Mar 26, 2026 Languages : ಕನ್ನಡ | English

ಬೆಳ್ಳಂಬೆಳಗ್ಗೆ ಮಟನ್ ಅಂಗಡಿ ಮುಂದೆ ಕಿಲೋಮೀಟರ್ ಉದ್ದದ ಕ್ಯೂ - ಹೊಸತೊಡಕಿಗೆ ಮಾಂಸದ ಬೆಲೆ ಎಷ್ಟು ಗೊತ್ತಾ?

ನಾಡಹಬ್ಬ ಯುಗಾದಿಯ ಮರುದಿನ ಬರುವ 'ಹೊಸತೊಡಕು' ಅಪ್ಪಟ ಮಾಂಸಪ್ರಿಯರ ಪಾಲಿಗೆ ದೊಡ್ಡ ಹಬ್ಬ. ಯುಗಾದಿಯಂದು ಬೇವು-ಬೆಲ್ಲ ಸವಿದು ಹೊಸ ವರ್ಷವನ್ನು ಬರಮಾಡಿಕೊಂಡ ಜನತೆ, ಮರುದಿನ ಮಾಂಸದೂಟದೊಂದಿಗೆ ಸಡಗರದಿಂದ ಆಚರಿಸುತ್ತಿದ್ದಾರೆ. ವಿಶೇಷವಾಗಿ ಹಳೆ ಮೈಸೂರು ಭಾಗ ಸೇರಿದಂತೆ ರಾಜ್ಯಾದ್ಯಂತ ಹೊಸತೊಡಕಿನ ಅಬ್ಬರ ಜೋರಾಗಿದೆ.

ಹಳೇ ಮೈಸೂರು ಭಾಗದಲ್ಲಿ ಮಟನ್ ಸಾಂಬಾರ್ ಘಮಲು
ಹಳೇ ಮೈಸೂರು ಭಾಗದಲ್ಲಿ ಮಟನ್ ಸಾಂಬಾರ್ ಘಮಲು

ಹೊಸತೊಡಕು ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ಮಾಂಸಕ್ಕೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಜನರು ಮಟನ್ ಹಾಗೂ ಚಿಕನ್ ಅಂಗಡಿಗಳ ಮುಂದೆ ಉದ್ದನೆಯ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಬೆಂಗಳೂರಿನ ಶಿವಾಜಿನಗರ, ಹೊಸೂರು ರಸ್ತೆ ಹಾಗೂ ಕೆ.ಆರ್. ಮಾರುಕಟ್ಟೆಯಂತಹ ಪ್ರಮುಖ ಸ್ಥಳಗಳಲ್ಲಿ ಜನಜಂಗುಳಿ ನಿರ್ಮಾಣವಾಗಿದ್ದು, ಸಾಗರೋಪಾದಿಯಲ್ಲಿ ಜನ ಜಮಾಯಿಸಿದ್ದಾರೆ.

ಬೇಡಿಕೆ ಹೆಚ್ಚಾಗಿರುವುದರಿಂದ ಮಾಂಸದ ಬೆಲೆಯೂ ಕೂಡ ತುಸು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಮಟನ್ ಬೆಲೆ ಪ್ರತಿ ಕೆಜಿಗೆ 750 ರಿಂದ 850 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಚಿಕನ್ ಬೆಲೆ ಕೂಡ ಗಗನಕ್ಕೇರಿದ್ದರೂ, ಜನರು ಮಾತ್ರ ವರ್ಷಕ್ಕೊಮ್ಮೆ ಬರುವ ಈ ಸಂಪ್ರದಾಯದ ಹಬ್ಬಕ್ಕೆ ಮಾಂಸ ಖರೀದಿಸಲು ಕಿಂಚಿತ್ತೂ ಹಿಂದೆ ಬಿದ್ದಿಲ್ಲ. ಹಣಕ್ಕಿಂತ ಹಬ್ಬದ ಸಂಭ್ರಮವೇ ಮುಖ್ಯ ಎಂದು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಯುಗಾದಿಯ ಮರುದಿನ ವರ್ಷದ ಮೊದಲ ದಿನದ ಸಂಭ್ರಮವನ್ನು ಸವಿಯಲು ಮಾಂಸದ ಅಡುಗೆ ಮಾಡುವುದು ಅನಾದಿಕಾಲದಿಂದ ಬಂದ ರೂಢಿ. ಈ ದಿನದಂದು ಭರ್ಜರಿ ಮಾಂಸದೂಟ ಮಾಡಿದರೆ ವರ್ಷವಿಡೀ ಉತ್ತಮ ಆಹಾರ ಲಭ್ಯವಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿದೆ.

ಗ್ರಾಮೀಣ ಭಾಗದ ಆಚರಣೆ: ಹಳ್ಳಿಗಳಲ್ಲಿ ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಸೇರಿ ಮುದ್ದೆ, ಮಟನ್ ಸಾರು ಹಾಗೂ ಬೋಟಿ ಫ್ರೈ ಸವಿಯುತ್ತಾ ಹಬ್ಬವನ್ನು ಆಚರಿಸುತ್ತಾರೆ.

ಸಾಮೂಹಿಕ ಸಂಭ್ರಮ: ಇಂದಿಗೂ ಹಳ್ಳಿಗಳಲ್ಲಿ ಸಾಮೂಹಿಕವಾಗಿ ಕುರಿ ಅಥವಾ ಟಗರುಗಳನ್ನು ಕಡಿದು ಮಾಂಸವನ್ನು ಹಂಚಿಕೊಳ್ಳುವ ಸಂಪ್ರದಾಯವಿದೆ. ತೋಟದ ಮನೆಗಳಲ್ಲಿ ಅಥವಾ ಮನೆಯ ಅಂಗಳದಲ್ಲಿ ಒಲೆ ಹೂಡಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅಡುಗೆ ತಯಾರಿಸಿ ನೆಂಟರಿಷ್ಟರಿಗೆ ಬಡಿಸುವುದು ಈ ದಿನದ ವಿಶೇಷ.

ಯುಗಾದಿಯ ಬೇವು-ಬೆಲ್ಲದ ಸಿಹಿ-ಕಹಿ ನೆನಪುಗಳ ನಂತರ, ಈಗ ಎಲ್ಲೆಡೆ ಖಾರ-ಖಾರವಾದ ಮಾಂಸದೂಟದ ಘಮಲು ಹರಡಿದೆ. ಮಾಂಸಪ್ರಿಯರು ಸಖತ್ ಆಗಿ ಹೊಸ ವರ್ಷದ ಮೊದಲ ಬಾಡೂಟವನ್ನು ಸವಿಯುತ್ತಿದ್ದಾರೆ.

Latest News