ಅ*ತ್ಯಾಚಾರ ಪ್ರಕರಣದ ಸುದ್ದಿಗೋಷ್ಠಿಯಲ್ಲೇ ನಕ್ಕಿದ್ದ ಅಧಿಕಾರಿ - ವಿಡಿಯೋ ವೈರಲ್ ಆಗ್ತಿದ್ದಂಗೆ ಸಿಎಂ ವಿಜಯ್ ಮಾಡಿದ್ದೇನು?

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸುಲೂರ್‌ನಲ್ಲಿ ನಡೆದ ಐದನೇ ತರಗತಿಯ ಪುಟಾಣಿ ಬಾಲಕಿಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣ ದೇಶಾದ್ಯಂತ ದೊಡ್ಡ ಕಿಚ್ಚು ಹೊತ್ತಿಸಿದೆ. ಆದರೆ, ಇಂತಹ ಅತ್ಯಂತ ಸೂಕ್ಷ್ಮ ಹಾಗೂ ಕಣ್ಣೀರು ತರಿಸುವ ಘಟನೆಯ ತನಿಖೆಯ ವಿವರ ನೀಡಲು ಕರೆದಿದ್ದ ಪ್ರೆಸ್ ಮೀಟ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಜಾಲಿಯಾಗಿ ನಗುತ್ತಾ ಹರಟೆ ಹೊಡೆದಿರುವ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಈ ನಡೆ ಇಡೀ ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದೆ.

ಸುಲೂರ್ ಪ್ರಕರಣದ ಪ್ರೆಸ್ ಮೀಟ್ ವಿವಾದ; | Photo Credit: https://x.com/JaipurDialogues
ಸುಲೂರ್ ಪ್ರಕರಣದ ಪ್ರೆಸ್ ಮೀಟ್ ವಿವಾದ; | Photo Credit: https://x.com/JaipurDialogues

ಮೃಗಗಳ ಅಟ್ಟಹಾಸಕ್ಕೆ ಬಲಿಯಾಗಿದ್ದ ಶಾಲಾ ಬಾಲಕಿ;

ಕಳೆದ ಮೇ 21 ರಂದು ಸುಲೂರ್‌ನಿಂದ ನಾಪತ್ತೆಯಾಗಿದ್ದ 5ನೇ ತರಗತಿಯ ಶಾಲಾ ಬಾಲಕಿಯ ಶ-ವ ಹತ್ತಿರದ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿತ್ತು. ವೈದ್ಯಕೀಯ ತಪಾಸಣೆಯ ವೇಳೆ ಆ ಪುಟ್ಟ ಮಗುವಿನ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ನಡೆಸಿ, ಬಳಿಕ ಕೊ-ಲೆ ಮಾಡಿರುವುದು ದೃಢಪಟ್ಟಿತ್ತು. ಈ ಕ್ರೂರ ಕೃತ್ಯದ ವಿರುದ್ಧ ಇಡೀ ರಾಜ್ಯವೇ ಸಿಡಿದೆದ್ದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಆ್ಯಕ್ಷನ್‌ಗೆ ಇಳಿದು ಇಬ್ಬರು ಪ್ರಮುಖ ಆರೋಪಿಗಳನ್ನು ಕರಾರುವಕ್ಕಾಗಿ ಅರೆಸ್ಟ್ ಮಾಡಿದ್ದರು. ಆದರೆ, ಈ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಪ್ರೆಸ್ ಮೀಟ್‌ನಲ್ಲಿ ಮಾಡಿದ ಒಂದು ಎಡವಟ್ಟು ಜನಾಕ್ರೋಶಕ್ಕೆ ಕಾರಣವಾಗಿದೆ.

ಮೈಕ್ ಆನ್ ಆಗುವ ಮುನ್ನ ಗಾಂಭೀರ್ಯ ಮರೆತ ಅಧಿಕಾರಿಗಳು!

ಆರೋಪಿಗಳ ಬಂಧನದ ಕಂಪ್ಲೀಟ್ ಡಿಟೇಲ್ಸ್ ನೀಡಲು ಮೇ 25 ರಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಧಿಕೃತ ಸುದ್ದಿಗೋಷ್ಠಿ ಆಯೋಜಿಸಿದ್ದರು. ವೆಸ್ಟ್ ಝೋನ್ ಐಜಿ ಆರ್.ವಿ. ರಮ್ಯಾ ಭಾರತಿ ಹಾಗೂ ಅವರ ಇಬ್ಬರು ಸಹೋದ್ಯೋಗಿ ಅಧಿಕಾರಿಗಳು ವೇದಿಕೆ ಮೇಲೆ ಬಂದು ಕುಳಿತಿದ್ದರು.

ಆದರೆ, ಪ್ರೆಸ್ ಮೀಟ್ ಅಧಿಕೃತವಾಗಿ ಶುರುವಾಗುವ ಮುನ್ನ, ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳು ಆನ್ ಆಗಿಲ್ಲ ಎಂಬ ಭ್ರಮೆಯಲ್ಲಿದ್ದ ಅಧಿಕಾರಿಗಳು ಯಾವುದೇ ಗಿಲ್ಟ್ ಇಲ್ಲದೆ ಸಖತ್ ಕೂಲ್ ಆಗಿ ನಗುತ್ತಾ, ಜೋಕ್ ಮಾಡುತ್ತಾ ಹರಟೆ ಹೊಡೆಯುತ್ತಿರುವುದು ಕ್ಯಾಮೆರಾದಲ್ಲಿ ಲೈವ್ ಆಗಿ ರೆಕಾರ್ಡ್ ಆಗಿದೆ. ಒಂದು ಕಡೆ ಹೆಣ್ಣುಮಗಳನ್ನು ಕಳೆದುಕೊಂಡ ಹೆತ್ತವರ ರೋದನ ಮುಗಿಲು ಮುಟ್ಟಿದ್ದರೆ, ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳು ಇಷ್ಟು ಹಗುರವಾಗಿ ನಗಲು ಹೇಗೆ ಸಾಧ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆನ್‌ಲೈನ್ ವಾರ್!

ಈ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಪ್ರಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಸೇರಿದಂತೆ ದೇಶದ ಹಲವು ಗಣ್ಯರು ಪೊಲೀಸರ ಈ ನಗುವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಧಿಕಾರಿಗಳಿಗೆ ಉತ್ತರದಾಯಿತ್ವ ಮತ್ತು ಮಾನವೀಯತೆ ಇರಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ, ಇದೇ ಸಮಯದಲ್ಲಿ ಕೆಲವರು ಪೊಲೀಸರ ಪರವಾಗಿಯೂ ಕಮೆಂಟ್ ಮಾಡುತ್ತಿದ್ದಾರೆ. "ಪ್ರೆಸ್ ಮೀಟ್ ಅಧಿಕೃತವಾಗಿ ಆರಂಭವಾಗುವ ಮುನ್ನ ನಡೆದ ಸಹಜ ಮಾತುಕತೆಯದ್ದಾಗಿದೆ. ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ, ಅದನ್ನಷ್ಟೇ ನೋಡಿ" ಎಂದು ಕೆಲ ನೆಟ್ಟಿಗರು ಪೊಲೀಸರ ಬೆಂಬಲಕ್ಕೆ ನಿಂತಿದ್ದಾರೆ.

ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಫುಲ್ ಗರಂ!

ವಿಶ್ವಾಸನೀಯ ಮೂಲಗಳ ಪ್ರಕಾರ, ಈ ವಿಡಿಯೋ ರಾಜಕೀಯ ವಲಯದಲ್ಲೂ ದೊಡ್ಡ ಬಿರುಗಾಳಿ ಎಬ್ಬಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿದ್ದು, ಹಿರಿಯ ಅಧಿಕಾರಿಗಳ ಈ ಬೇಜವಾಬ್ದಾರಿ ನಡವಳಿಕೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಸದ್ಯ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಇಲಾಖೆಯ ಶಿಸ್ತಿನ ಕುರಿತು ಸಿಎಂ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯಕ್ಕೆ, ಇಬ್ಬರೂ ಆರೋಪಿಗಳು ಕಸ್ಟಡಿಯಲ್ಲಿದ್ದು ಮುಂದಿನ ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ. 

Latest News