Apr 5, 2026 Languages : ಕನ್ನಡ | English

ಬೆಂಗಳೂರಿನಿಂದ ಅಸ್ಸಾಂಗೆ ಹೋದ ತೇಜಸ್ವಿ ಸೂರ್ಯ ಕಂಡ ಬದಲಾವಣೆಗಳೇನು? ಶಿಕ್ಷಣದ ಹೊಸ ಕಾಶಿಯ ಕಥೆ ಇಲ್ಲಿದೆ!!

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಜೊತೆಗೆ ಅಸ್ಸಾಂನಲ್ಲಿಯೂ ಪ್ರಚಾರದ ಅಬ್ಬರ ಜೋರಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಕೂಡ ಬೇರೆ ಬೇರೆ ರಾಜ್ಯಗಳಲ್ಲಿ ಬೀಡುಬಿಟ್ಟು ಮತಬೇಟೆ ನಡೆಸುತ್ತಿದ್ದಾರೆ. ಸದ್ಯ ಅಸ್ಸಾಂನಲ್ಲಿ ಪ್ರಚಾರ ನಡೆಸುತ್ತಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಅಲ್ಲಿನ ಬದಲಾವಣೆಗಳ ಬಗ್ಗೆ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗ್ತಿದೆ.

1.6 ಲಕ್ಷ ಸರ್ಕಾರಿ ಉದ್ಯೋಗ ಮತ್ತು ಪಾರದರ್ಶಕತೆ
1.6 ಲಕ್ಷ ಸರ್ಕಾರಿ ಉದ್ಯೋಗ ಮತ್ತು ಪಾರದರ್ಶಕತೆ

ತೇಜಸ್ವಿ ಸೂರ್ಯ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಆಸಕ್ತಿದಾಯಕ ವಿಷಯ ಹಂಚಿಕೊಂಡಿದ್ದಾರೆ. "ನಾನು ಬೆಂಗಳೂರಿನಲ್ಲಿ ಓದುತ್ತಿದ್ದಾಗ ಅಸ್ಸಾಂನಿಂದ ಬಹಳಷ್ಟು ವಿದ್ಯಾರ್ಥಿಗಳು ಅಲ್ಲಿಗೆ ಬರುತ್ತಿದ್ದರು. ಯಾಕಂದ್ರೆ ಅಸ್ಸಾಂನಲ್ಲಿ ಆಗ ಉನ್ನತ ಶಿಕ್ಷಣಕ್ಕೆ ಸರಿಯಾದ ಅವಕಾಶಗಳಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಅಸ್ಸಾಂನಲ್ಲೇ ಈಗ ಐಐಟಿ (IIT), ಐಐಎಂ (IIM) ಮತ್ತು ಹೊಸ ವೈದ್ಯಕೀಯ ಕಾಲೇಜುಗಳು ತಲೆ ಎತ್ತಿವೆ. ಹೀಗಾಗಿ ಅಸ್ಸಾಮಿಗರು ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ಈಗ ಬಹಳ ಕಡಿಮೆಯಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂ ಈಗ ಈಶಾನ್ಯ ಭಾರತದ ಕೇವಲ ಒಂದು ರಾಜ್ಯವಾಗಿ ಉಳಿದಿಲ್ಲ, ಅದು ಇಡೀ ಈಶಾನ್ಯ ಭಾಗದ 'ಶಿಕ್ಷಣ ಕೇಂದ್ರ'ವಾಗಿ ಹೊರಹೊಮ್ಮುತ್ತಿದೆ ಎಂಬುದು ಅವರ ವಾದ.

ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂನ ಚಿತ್ರಣವೇ ಬದಲಾಗಿದೆ ಎಂದ ಸೂರ್ಯ, "ಒಂದು ಕಾಲದಲ್ಲಿ ದಂಗೆ ಮತ್ತು ಹೋರಾಟಗಳಿಗೆ ಹೆಸರಾಗಿದ್ದ ಅಸ್ಸಾಂ, ಇಂದು ಉದ್ಯಮ ಮತ್ತು ಉದ್ಯೋಗದ ಹಾದಿಯಲ್ಲಿ ಸಾಗುತ್ತಿದೆ. ಪಾರದರ್ಶಕ ವ್ಯವಸ್ಥೆಯ ಮೂಲಕ ಸುಮಾರು 1.6 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಲಕ್ಷಾಂತರ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ" ಎಂದು ಮೋದಿ ಮತ್ತು ಹಿಮಂತ ಬಿಸ್ವಾ ಶರ್ಮಾ ಜೋಡಿಯ ಕೆಲಸವನ್ನು ಕೊಂಡಾಡಿದ್ದಾರೆ.

ಮಹಿಳೆಯರೇ ಬಿಜೆಪಿಯ ಬೆನ್ನೆಲುಬು!

ಅಸ್ಸಾಂನಲ್ಲಿ ಬಿಜೆಪಿಗೆ ಮಹಿಳೆಯರಿಂದ ದೊಡ್ಡ ಮಟ್ಟದ ಬೆಂಬಲ ಸಿಗುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣಗಳು ಹೀಗಿವೆ:

ಉನ್ನತ ಶಿಕ್ಷಣಕ್ಕೆ ಬೆಂಬಲ: ಸುಮಾರು 5.5 ಲಕ್ಷ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸರ್ಕಾರ ನೆರವು ನೀಡಿದೆ.

ಮಹಿಳಾ ಉದ್ಯಮಶೀಲತೆ: 'ಮುಖ್ಯಮಂತ್ರಿ ಮಹಿಳಾ ಉದ್ಯಮಿತಾ ಅಭಿಯಾನ'ದ ಅಡಿಯಲ್ಲಿ 30 ಲಕ್ಷ ಮಹಿಳೆಯರಿಗೆ ತಲಾ 2.1 ಲಕ್ಷ ರೂ. ಪ್ರೋತ್ಸಾಹಧನ ನೀಡಿ ಸ್ವಂತ ಉದ್ಯೋಗ ಮಾಡಲು ದಾರಿ ಮಾಡಿಕೊಡಲಾಗಿದೆ.

ಈ ಕಾರಣಗಳಿಂದಾಗಿ ಅಸ್ಸಾಂನ ಮಹಿಳೆಯರು ಬಿಜೆಪಿಯನ್ನು ದೃಢವಾಗಿ ಬೆಂಬಲಿಸುತ್ತಿದ್ದಾರೆ ಎಂಬುದು ಅವರ ಆಂಬೋಣ.

ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕೆ ಮಾಡಿದ ಅವರು, "ದಶಕಗಳ ಕಾಲ ಕಾಂಗ್ರೆಸ್ ನಡೆಸಿದ ವಂಶಪಾರಂಪರ್ಯ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಹಳ್ಳಿ ಇರಲಿ ಅಥವಾ ನಗರ ಇರಲಿ, ಅಸ್ಸಾಂನಲ್ಲಿ ಈಗ ಕಮಲದ ಅಲೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಸ್ಸಾಂನ ಜನರು ಕಾಂಗ್ರೆಸ್‌ಗೆ ಮತ್ತೊಂದು ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest News