ಉಡುಪಿ: ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದರೆ ಕೇವಲ ಧಾರ್ಮಿಕ ಹಬ್ಬವಲ್ಲ. ಕೃಷ್ಣನ ಬಾಲಲೀಲೆ, ನಂದಗೋಕುಲದ ಸಂಭ್ರಮ ಮತ್ತು ಹಲವು ಶತಮಾನಗಳ ಸಂಪ್ರದಾಯಗಳು ಒಂದೇ ಕಡೆ ಕಾಣಿಸುವ ದೊಡ್ಡ ಉತ್ಸವ. ಶ್ರೀಕೃಷ್ಣ ಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಈ ಸಂದರ್ಭದಲ್ಲಿ ವಿಶೇಷವಾಗಿ ಕಂಗೊಳಿಸುತ್ತವೆ. ದೇಶದ ವಿವಿಧ ಭಾಗಗಳಿಂದ ಭಕ್ತರು ಉಡುಪಿಗೆ ಆಗಮಿಸಿ ಕೃಷ್ಣನ ದರ್ಶನ ಪಡೆದು, ಇಲ್ಲಿನ ವಿಶಿಷ್ಟ ಆಚರಣೆಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಉಡುಪಿಯ ಕೃಷ್ಣ ಜನ್ಮಾಷ್ಟಮಿಗೆ ದೀರ್ಘ ಇತಿಹಾಸವಿದೆ. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಕೃಷ್ಣನ ಬಾಲ ವಿಗ್ರಹ, ಕನಕದಾಸರಿಗೆ ದರ್ಶನ ನೀಡಿದ ಕಿಂಡಿ ಹಾಗೂ ವಿಟ್ಲ ಪಿಂಡಿ ಉತ್ಸವದಂತಹ ಆಚರಣೆಗಳು ಉಡುಪಿಯ ಕೃಷ್ಣೋತ್ಸವಕ್ಕೆ ವಿಶೇಷ ಸ್ಥಾನ ನೀಡಿವೆ. ಹೀಗಾಗಿ ಪ್ರತಿ ವರ್ಷ ಜನ್ಮಾಷ್ಟಮಿ ಸಂದರ್ಭದಲ್ಲಿ ನಗರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ.
ಈ ಬಾರಿ ಸೆಪ್ಟೆಂಬರ್ 4ರಂದು ಕೃಷ್ಣ ಜನ್ಮಾಷ್ಟಮಿ ಮತ್ತು ಸೆಪ್ಟೆಂಬರ್ 5ರಂದು ವಿಟ್ಲ ಪಿಂಡಿ ಉತ್ಸವ ನಡೆಯಲಿದೆ. ಜನ್ಮಾಷ್ಟಮಿ ದಿನ ಬೆಳಗ್ಗೆಯಿಂದಲೇ ಮಠದಲ್ಲಿ ವಿವಿಧ ಪೂಜೆಗಳು ನಡೆಯಲಿದ್ದು, ರಾತ್ರಿ ಅರ್ಘ್ಯ ಪ್ರಧಾನದೊಂದಿಗೆ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಮರುದಿನ ವಿಟ್ಲ ಪಿಂಡಿ ಉತ್ಸವದ ಅಂಗವಾಗಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಕೃಷ್ಣನ ಬಾಲ ವಿಗ್ರಹ
ಉಡುಪಿ ಶ್ರೀಕೃಷ್ಣ ಮಠದ ಪ್ರಮುಖ ಆಕರ್ಷಣೆ ಬಾಲಕೃಷ್ಣನ ವಿಗ್ರಹ. ಕೈಯಲ್ಲಿ ಕಡೆಗೋಲು ಹಿಡಿದಿರುವ ಕೃಷ್ಣನ ಈ ವಿಗ್ರಹವನ್ನು ವಿಶೇಷ ಸಂದರ್ಭಗಳಲ್ಲಿ ಮುತ್ತು, ರತ್ನ, ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಭಕ್ತರು ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆಯುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
13ನೇ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರು ಈ ಕೃಷ್ಣ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಎನ್ನುವುದು ಇತಿಹಾಸ. ಮಧ್ವಾಚಾರ್ಯರು ದ್ವೈತ ವೇದಾಂತ ಪರಂಪರೆಯ ಪ್ರಮುಖ ಆಚಾರ್ಯರಾಗಿದ್ದು, ಉಡುಪಿಯ ಕೃಷ್ಣ ಆರಾಧನೆಗೆ ಹೊಸ ರೂಪ ನೀಡಿದರು.
ದಂತಕಥೆಯ ಪ್ರಕಾರ, ಕೃಷ್ಣನ ಈ ವಿಗ್ರಹವನ್ನು ದ್ವಾಪರ ಯುಗದಲ್ಲಿ ವಿಶ್ವಕರ್ಮರು ನಿರ್ಮಿಸಿದ್ದರು. ಕೃಷ್ಣನ ಪತ್ನಿ ರುಕ್ಮಿಣಿ ಈ ವಿಗ್ರಹವನ್ನು ಪೂಜಿಸುತ್ತಿದ್ದಳು ಎಂಬ ನಂಬಿಕೆಯೂ ಇದೆ. ನಂತರ ಕಾಲಕ್ರಮೇಣ ವಿಗ್ರಹವು ಸಮುದ್ರದಲ್ಲಿದ್ದ ಗೋಪೀಚಂದನದ ಮುದ್ದೆಯೊಳಗೆ ಸೇರಿತ್ತು ಎನ್ನಲಾಗುತ್ತದೆ.
ಮಧ್ವಾಚಾರ್ಯರು ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪಾಯದಲ್ಲಿದ್ದ ಹಡಗನ್ನು ರಕ್ಷಿಸಿದರು. ಆ ಹಡಗಿನಲ್ಲಿದ್ದ ಗೋಪೀಚಂದನದ ಮುದ್ದೆಯೊಳಗೆ ಕೃಷ್ಣನ ವಿಗ್ರಹವಿರುವುದು ತಿಳಿದುಬಂದ ಬಳಿಕ ಅದನ್ನು ಉಡುಪಿಗೆ ತಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು ಎಂಬುದು ಇಲ್ಲಿನ ಪ್ರಸಿದ್ಧ ನಂಬಿಕೆ.
ಕೃಷ್ಣನ ವಿಗ್ರಹ ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವುದಕ್ಕೂ ಒಂದು ಪ್ರಸಿದ್ಧ ಕಥೆಯಿದೆ. 16ನೇ ಶತಮಾನದಲ್ಲಿ ಕೃಷ್ಣಭಕ್ತ ಕನಕದಾಸರು ಉಡುಪಿಗೆ ಬಂದಾಗ ಅವರಿಗೆ ದೇವಾಲಯದೊಳಗೆ ಪ್ರವೇಶ ಸಿಗಲಿಲ್ಲ. ದೇವರ ದರ್ಶನಕ್ಕಾಗಿ ಅವರು ಹೊರಗಿನಿಂದಲೇ ಭಕ್ತಿಯಿಂದ ಪ್ರಾರ್ಥಿಸಿದರು. ಆಗ ಕೃಷ್ಣನ ವಿಗ್ರಹ ಪಶ್ಚಿಮಕ್ಕೆ ತಿರುಗಿ ಕನಕದಾಸರಿಗೆ ದರ್ಶನ ನೀಡಿತು ಎಂಬ ನಂಬಿಕೆ ಇದೆ. ನಂತರ ಗೋಡೆಯಲ್ಲಿ ನಿರ್ಮಿಸಲಾದ ಕಿಂಡಿ ‘ಕನಕನ ಕಿಂಡಿ’ ಎಂದು ಪ್ರಸಿದ್ಧವಾಯಿತು. ಇಂದಿಗೂ ಭಕ್ತರು ಈ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆಯುತ್ತಾರೆ.
ಸೆ.4ರಂದು ಜನ್ಮಾಷ್ಟಮಿ; ಮರುದಿನ ವಿಟ್ಲ ಪಿಂಡಿ ಉತ್ಸವ
ಉಡುಪಿಯಲ್ಲಿ ಸೌರಮಾನ ಪದ್ಧತಿಯನ್ನು ಅನುಸರಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರದ ಮಧ್ಯರಾತ್ರಿಯಲ್ಲಿ ಕೃಷ್ಣ ಅವತರಿಸಿದನೆಂಬ ನಂಬಿಕೆಯ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ.
ಸೆಪ್ಟೆಂಬರ್ 4ರಂದು ಬೆಳಗ್ಗೆಯಿಂದಲೇ ಶ್ರೀಕೃಷ್ಣನಿಗೆ ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರು ಉಪವಾಸ, ಪೂಜೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆಯಲಿದ್ದು, ನಂತರ ಅರ್ಚನೆ ಮತ್ತು ಮಹಾಪೂಜೆ ನೆರವೇರಲಿದೆ.
ಈ ಬಾರಿ ಪರ್ಯಾಯ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರು ಜನ್ಮಾಷ್ಟಮಿಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಿದ್ದಾರೆ. ಏಕಾದಶಿಯಂತೆ ನಿರ್ಜಲ ವ್ರತ ಕೈಗೊಂಡು ಕೃಷ್ಣನ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಮಹಾಪೂಜೆ ನೆರವೇರಿಸಿ ಲಡ್ಡುಗಳನ್ನು ಕೃಷ್ಣನಿಗೆ ಸಮರ್ಪಿಸಲಾಗುತ್ತದೆ.
ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ರಥಬೀದಿ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಹೂವಿನ ಅಲಂಕಾರ ಮತ್ತು ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಹಬ್ಬದ ವಾತಾವರಣ ಈಗಾಗಲೇ ಉಡುಪಿಯಲ್ಲಿ ಕಾಣಿಸುತ್ತಿದ್ದು, ಭಕ್ತರ ಆಗಮನವೂ ಹೆಚ್ಚಾಗಿದೆ.
ಸೆಪ್ಟೆಂಬರ್ 5ರಂದು ನಡೆಯಲಿರುವ ವಿಟ್ಲ ಪಿಂಡಿ ಉತ್ಸವ ಜನ್ಮಾಷ್ಟಮಿ ಆಚರಣೆಯ ಪ್ರಮುಖ ಭಾಗವಾಗಿದೆ. ಲೀಲೋತ್ಸವದ ಸಂದರ್ಭದಲ್ಲಿ ಮೃಣ್ಮಯ ಕೃಷ್ಣ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಚಿನ್ನದ ರಥದಲ್ಲಿ ಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದ್ದು, ಸಾವಿರಾರು ಭಕ್ತರು ಇದನ್ನು ವೀಕ್ಷಿಸಲಿದ್ದಾರೆ.
ಮಲ್ಲಯುದ್ಧ, ಕೃಷ್ಣ ವೇಷ ಮತ್ತು ಹುಲಿ ವೇಷ ವಿಶೇಷ ಆಕರ್ಷಣೆ
ಈ ಬಾರಿಯ ವಿಟ್ಲ ಪಿಂಡಿ ಉತ್ಸವದಲ್ಲಿ ಮಲ್ಲಯುದ್ಧ ವಿಶೇಷ ಆಕರ್ಷಣೆಯಾಗಲಿದೆ. ಕೃಷ್ಣನ ಬಾಲಲೀಲೆಗಳಿಗೆ ಸಂಬಂಧಿಸಿದ ಉತ್ಸವದ ಭಾಗವಾಗಿ ನಡೆಯುವ ಮೆರವಣಿಗೆಯ ಸಂದರ್ಭದಲ್ಲಿ ಮಲ್ಲಯುದ್ಧ ಪ್ರದರ್ಶನ ಇರಲಿದೆ. ಸಾಂಪ್ರದಾಯಿಕ ಆಚರಣೆಯ ಜೊತೆಗೆ ಈ ಕಾರ್ಯಕ್ರಮವೂ ಭಕ್ತರ ಗಮನ ಸೆಳೆಯಲಿದೆ.
ವಿಟ್ಲ ಪಿಂಡಿ ಉತ್ಸವದ ಮತ್ತೊಂದು ವಿಶೇಷವೆಂದರೆ ಭಕ್ತರಿಗೆ ನೀಡುವ ಪ್ರಸಾದ. ದೂರದೂರುಗಳಿಂದ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತದೆ. ವಿವಿಧ ಖಾದ್ಯಗಳ ಪ್ರಸಾದವನ್ನೂ ವಿತರಿಸಲಾಗುತ್ತದೆ.
ಈ ಬಾರಿ ಸುಮಾರು ಒಂದೂವರೆ ಲಕ್ಷ ಚಕ್ಕುಲಿ ತಯಾರಿಸಿ ಭಕ್ತರಿಗೆ ವಿತರಿಸಲು ಸಿದ್ಧತೆ ಮಾಡಲಾಗಿದೆ. ಇದರ ಜೊತೆಗೆ ಐದು ಬಗೆಯ ವಿವಿಧ ಉಂಡೆಗಳನ್ನು ತಲಾ ಸುಮಾರು 30 ಸಾವಿರದಷ್ಟು ವಿತರಿಸಲಾಗುತ್ತದೆ. ಹೀಗಾಗಿ ಉತ್ಸವದ ದಿನ ಭಕ್ತರಿಗೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರಸಾದವೂ ಪ್ರಮುಖ ಆಕರ್ಷಣೆಯಾಗಲಿದೆ.
ರಾಜಾಂಗಣದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗಾಗಿ ಕೃಷ್ಣ ವೇಷ ಸ್ಪರ್ಧೆ ನಡೆಯಲಿದ್ದು, ಹುಲಿ ವೇಷ ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೇರೆ ಬೇರೆ ಸ್ಪರ್ಧೆಗಳಲ್ಲಿ ಮಕ್ಕಳು ಮತ್ತು ಸ್ಥಳೀಯರು ಭಾಗವಹಿಸಲಿದ್ದಾರೆ.
ವಿಟ್ಲ ಪಿಂಡಿ ಉತ್ಸವದ ದಿನ ಮಠದ ಸುತ್ತಮುತ್ತ ಭಕ್ತರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಗರದಲ್ಲಿ ಹಬ್ಬದ ವಾತಾವರಣ ಇನ್ನಷ್ಟು ಗರಿಗೆದರಲಿದೆ. ಕೃಷ್ಣನ ಮೆರವಣಿಗೆ, ಸಾಂಪ್ರದಾಯಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ದೂರದ ಊರುಗಳಿಂದಲೂ ಜನರು ಆಗಮಿಸಲಿದ್ದಾರೆ.
ಸೆ.6ಕ್ಕೆ ಸಮಾರೋಪ; ಕೋಟಿ ತುಳಸಿ ಅರ್ಚನೆ
ಜನ್ಮಾಷ್ಟಮಿ ಹಾಗೂ ವಿಟ್ಲ ಪಿಂಡಿ ಉತ್ಸವದ ಕಾರ್ಯಕ್ರಮಗಳು ಸೆಪ್ಟೆಂಬರ್ 6ರಂದು ಸಮಾರೋಪಗೊಳ್ಳಲಿವೆ. ಅಂದು ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ. ಭಕ್ತರು ತುಳಸಿ ಅರ್ಪಿಸಿ ಕೃಷ್ಣನ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಅದೇ ದಿನ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಉತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ.
ಉಡುಪಿಯ ಕೃಷ್ಣ ಜನ್ಮಾಷ್ಟಮಿಯ ವಿಶೇಷತೆಯೇ ಧಾರ್ಮಿಕ ಆಚರಣೆ ಮತ್ತು ಸ್ಥಳೀಯ ಸಂಪ್ರದಾಯಗಳು ಒಂದಕ್ಕೊಂದು ಬೆಸೆದುಕೊಂಡಿರುವುದು. ಕೃಷ್ಣನ ಬಾಲ ವಿಗ್ರಹದ ದರ್ಶನದಿಂದ ಹಿಡಿದು ಕನಕನ ಕಿಂಡಿ, ವಿಟ್ಲ ಪಿಂಡಿ ಮೆರವಣಿಗೆ, ಮಲ್ಲಯುದ್ಧ, ಕೃಷ್ಣ ವೇಷ, ಹುಲಿ ವೇಷ ಹಾಗೂ ಪ್ರಸಾದ ವಿತರಣೆಯವರೆಗೆ ಹಲವು ಕಾರ್ಯಕ್ರಮಗಳು ಹಬ್ಬದ ಭಾಗವಾಗಿವೆ.
ಈ ಕಾರಣದಿಂದಲೇ ಉಡುಪಿಯ ಜನ್ಮಾಷ್ಟಮಿ ಪ್ರತಿವರ್ಷ ಭಕ್ತರನ್ನು ಸೆಳೆಯುತ್ತದೆ. ಈ ಬಾರಿಯೂ ಸೆಪ್ಟೆಂಬರ್ 4ರಿಂದ 6ರವರೆಗೆ ಉಡುಪಿ ಕೃಷ್ಣ ಮಠ ಮತ್ತು ಸುತ್ತಮುತ್ತ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಾತಾವರಣ ಇರಲಿದೆ.