Feb 16, 2026 Languages : ಕನ್ನಡ | English

ಇಷ್ಟರಲ್ಲೇ ಅಂಗನವಾಡಿ ಮಕ್ಕಳಿಗೆ ಈ ಭಾಗ್ಯ ಸಿಗಲಿದೆ ಎಂದ ಮಾಜಿ ಸಚಿವ ಕೆ.ಎನ್. ರಾಜಣ್ಣ - ಹೇಳಿದ್ದೇನು?

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮಕ್ಕಳ ಭವಿಷ್ಯದ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನು ಹೇಳಿದರು. ಅವರು “ಇನ್ಮುಂದೆ ಅಂಗನವಾಡಿ ಮಕ್ಕಳಿಗೂ ಶೂ ಹಾಗೂ ಬಟ್ಟೆ ಭಾಗ್ಯ ಕೊಡಬೇಕು” ಎಂದು ಭರವಸೆ ನೀಡಿದರು. ಹೌದು ರಾಜಣ್ಣ ಅವರು ತಮ್ಮ ಅನುಭವವನ್ನು ಹಂಚಿಕೊಂಡು, “ಇವತ್ತು ನಾನು ಅಂಗನವಾಡಿಗೆ ಹೋಗಿದ್ದೆ. ಅಲ್ಲಿ ಮಕ್ಕಳಿಗೆ ಸರಿಯಾಗಿ ಬಟ್ಟೆ ಹಾಗೂ ಚಪ್ಪಲಿ ಇಲ್ಲದೆ ಇದ್ದದ್ದು ನನ್ನ ಮನಸ್ಸಿಗೆ ನೋವು ತಂದಿತು” ಎಂದು ಹೇಳಿದರು. ಅವರು ತಕ್ಷಣವೇ ಸಿಡಿಪಿಒ ಅಧಿಕಾರಿಯನ್ನು ವಿಚಾರಿಸಿದಾಗ, “ಸರ್, ಅಂಗನವಾಡಿ ಮಕ್ಕಳಿಗೆ ಬಟ್ಟೆ, ಶೂ ಎಲ್ಲವೂ ಕೊಡ್ತಿಲ್ಲ” ಎಂಬ ಉತ್ತರ ಬಂದಿತೆಂದು ವಿವರಿಸಿದರು.

ಅಂಗನವಾಡಿ ಮಕ್ಕಳಿಗೆ ಶೂ ಹಾಗೂ ಯೂನಿಫಾರ್ಮ್ ಭಾಗ್ಯ – ರಾಜಣ್ಣ ಭರವಸೆ
ಅಂಗನವಾಡಿ ಮಕ್ಕಳಿಗೆ ಶೂ ಹಾಗೂ ಯೂನಿಫಾರ್ಮ್ ಭಾಗ್ಯ – ರಾಜಣ್ಣ ಭರವಸೆ

ಮಕ್ಕಳಲ್ಲಿ ಸಮಾನತೆ ಬರಬೇಕೆಂಬ ಉದ್ದೇಶದಿಂದ ಯೂನಿಫಾರ್ಮ್ ನೀಡಬೇಕಾದರೂ, ಸರ್ಕಾರದಿಂದ ಅದು ಇನ್ನೂ ಜಾರಿಯಾಗಿಲ್ಲ ಎಂಬುದನ್ನು ಅವರು ಖಂಡಿಸಿದರು. “ತತ್‌ಕ್ಷಣದಲ್ಲಿ ನಮ್ಮ ತಾಲೂಕಿನಲ್ಲಿ ವ್ಯವಸ್ಥೆ ಮಾಡೋಣ ಎಂದು ಎಸಿಯವರ ಜೊತೆ ಮಾತಾಡಿದ್ದೇನೆ” ಎಂದು ಅವರು ಭರವಸೆ ನೀಡಿದರು. ರಾಜಣ್ಣ ಅವರು ಬಜೆಟ್ ಸಮಯದಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು, ಅಂಗನವಾಡಿ ಮಕ್ಕಳಿಗೂ ಯೂನಿಫಾರ್ಮ್ ಹಾಗೂ ಒಳ್ಳೆಯ ಪಾದರಕ್ಷೆಗಳನ್ನು ಕೊಡಿಸುವಂತೆ ಸರ್ಕಾರವನ್ನು ಮನವರಿಕೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. “ಅದೇನಾದ್ರೂ ತಡವಾದರೆ ನಮ್ಮ ಕ್ಷೇತ್ರದಲ್ಲಿ ಅದನ್ನು ಜಾರಿ ಮಾಡ್ತಿವಿ. ಬೇರೆ ಎಲ್ಲಾದ್ರೂ ಹಣವನ್ನು ಕ್ರೋಡಿಕರಿಸಿ ತತಕ್ಷಣ ಜಾರಿ ಮಾಡ್ಸೊಣ” ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೆ ಮಿಡಿಗೇಶಿಯಲ್ಲಿ ಶೂ ಭಾಗ್ಯ ಯೋಜನೆಯನ್ನು ಅನಾವರಣಗೊಳಿಸಿದ್ದನ್ನು ನೆನಪಿಸಿದ ಅವರು, “ಸಿಎಂ ಸಿದ್ದರಾಮಯ್ಯ ಮಧುಗಿರಿಯಲ್ಲಿ ಶೂ ಭಾಗ್ಯಕ್ಕೆ ಚಾಲನೆ ನೀಡಿದ್ದರು. ಈಗ ಮತ್ತೊಂದು ಭಾಗ್ಯಕ್ಕಾಗಿ ಅವರನ್ನು ಓಲೈಸುತ್ತೇನೆ” ಎಂದು ಹೇಳಿದರು. ಈ ಹೇಳಿಕೆ ಕೇವಲ ರಾಜಕೀಯ ಭರವಸೆ ಅಲ್ಲ, ಅದು ಮಕ್ಕಳ ಭವಿಷ್ಯದ ಬಗ್ಗೆ ಮಾನವೀಯ ಕಾಳಜಿಯನ್ನು ತೋರಿಸುತ್ತದೆ. ಬಟ್ಟೆ ಮತ್ತು ಪಾದರಕ್ಷೆ ಎಂಬ ಸಣ್ಣ ವಿಷಯವು ಮಕ್ಕಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು. ಶಾಲೆಗೆ ಅಥವಾ ಅಂಗನವಾಡಿಗೆ ಸಮಾನವಾಗಿ ಬಟ್ಟೆ ಧರಿಸಿ, ಚಪ್ಪಲಿ ಹಾಕಿಕೊಂಡು ಬರುವ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ರಾಜಣ್ಣ ಅವರ ಮಾತುಗಳು ಜನಮನದಲ್ಲಿ ಸ್ಪಂದನೆ ಮೂಡಿಸಿದ್ದು, “ಮಕ್ಕಳಿಗೆ ಸಮಾನತೆ, ಗೌರವ, ಮತ್ತು ಆರಾಮ ನೀಡುವುದು ನಮ್ಮ ಕರ್ತವ್ಯ” ಎಂಬ ಸಂದೇಶವನ್ನು ಹರಡಿವೆ. ಈ ಭರವಸೆ, ಸಮಾಜದಲ್ಲಿ ಮಕ್ಕಳ ಹಕ್ಕುಗಳನ್ನು ಕಾಪಾಡುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. 

Latest News