Feb 16, 2026 Languages : ಕನ್ನಡ | English

ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದ ಜಿ. ಪರಮೇಶ್ವರ್ - ಲಕ್ಷಾಂತರ ಭಕ್ತರ ಸಂಭ್ರಮ!!

ನಾಡಿನಾದ್ಯಂತ ರಥಸಪ್ತಮಿ ಸಂಭ್ರಮದ ಆಚರಣೆ ನಡೆಯುತ್ತಿರುವ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಅದ್ದೂರಿಯಾಗಿ ರಥೋತ್ಸವ ನೆರವೇರಿತು. ಈ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಆಗಮಿಸಿ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.

ತುಮಕೂರು, ಕೊರಟಗೆರೆ ಸೇರಿದಂತೆ ನಾಡಿನ ಹಲವೆಡೆಯಿಂದ ಭಕ್ತರ ಆಗಮನ
ತುಮಕೂರು, ಕೊರಟಗೆರೆ ಸೇರಿದಂತೆ ನಾಡಿನ ಹಲವೆಡೆಯಿಂದ ಭಕ್ತರ ಆಗಮನ

ರಥೋತ್ಸವದ ಆರಂಭ ಗರುಡ ಪಕ್ಷಿಯ ಪ್ರದಕ್ಷಿಣೆಯೊಂದಿಗೆ ಶಾಸ್ತ್ರೋಕ್ತ ವಿಧಿ ವಿಧಾನಗಳ ಮೂಲಕ ನೆರವೇರಿತು. ಈ ಸಂದರ್ಭದಲ್ಲಿ ಸಚಿವರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನತೆಗೆ ಸುಖ-ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕರು ಡಾ. ಜಿ. ಪರಮೇಶ್ವರ್ ಅವರಿಗೆ ಇನ್ನೂ ಉನ್ನತ ಸ್ಥಾನ ಲಭಿಸಲಿ ಎಂದು ಆಶೀರ್ವಾದ ನೀಡಿದರು.

ಲಕ್ಷಾಂತರ ಭಕ್ತರ ಜಯಘೋಷ, ಮಂಗಳವಾದ್ಯಗಳ ಸದ್ದು, ಭಜನೆ-ಕೀರ್ತನೆಗಳ ನಡುವೆ ಆಂಜನೇಯ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಭಕ್ತರು ರಥವನ್ನು ಎಳೆಯುವಾಗ ಉತ್ಸಾಹದಿಂದ "ಜೈ ಆಂಜನೇಯ" ಘೋಷಣೆ ಕೂಗಿದ ದೃಶ್ಯ ಕಂಡು ಬಂದಿತು. ಈ ದೃಶ್ಯವು ಭಕ್ತರ ಭಕ್ತಿ, ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕವಾಗಿ ಪರಿಣಮಿಸಿತು.

ತುಮಕೂರು, ಕೊರಟಗೆರೆ ಸೇರಿದಂತೆ ನಾಡಿನ ಹಲವೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತೆಯ ಅನುಭವ ಪಡೆದರು. ಕುಟುಂಬ ಸಮೇತರಾಗಿ ಬಂದ ಭಕ್ತರು ದೇವರ ದರ್ಶನ ಪಡೆದು, ರಥೋತ್ಸವದ ಸಂಭ್ರಮದಲ್ಲಿ ತೊಡಗಿಕೊಂಡರು. ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಒಂದೇ ಉತ್ಸಾಹದಲ್ಲಿ ಭಾಗವಹಿಸಿ, ಹಬ್ಬದ ವಾತಾವರಣವನ್ನು ಇನ್ನಷ್ಟು ಕಂಗೊಳಿಸಿದರು. 

Latest News