ರಾಜಕೀಯಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರೋ ವಿಜಯ್, ಹಳೆಯ ದ್ರಾವಿಡ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರು ನೀಡಿರೋ ಜನಪ್ರಿಯ ಭರವಸೆಗಳು. ಸಾಮಾನ್ಯ ಜನರಿಗೆ, ರೈತರಿಗೆ ಮತ್ತು ಮುಖ್ಯವಾಗಿ ಮಹಿಳೆಯರಿಗೆ ವಿಜಯ್ ದೊಡ್ಡ ಮಟ್ಟದ ಆಫರ್‌ಗಳನ್ನು ಘೋಷಿಸಿದ್ದಾರೆ.
1. ಮಹಿಳೆಯರಿಗೆ ಮತ್ತು ಕುಟುಂಬಕ್ಕೆ ಆಸರೆ
ಮಹಿಳಾ ಮತದಾರರನ್ನು ಸೆಳೆಯಲು ವಿಜಯ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಮಾಸಿಕ ಸಹಾಯಧನ: ಪ್ರತಿ ಮಹಿಳೆಗೆ ತಿಂಗಳಿಗೆ 2,500 ರೂಪಾಯಿ ನೇರ ನಗದು ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ.
ಮದುವೆಗೆ ಚಿನ್ನ: ಬಡ ಕುಟುಂಬದ ಮಗಳ ಅಥವಾ ಸಹೋದರಿಯ ಮದುವೆಗೆ 8 ಗ್ರಾಂ ಚಿನ್ನ (ಒಂದು ಸವರನ್) ನೀಡುವ ಭರವಸೆ ನೀಡಿದ್ದಾರೆ.
ಬಡ್ಡಿರಹಿತ ಸಾಲ: ಮಹಿಳಾ ಸ್ವಸಹಾಯ ಗುಂಪುಗಳಿಗೆ (Self Help Groups) 5 ಲಕ್ಷ ರೂಪಾಯಿಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡುವ ಭರವಸೆ ನೀಡಿದ್ದಾರೆ.
2. ರೈತರು ಮತ್ತು ಸಮಾಜದ ದುರ್ಬಲ ವರ್ಗಕ್ಕೆ ಬೆಂಬಲ
ರೈತರ ಮನಗೆಲ್ಲಲು ವಿಜಯ್ ಸಾಲ ಮನ್ನಾದ ಅಸ್ತ್ರ ಬಳಸಿದ್ದಾರೆ.
ಸಾಲ ಮನ್ನಾ: ಸಣ್ಣ ಮತ್ತು ಅತಿಸಣ್ಣ ರೈತರ ಎಲ್ಲಾ ಬೆಳೆ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ.
ಮಾಸಿಕ ಭತ್ಯೆ: ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ನೀಡುವ ಮಾಸಿಕ ಭತ್ಯೆಯನ್ನು 3,000 ರೂಪಾಯಿಗೆ ಏರಿಸುವ ಭರವಸೆ ನೀಡಿದ್ದಾರೆ. ಇದು ಸಮಾಜದ ಕೆಳಹಂತದ ಜನರಿಗೆ ದೊಡ್ಡ ಆಸರೆಯಾಗಲಿದೆ.
3. ಉಚಿತ ವಿದ್ಯುತ್ ಮತ್ತು ಗ್ಯಾಸ್ ಸಿಲಿಂಡರ್
ಕರ್ನಾಟಕದಲ್ಲಿ ಕಾಂಗ್ರೆಸ್ ತಂದ ಗ್ಯಾರಂಟಿಗಳ ಮಾದರಿಯಲ್ಲೇ ವಿಜಯ್ ಕೂಡ ಕೆಲವು ಆಫರ್ ಕೊಟ್ಟಿದ್ದಾರೆ.
ಉಚಿತ ವಿದ್ಯುತ್: ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ.
LPG ಸಿಲಿಂಡರ್: ಪ್ರತಿ ವರ್ಷ ಬಡ ಕುಟುಂಬಗಳಿಗೆ 6 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ. ಇದು ಗೃಹಿಣಿಯರ ಪಾಲಿಗೆ ದೊಡ್ಡ ರಿಲೀಫ್.
ಶುದ್ಧ ನೀರು: ಪ್ರತಿ ಮನೆಗೂ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ವಾಗ್ದಾನ ಮಾಡಿದ್ದಾರೆ.
4. ನಿರುದ್ಯೋಗಿಗಳಿಗೆ ಮತ್ತು ಪದವೀಧರರಿಗೆ ಬಂಪರ್
ಯುವಕರು ವಿಜಯ್ ಅವರ ದೊಡ್ಡ ಶಕ್ತಿಯಾಗಿದ್ದಾರೆ. ಹಾಗಾಗಿ ಅವರಿಗಾಗಿಯೇ ವಿಶೇಷ ಭತ್ಯೆ ಘೋಷಿಸಲಾಗಿದೆ.
ಪದವೀಧರರಿಗೆ: ಪದವಿ ಮುಗಿಸಿ ಕೆಲಸವಿಲ್ಲದೆ ಇರುವವರಿಗೆ ತಿಂಗಳಿಗೆ 4,000 ರೂಪಾಯಿ ಭತ್ಯೆ.
ಡಿಪ್ಲೊಮಾ ವಿದ್ಯಾರ್ಥಿಗಳಿಗೆ: ಡಿಪ್ಲೊಮಾ ಮುಗಿಸಿದವರಿಗೆ ಮಾಸಿಕ 2,500 ರೂಪಾಯಿ ಸಹಾಯಧನ ನೀಡುವ ಭರವಸೆ ನೀಡಿದ್ದಾರೆ.
ವಿಜಯ್ ಅವರ ಈ ಭರವಸೆಗಳು ಬರೀ ಪೇಪರ್ ಮೇಲೆ ಇರುತ್ತವೋ ಅಥವಾ ಜಾರಿಗೆ ಬರ್ತವೋ ಅನ್ನೋದು ಎರಡನೇ ಮಾತು. ಆದರೆ ಸದ್ಯದ ಮಟ್ಟಿಗೆ ಈ 'ವಿಜಯ' ಸಂಕಲ್ಪಗಳು ತಮಿಳುನಾಡಿನ ಜನರ ಮನಗೆದ್ದಿವೆ ಅನ್ನೋದರಲ್ಲಿ ಸಂಶಯವಿಲ್ಲ. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಘಟಾನುಘಟಿ ಪಕ್ಷಗಳ ಎದುರು ವಿಜಯ್ ಏಕಾಂಗಿಯಾಗಿ ಇಷ್ಟು ದೊಡ್ಡ ಮಟ್ಟದ ಲೀಡ್ ಪಡೆಯಲು ಈ ಗ್ಯಾರಂಟಿಗಳೇ ಬಹುದೊಡ್ಡ ಕಾರಣ ಎನ್ನಲಾಗುತ್ತಿದೆ. ಒಂದು ವೇಳೆ ವಿಜಯ್ ಸಿಎಂ ಆದರೆ, ತಮಿಳುನಾಡು ನಿಜಕ್ಕೂ ಇಂತಹ ಆರ್ಥಿಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ!