂ ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಾದ ಪೋಕ್ಸೋ (POCSO) ಅಡಿಯಲ್ಲಿ ಕಠಿಣ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇಂತಹ ಜುಗುಪ್ಸೆ ತರುವ ಘಟನೆ ಮರುಕಳಿಸದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತನಿಖೆ ಪ್ರಸ್ತುತ ಮುಂದುವರಿದಿದೆ. 

Latest News