ಸಿಎಂ ವಿಜಯ್‌ಗೆ ಭರ್ಜರಿ ಗಿಫ್ಟ್ ಕೊಟ್ಟ 'GOAT' ಡೈರೆಕ್ಟರ್ - 2024ರಲ್ಲೇ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿದ್ರಾ ವೆಂಕಟ್ ಪ್ರಭು?

ದಳಪತಿ ವಿಜಯ್ ಅಂದ್ರೆ ಸದ್ಯ ಇಡೀ ಸೌತ್ ಇಂಡಿಯಾದಲ್ಲೇ ಬಿಗ್ ಸೆನ್ಸೇಷನ್. ಸಿನಿಮಾ ಸ್ಟಾರ್ ಆಗಿದ್ದ ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ವಿಜಯ್ ಅವರ ಸಿನಿಕರಿಯರ್‌ನ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ 'GOAT' (Greatest Of All Time) ಸಿನಿಮಾ ಕೂಡ ಒಂದು. ಈಗ ಈ ಸಿನಿಮಾದ ಡೈರೆಕ್ಟರ್ ವೆಂಕಟ್ ಪ್ರಭು ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ನೇರವಾಗಿ ಭೇಟಿಯಾಗಿ ಒಂದು ಇಂಟರೆಸ್ಟಿಂಗ್ ಗಿಫ್ಟ್ ನೀಡಿದ್ದಾರೆ. ಆ ಗಿಫ್ಟ್ ಬೇರೇನೂ ಅಲ್ಲ, 'GOAT' ಸಿನಿಮಾದಲ್ಲಿ ವಿಜಯ್ ಓಡಿಸಿದ್ದ ಕಾರಿನ 'TN07 CM 2026' ಅನ್ನೋ ನಂಬರ್ ಪ್ಲೇಟ್! ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದ್ದು, ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

2024ರ 'GOAT' ಸಿನಿಮಾದಲ್ಲೇ ಇತ್ತು 2026ರ ರಾಜಕೀಯ ಭವಿಷ್ಯ | Photo Credit: https://www.instagram.com/tark.india/
2024ರ 'GOAT' ಸಿನಿಮಾದಲ್ಲೇ ಇತ್ತು 2026ರ ರಾಜಕೀಯ ಭವಿಷ್ಯ | Photo Credit: https://www.instagram.com/tark.india/

2024ರ ಸಿನಿಮಾದಲ್ಲಿ 2026ರ ರಾಜಕೀಯ ಭವಿಷ್ಯ!

ಕಳೆದ 2024ರಲ್ಲಿ ತೆರೆಕಂಡ 'GOAT' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ ಒಂದು ಸೀನಲ್ಲಿ ವಿಜಯ್ ಅವರು ಒಂದು ಕಾರನ್ನು ಡ್ರೈವ್ ಮಾಡಿಕೊಂಡು ಬರ್ತಾರೆ. ಆ ಕಾರಿನ ನಂಬರ್ ಪ್ಲೇಟ್ ಮೇಲೆ 'TN07 CM 2026' ಅಂತ ಬರೆಯಲಾಗಿತ್ತು. ಸಿನಿಮಾ ರಿಲೀಸ್ ಆದಾಗ ಫ್ಯಾನ್ಸ್ ಇದನ್ನ ನೋಡಿ ಖುಷಿ ಪಟ್ಟಿದ್ದರು.

ಆದ್ರೆ ಈಗ ನಿಜ ಜೀವನದಲ್ಲೂ ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಕೂತಿರೋದ್ರಿಂದ, ಆ ನಂಬರ್ ಪ್ಲೇಟ್‌ಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. "ವೆಂಕಟ್ ಪ್ರಭು ಅವರು ವಿಜಯ್ ಸಿಎಂ ಆಗ್ತಾರೆ ಅನ್ನೋ ಭವಿಷ್ಯವನ್ನು 2024ರಲ್ಲೇ ಗೆಸ್ ಮಾಡಿದ್ರಾ?" ಅಂತ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತಲೆ ಕೆಡಿಸಿಕೊಳ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ವೆಂಕಟ್ ಪ್ರಭು

ಇತ್ತೀಚೆಗಷ್ಟೇ ಸಿಎಂ ವಿಜಯ್ ಅವರನ್ನು ಆಫೀಸ್‌ನಲ್ಲಿ ಮೀಟ್ ಮಾಡಿದ ಡೈರೆಕ್ಟರ್ ವೆಂಕಟ್ ಪ್ರಭು, ಶೂಟಿಂಗ್‌ನಲ್ಲಿ ಬಳಸಿದ್ದ ಅದೇ ಒರಿಜಿನಲ್ ನಂಬರ್ ಪ್ಲೇಟ್ ಅನ್ನು ಫ್ರೇಮ್ ಮಾಡಿಸಿ ವಿಜಯ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಡೈರೆಕ್ಟರ್ ಏನಂದ್ರು?: ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿರೋ ವೆಂಕಟ್ ಪ್ರಭು, "ಕೊನೆಗೂ ಒಂದು ಇತಿಹಾಸ ಸೃಷ್ಟಿಯಾಗಿದೆ! ಅಂದು ಕೇವಲ ಒಂದು ಸಣ್ಣ ಆಲೋಚನೆಯಾಗಿದ್ದ ವಿಷಯ, ಇಂದು ಕಣ್ಣಮುಂದೆ ನಿಜವಾಗಿರೋದನ್ನ ನೋಡ್ತಾ ಇದ್ರೆ ಆಶ್ಚರ್ಯ ಆಗ್ತಿದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ವಿಜಯ್ ಸರ್ ಅವರನ್ನು ಭೇಟಿಯಾಗಿ, 'GOAT' ಸಿನಿಮಾದಲ್ಲಿದ್ದ ಮೊದಲ ರಾಜಕೀಯ ಸಂಕೇತದ ನಂಬರ್ ಪ್ಲೇಟ್ ಅನ್ನು ಗಿಫ್ಟ್ ಆಗಿ ನೀಡಲು ಹೆಮ್ಮೆಯಾಗುತ್ತಿದೆ" ಅಂತ ಸಖತ್ ಖುಷಿಯಿಂದ ಬರೆದುಕೊಂಡಿದ್ದಾರೆ.

ಕಮೆಂಟ್ ಬಾಕ್ಸ್‌ನಲ್ಲಿ ಫ್ಯಾನ್ಸ್ ಫುಲ್ ಖುಷ್

ಸಿನಿಮಾದಲ್ಲಿ ಬಂದ ಒಂದು ಸಣ್ಣ ಸೀನ್ ಈಗ ವಿಜಯ್ ಅವರ ರಿಯಲ್ ಲೈಫ್ ರಾಜಕೀಯ ಬೆಳವಣಿಗೆಯ ನಂತರ ಸಂಪೂರ್ಣ ಹೊಸ ಅರ್ಥ ಪಡೆದುಕೊಂಡಿದೆ. ವಿಜಯ್ ಅವರ ಇತ್ತೀಚಿನ ಭರ್ಜರಿ ರಾಜಕೀಯ ಎಂಟ್ರಿ ಮತ್ತು ಗೆಲುವನ್ನು ನೋಡಿರೋ ತಮಿಳುನಾಡು ಜನ ಹಾಗೂ ಅಭಿಮಾನಿಗಳು ವೆಂಕಟ್ ಪ್ರಭು ಅವರ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್ ಹೇಳ್ತಿದ್ದಾರೆ. ಕೆಲವರಂತೂ ತಮಾಷೆಯಾಗಿ "ವೆಂಕಟ್ ಪ್ರಭು ಅವರೇ, ಮುಂದಿನ ಎಲೆಕ್ಷನ್ ರಿಸಲ್ಟ್ ಏನಾಗುತ್ತೆ ಅಂತ ಈಗಲೇ ಒಂದು ಭವಿಷ್ಯ ನುಡಿದುಬಿಡಿ" ಅಂತ ಕಾಲೆಳಿತಿದ್ದಾರೆ.

ದ್ವಿಪಾತ್ರದಲ್ಲಿ ಅಬ್ಬರಿಸಿದ್ದ ದಳಪತಿ ವಿಜಯ್

ಅಂದಹಾಗೆ, ಬಿಗ್ ಬಜೆಟ್‌ನಲ್ಲಿ ಮೂಡಿಬಂದಿದ್ದ 'GOAT' ಸಿನಿಮಾದಲ್ಲಿ ದಳಪತಿ ವಿಜಯ್ ಅವರು ಅಪ್ಪ-ಮಗನಾಗಿ ದ್ವಿಪಾತ್ರದಲ್ಲಿ (Double Role) ನಟಿಸಿ ಅಬ್ಬರಿಸಿದ್ದರು. ಇವರ ಜೊತೆಗೆ ಸೌತ್ ಇಂಡಿಯಾದ ಸ್ಟಾರ್ ನಟರಾದ ಪ್ರಭುದೇವ, ಪ್ರಶಾಂತ್, ಅಜ್ಮಲ್ ಅಮೀರ್, ಜಯರಾಮ್ ಹಾಗೂ ನಟಿ ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಯುವನ್ ಶಂಕರ್ ರಾಜಾ ಅವರ ಮ್ಯೂಸಿಕ್ ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.

Latest News