May 9, 2026 Languages : ಕನ್ನಡ | English

ಕೂಲಿ ಮಾಡಿ ಹೆಂಡತಿಯನ್ನು ನರ್ಸ್ ಮಾಡಿದ ಗಂಡ; ಕೆಲಸ ಸಿಗುತ್ತಿದ್ದಂತೆ ಬಡ ಪತಿಯನ್ನೇ ಕೈಬಿಟ್ಟ ಹೆಂಡತಿ!! ಗಂಡ ಮಾಡಿದ್ದೇನು?

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿ ಮೌರ್ಯ ಪ್ರಕರಣ ಭಾರಿ ಸದ್ದು ಮಾಡಿತ್ತು. ಗಂಡ ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಿದ ಮೇಲೆ ಹೆಂಡತಿ ಕೈ ಕೊಟ್ಟ ಕಥೆ ಅದು. ಈಗ ಅಂತಹದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ. ಹೊಟ್ಟೆ ಕಟ್ಟಿ, ಕೂಲಿ ಮಾಡಿ ಹೆಂಡತಿಯನ್ನು ಓದಿಸಿದ ಗಂಡನಿಗೆ ಈಗ ಅದೇ ಹೆಂಡತಿ 'ನೀನು ನನಗೇನು ಬೇಡ' ಎಂದು ಹೇಳಿ ಬೀದಿಗೆ ತಳ್ಳಿದ್ದಾಳೆ

ಬಡ ಗಂಡ ಓದಿಸಿದ ಹೆಂಡತಿ, ಕೆಲಸ ಸಿಕ್ಕ ತಕ್ಷಣ ತಿರಸ್ಕಾರ; | Photo Credit: https://x.com/TrueStoryUP
ಬಡ ಗಂಡ ಓದಿಸಿದ ಹೆಂಡತಿ, ಕೆಲಸ ಸಿಕ್ಕ ತಕ್ಷಣ ತಿರಸ್ಕಾರ; | Photo Credit: https://x.com/TrueStoryUP

ಈ ಕಥೆಯ ನಾಯಕ ರಾಜೇಶ್ ವರ್ಮಾ. ಈತ ಒಬ್ಬ ಬಡ ಕೂಲಿ ಕಾರ್ಮಿಕ. ತನ್ನ ಹೆಂಡತಿ ರೇಣು ಓದಬೇಕು, ದೊಡ್ಡ ಕೆಲಸಕ್ಕೆ ಹೋಗಬೇಕು ಎಂಬುದು ರಾಜೇಶ್‌ನ ದೊಡ್ಡ ಕನಸಾಗಿತ್ತು. ತನ್ನ ಬಳಿ ಹಣವಿಲ್ಲದಿದ್ದರೂ ಹಗಲು ರಾತ್ರಿ ಕೂಲಿ ಮಾಡಿ ಕಷ್ಟಪಟ್ಟು ಹಣ ಉಳಿಸಿದ. ಆ ಹಣದಿಂದ ಹೆಂಡತಿಯನ್ನು ANM (ನರ್ಸಿಂಗ್) ಕೋರ್ಸ್‌ಗೆ ಸೇರಿಸಿದ. ತನ್ನ ಹೆಂಡತಿಯ ಭವಿಷ್ಯ ಉಜ್ವಲವಾಗಲಿ ಎಂದು ತಾನು ಹರಿದ ಬಟ್ಟೆ ಹಾಕಿಕೊಂಡರೂ ಆಕೆಗೆ ಬೇಕಾದ ಪುಸ್ತಕ, ಫೀಸ್ ಎಲ್ಲವನ್ನೂ ರಾಜೇಶ್ ಅಚ್ಚುಕಟ್ಟಾಗಿ ನೀಡಿದ್ದ.

ಕೆಲಸ ಸಿಕ್ಕ ಮೇಲೆ ಬದಲಾದ ಮನಸ್ಸು!

ರಾಜೇಶ್‌ನ ಹಾರೈಕೆ ಮತ್ತು ಆಕೆಯ ಶ್ರಮದಿಂದಾಗಿ ರೇಣುಗೆ ನರ್ಸಿಂಗ್ ಕೋರ್ಸ್ ಮುಗಿದು, ಆಸ್ಪತ್ರೆಯೊಂದರಲ್ಲಿ ಕೆಲಸ ಕೂಡ ಸಿಕ್ಕಿತು. ಕೈಗೆ ಸಂಬಳ ಬರಲು ಶುರುವಾದ ತಕ್ಷಣ ರೇಣುವಿನ ವರ್ತನೆ ಬದಲಾಗತೊಡಗಿತು. ಕೂಲಿ ಮಾಡುವ ಗಂಡ ಈಗ ಆಕೆಗೆ ಕೀಳಾಗಿ ಕಾಣತೊಡಗಿದ. ತನ್ನ ಸ್ಟೇಟಸ್‌ಗೆ ಈತ ಮ್ಯಾಚ್ ಆಗಲ್ಲ ಎಂದು ನಿರ್ಧರಿಸಿದ ರೇಣು, ತನ್ನ ಗಂಡನ ಜೊತೆ ಬದುಕಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೆ ಆತನಿಂದ ದೂರ ಉಳಿಯಲು ನಿರ್ಧರಿಸಿ ಮನೆ ಬಿಟ್ಟಿದ್ದಾಳೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ 'ಬಡ ಪತಿ'

ತಾನು ಇಷ್ಟೆಲ್ಲಾ ಕಷ್ಟಪಟ್ಟು ಓದಿಸಿದ ಹೆಂಡತಿ ಈಗ ತನ್ನನ್ನೇ ತಿರಸ್ಕರಿಸಿದ್ದನ್ನು ಕಂಡು ರಾಜೇಶ್ ಕುಸಿದು ಹೋಗಿದ್ದಾನೆ. "ನಾನು ಅವಳಿಗಾಗಿ ನನ್ನ ಜೀವನವನ್ನೇ ಸವೆಸಿದ್ದೇನೆ. ಈಗ ಅವಳಿಗೆ ಕೆಲಸ ಸಿಕ್ಕ ತಕ್ಷಣ ನಾನು ಬೇಡವಾಗಿದ್ದೇನೆ" ಎಂದು ಕಣ್ಣೀರು ಹಾಕುತ್ತಾ ರಾಜೇಶ್ ಈಗ ಪೊಲೀಸರ ಮೊರೆ ಹೋಗಿದ್ದಾನೆ. ರೇಣು ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವ ರಾಜೇಶ್, ತನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ.

ಸಮಾಜದಲ್ಲಿ ಭಾರಿ ಚರ್ಚೆ

ಈ ಘಟನೆ ಈಗ ಗೊಂಡಾ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. "ಪ್ರೀತಿಯಿಂದ ಓದಿಸಿದ ಗಂಡನಿಗೆ ಇಂತಹ ಶಿಕ್ಷೆಯೇ?" ಎಂದು ಜನರು ರೇಣು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಸಂಬಂಧಗಳ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರೇಣು ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕಷ್ಟಪಟ್ಟು ಮಡದಿಯ ಬಾಳು ಬೆಳಗಿದ ಪತಿಗೆ ಈಗ ಕತ್ತಲೆಯೇ ಮಿಕ್ಕಿದೆ!

Latest News