ಕರ್ನಾಟಕದಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಿಗ್ ಶಾಕ್ ನೀಡಿದೆ. ಮಾರ್ಚ್ 19ರ ಗುರುವಾರ ಅಂದರೆ ನಾಳೆ ಚಾಂದ್ರಮಾನ ಯುಗಾದಿಯ ಸರ್ಕಾರಿ ರಜೆ ಇದ್ದರೂ ಸಹ, ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಈ ನಡೆ ಈಗ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ವಿಧಾನಸಭೆಯ ಅಧಿವೇಶನದಲ್ಲಿ ಕೇಳಲಾದ ಹಲವು ಪ್ರಶ್ನೆಗಳಿಗೆ ಕಂದಾಯ ಇಲಾಖೆಯಿಂದ ಇನ್ನೂ ಉತ್ತರಗಳು ಸಲ್ಲಿಕೆಯಾಗಿಲ್ಲ. ಮಾರ್ಚ್ 23ರಂದು ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವ ಹಿನ್ನೆಲೆಯಲ್ಲಿ, ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸರ್ಕಾರ ಈ ತುರ್ತು ಕ್ರಮ ಕೈಗೊಂಡಿದೆ. ಇತ್ತೀಚೆಗಷ್ಟೇ ಅಧಿವೇಶನದಲ್ಲಿ ಉತ್ತರಗಳು ಬಾರದೇ ಇರುವುದಕ್ಕೆ ಸ್ಪೀಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 9 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದರು. ಮೇಲಾಧಿಕಾರಿಗಳ ಮೇಲಿನ ಈ ಒತ್ತಡವು ಈಗ ಕೆಳಹಂತದ ಸಿಬ್ಬಂದಿಗಳ ಹಬ್ಬದ ರಜೆಯ ಮೇಲೆ ಪರಿಣಾಮ ಬೀರಿದೆ.
ಸರ್ಕಾರದ ಆದೇಶದಂತೆ ಕಂದಾಯ ಇಲಾಖೆಯ ಮುಜರಾಯಿ, ಭೂ ಮಂಜೂರಾತಿ (1, 2, 3), ಸೇವೆಗಳು, ಭೂ ಕಂದಾಯ, ಭೂ ಮಾಪನ, ಭೂಮಿ ಹಾಗೂ ಭೂಸುಧಾರಣಾ ಕೋಶ ಸೇರಿದಂತೆ ಒಟ್ಟು 9 ಪ್ರಮುಖ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಳೆ ಕಚೇರಿಗೆ ಬರಲೇಬೇಕಿದೆ. ಹಬ್ಬದ ದಿನ ಕುಟುಂಬದೊಂದಿಗೆ ಕಾಲ ಕಳೆಯಬೇಕಿದ್ದ ಸಿಬ್ಬಂದಿಗಳು ಈಗ ಅನಿವಾರ್ಯವಾಗಿ ಕಚೇರಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ಈ ಆದೇಶವನ್ನು ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಕಠಿಣವಾಗಿ ಟೀಕಿಸಿದ್ದಾರೆ. "ಸರ್ಕಾರ ತನ್ನ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿದೆ" ಎಂದು ವ್ಯಂಗ್ಯವಾಡಿರುವ ಅವರು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
"ನಾಳೆ ಯುಗಾದಿ, ಹಿಂದೂಗಳ ಹೊಸ ವರ್ಷದ ಆರಂಭದ ದೊಡ್ಡ ಹಬ್ಬ. ಇಂತಹ ಪವಿತ್ರ ದಿನವೇ ಅಧಿಕಾರಿಗಳನ್ನು ಕೆಲಸಕ್ಕೆ ಕರೆಯುವುದು ಯಾವ ಮನಸ್ಥಿತಿ? ಈ ಸಭೆಯನ್ನು ಶುಕ್ರವಾರ ಅಥವಾ ಶನಿವಾರ ಕರೆಯಬಹುದಿತ್ತಲ್ಲವೇ? ಓ! ಮರೆತಿದ್ದೆ, ಅಂದು ರಂಜಾನ್ ಹಬ್ಬ ಇದೆ. ಅಂದು ಸಭೆ ಕರೆದರೆ ಈ ಸರ್ಕಾರಕ್ಕೆ ಜಾತ್ಯತೀತ ಹಣೆಪಟ್ಟಿ ಸಿಗುವುದಿಲ್ಲವೇನೋ? ಹಬ್ಬದ ರಜೆ ದಿನವೂ ಅಧಿಕಾರಿಗಳನ್ನು ಕೆಲಸಕ್ಕೆ ಕರೆಯುವುದು ಈ ಸರ್ಕಾರದ ಮಟ್ಟಿಗೆ ನಿಜವಾದ ಜಾತ್ಯತೀತತೆ ಇರಬಹುದು! ವಾಹ್, ಈ ನಡೆಗೆ ಭೇಷ್ ಅನ್ನಬೇಕೋ ಅಥವಾ ಛೀ ಅನ್ನಬೇಕೋ ತಿಳಿಯುತ್ತಿಲ್ಲ" ಎಂದು ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಒಂದು ಹಬ್ಬದ ರಜೆಯನ್ನು ಕಡಿತಗೊಳಿಸಿ ಮತ್ತೊಂದು ಹಬ್ಬಕ್ಕೆ ಮನ್ನಣೆ ನೀಡುತ್ತಿರುವುದು ಸರ್ಕಾರದ ಪಕ್ಷಪಾತದ ಧೋರಣೆಯನ್ನು ತೋರಿಸುತ್ತಿದೆ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. "ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ" ಹಿರಿಯ ಅಧಿಕಾರಿಗಳ ವೈಫಲ್ಯಕ್ಕೆ ಸಾಮಾನ್ಯ ಸಿಬ್ಬಂದಿಗಳು ಹಬ್ಬದ ಖುಷಿ ಕಳೆದುಕೊಳ್ಳುವಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲೂ ಚರ್ಚೆಯಾಗುತ್ತಿದೆ. ಒಟ್ಟಾರೆಯಾಗಿ, ಯುಗಾದಿ ಹಬ್ಬದ ದಿನದ ಈ 'ಕೆಲಸದ ಆದೇಶ'ವು ಸರ್ಕಾರದ ಆಡಳಿತಾತ್ಮಕ ಗೊಂದಲ ಹಾಗೂ ರಾಜಕೀಯ ಸಂಘರ್ಷಕ್ಕೆ ಹೊಸ ವೇದಿಕೆ ಒದಗಿಸಿದೆ.