ತುಮಕೂರು ಜಿಲ್ಲೆಯ ಆಡಳಿತಕ್ಕೆ ಮತ್ತೊಂದು ಹೆಮ್ಮೆ ತಂದುಕೊಟ್ಟ ಘಟನೆ ನಡೆದಿದೆ. ಚುನಾವಣಾ ಆಯೋಗವು ಅತ್ಯುತ್ತಮ ಚುನಾವಣಾ ಕಾರ್ಯನಿರ್ವಹಣೆಗೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಬೆಂಗಳೂರು ವಿಭಾಗದಿಂದ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಆಯ್ಕೆಯಾಗಿದ್ದಾರೆ. ಈ ಗೌರವವನ್ನು ಅವರು ಬೆಂಗಳೂರಿನಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರಧಾನ ಮಾಡಿ ಶುಭಕಲ್ಯಾಣ್ ಅವರ ಸಾಧನೆಯನ್ನು ಮೆಚ್ಚಿದರು.
ಇದು ಶುಭಕಲ್ಯಾಣ್ ಅವರಿಗೆ ಹೊಸ ಅನುಭವವಲ್ಲ. 2020ರಲ್ಲಿ ತುಮಕೂರು ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗಲೂ ಅವರು ಚುನಾವಣಾ ಆಯೋಗದಿಂದ ಇದೇ ರೀತಿಯ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಎರಡನೇ ಬಾರಿಗೆ ಈ ಗೌರವ ದೊರೆತಿರುವುದು ಅವರ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯ ಪ್ರತೀಕವಾಗಿದೆ.
ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಹಿನ್ನಲೆ ಈ ಪ್ರಶಸ್ತಿ ಲಭಿಸಿದೆ. ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಹೋದ್ಯೋಗಿಗಳ ಸಹಕಾರವೇ ಈ ಸಾಧನೆಗೆ ಕಾರಣ ಎಂದು ಶುಭಕಲ್ಯಾಣ್ ಅವರು ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
ಅವರು ತಮ್ಮ ಮಾತಿನಲ್ಲಿ, “ಈ ಪ್ರಶಸ್ತಿ ನನಗೆ ಮಾತ್ರವಲ್ಲ, ನಮ್ಮ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಲ್ಲುತ್ತದೆ. ಅವರ ಶ್ರಮ, ನಿಷ್ಠೆ ಮತ್ತು ತಂಡದ ಮನೋಭಾವದಿಂದಲೇ ನಾವು ಈ ಗೌರವವನ್ನು ಗಳಿಸಿದ್ದೇವೆ” ಎಂದು ಹೇಳಿದರು.
ಲಕ್ಷಾಂತರ ಮತದಾರರ ಹಕ್ಕುಗಳನ್ನು ಕಾಪಾಡುವ ಕಾರ್ಯದಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಹಾಗೂ ಜನರ ವಿಶ್ವಾಸವನ್ನು ಉಳಿಸುವಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಸಾಧನೆ ರಾಜ್ಯದ ಇತರ ಜಿಲ್ಲಾಧಿಕಾರಿಗಳಿಗೆ ಮಾದರಿಯಾಗಿದೆ. ಒಟ್ಟಾರೆ, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ದೊರೆತಿರುವ ಈ ಪ್ರಶಸ್ತಿ, ಉತ್ತಮ ಆಡಳಿತ, ಶ್ರದ್ಧೆ ಮತ್ತು ಜನಪರ ಸೇವೆಯ ಪ್ರತೀಕವಾಗಿ ಪರಿಣಮಿಸಿದೆ. ಇದು ತುಮಕೂರು ಜಿಲ್ಲೆಯ ಹೆಮ್ಮೆ ಹೆಚ್ಚಿಸುವಂತಾಗಿದೆ.