ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಸ್ವಿಗ್ಗಿ, ಜೊಮ್ಯಾಟೊ ಬಂದ್? ಹೋಟೆಲ್ ಸಂಘದಿಂದ ಡೆಲಿವರಿ ದೈತ್ಯರಿಗೆ ಅಂತಿಮ ಗಡುವು!!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ-ಕಚೇರಿ ಬಾಗಿಲಿಗೆ ಆಹಾರ ತಲುಪಿಸುವ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊಗೆ ‘ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ’ (BBHA) ತೀವ್ರ ಎಚ್ಚರಿಕೆ ನೀಡಿದೆ. ಫುಡ್ ಅಗ್ರಿಗೇಟರ್ ಆಪ್‌ಗಳ ಏಕಪಕ್ಷೀಯ ಮತ್ತು ಶೋಷಣಾತ್ಮಕ ನೀತಿಗಳಿಂದಾಗಿ ನಗರದ ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳು ದಿವಾಳಿಯ ಅಂಚಿಗೆ ತಲುಪುತ್ತಿವೆ. ಈ ಎಲ್ಲಾ ಸಮಸ್ಯೆಯನ್ನು ಮುಂಬರುವ ಆಗಸ್ಟ್ 15ರೊಳಗೆ ಸರಿಪಡಿಸದಿದ್ದರೆ, ಬೆಂಗಳೂರು ನಗರಾದ್ಯಂತ ಸ್ವಿಗ್ಗಿ ಮತ್ತು ಜೊಮ್ಯಾಟೊ ಆಪ್‌ಗಳ ಮೂಲಕ ಆಹಾರ ಪೂರೈಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಅಥವಾ ಆಪ್‌ಗಳನ್ನೇ ಬಂದ್ ಮಾಡಿಸಲಾಗುವುದು ಎಂದು ಸಂಘವು ತೀವ್ರ ಸ್ವರೂಪದ ಗಂಭೀರ ಎಚ್ಚರಿಕೆಯನ್ನು ರವಾನಿಸಿದೆ.

ಆನ್‌ಲೈನ್ ಫುಡ್ ಡೆಲಿವರಿಗೆ ಬೀಳುತ್ತಾ ಬ್ರೇಕ್? | Photo Credit: AI
ಆನ್‌ಲೈನ್ ಫುಡ್ ಡೆಲಿವರಿಗೆ ಬೀಳುತ್ತಾ ಬ್ರೇಕ್? | Photo Credit: AI

ಹೋಟೆಲ್‌ ಮಾಲೀಕರು ಎದುರಿಸುತ್ತಿರುವ ಪ್ರಮುಖ 4 ಗಂಭೀರ ಸಮಸ್ಯೆಗಳು

ಹೋಟೆಲ್ ಉದ್ಯಮ ಹಾಗೂ ಆನ್‌ಲೈನ್ ಡೆಲಿವರಿ ಆಪ್‌ಗಳ ನಡುವಿನ ಈ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಆಪ್‌ಗಳ ಕಿರುಕುಳ ಮಿತಿ ಮೀರಿದ್ದು, ಹೋಟೆಲ್ ಮಾಲೀಕರು ಅನುಭವಿಸುತ್ತಿರುವ ಪ್ರಮುಖ ನಾಲ್ಕು ಸಮಸ್ಯೆಗಳನ್ನು ಸಂಘವು ಬಹಿರಂಗಪಡಿಸಿದೆ:

ಹೋಟೆಲ್ ಮಾಲೀಕರ ಗಮನಕ್ಕೆ ತರದೆ ಅನಧಿಕೃತ ಆಫರ್‌ಗಳು

ಆನ್‌ಲೈನ್ ಆಪ್‌ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ‘ಫ್ಲಾಟ್ 50% ಆಫ್’, ‘ಬೈ ಒನ್ ಗೆಟ್ ಒನ್’ ನಂತಹ ಆಫರ್‌ಗಳನ್ನು ಸ್ವಿಗ್ಗಿ ಮತ್ತು ಜೊಮ್ಯಾಟೊ ಘೋಷಿಸುತ್ತವೆ. ಆದರೆ, ಈ ಆಫರ್‌ಗಳನ್ನು ನೀಡುವ ಮುನ್ನ ಹೋಟೆಲ್ ಮಾಲೀಕರ ಯಾವುದೇ ಅನುಮತಿ ಪಡೆಯುವುದಿಲ್ಲ. ಗ್ರಾಹಕರಿಗೆ ನೀಡಲಾಗುವ ಉಚಿತ ಅಥವಾ ರಿಯಾಯಿತಿಯ ಹೆಚ್ಚುವರಿ ಶೇಕಡಾವಾರು ಹಣವನ್ನು ಹೋಟೆಲ್‌ಗಳ ಖಾತೆಯಿಂದಲೇ ಕಡಿತಗೊಳಿಸಲಾಗುತ್ತಿದೆ. ಹೋಟೆಲ್ ಮಾಲೀಕರ ಶ್ರಮ ಮತ್ತು ಬಂಡವಾಳದಲ್ಲಿ ಆಪ್‌ಗಳು ಉಚಿತವಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಉದ್ಯಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಯಾನ್ಸಲ್ ಆದ ಆರ್ಡರ್‌ಗಳ ನಷ್ಟ ಮತ್ತು 'ಡೆಲಿವರಿ ಬಾಯ್ಸ್' ಮೋಜು

ಗ್ರಾಹಕರು ಯಾವುದೋ ಕಾರಣಕ್ಕೆ ಆರ್ಡರ್ ರದ್ದುಗೊಳಿಸಿದರೆ (Order Cancel), ಅದರ ಸಂಪೂರ್ಣ ನಷ್ಟವನ್ನು ಹೋಟೆಲ್‌ನವರೇ ಭರಿಸಬೇಕಾಗಿದೆ. ಆಪ್‌ಗಳು ಕ್ಯಾನ್ಸಲ್ ಆದ ತಿನಿಸಿನ ಹಣವನ್ನು ಹೋಟೆಲ್‌ಗೆ ಪಾವತಿಸುವುದಿಲ್ಲ. ಇತ್ತ, ತಯಾರಿಸಿದ ತಿನಿಸು ಕೂಡ ಹೋಟೆಲ್‌ಗೆ ಮರಳಿ ಸಿಗುವುದಿಲ್ಲ. ಗ್ರಾಹಕರು ಕ್ಯಾನ್ಸಲ್ ಮಾಡಿದ ಆಹಾರವನ್ನು ಡೆಲಿವರಿ ಬಾಯ್‌ಗಳೇ ತಿನ್ನುತ್ತಿದ್ದಾರೆ ಅಥವಾ ಎಸೆಯುತ್ತಿದ್ದಾರೆ. ಈ ದ್ವಿಮುಖ ನಷ್ಟದಿಂದ ಹೋಟೆಲ್‌ಗಳು ನಿತ್ಯ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿವೆ.

ಶೇಕಡಾ 25ರಿಂದ 30ರಷ್ಟು ಕಮಿಷನ್ ದಂಧೆ ಮತ್ತು ಬಲವಂತದ ಜಾಹೀರಾತು

ಪ್ರತಿ ಬಿಲ್ ಮೊತ್ತದ ಮೇಲೆ ಈ ಸಂಸ್ಥೆಗಳು ಶೇ. 25ರಿಂದ 30ರಷ್ಟು ಬೃಹತ್ ಕಮಿಷನ್ ಹಣವನ್ನು ಕಡಿತಗೊಳಿಸುತ್ತಿವೆ. ಇಷ್ಟು ಸಾಲದೆಂಬಂತೆ, ಆಪ್‌ನಲ್ಲಿ ತಮ್ಮ ಹೋಟೆಲ್ ಹೆಸರು ಮೊದಲ ಸಾಲಿನಲ್ಲಿ ಕಾಣಿಸಬೇಕೆಂದರೆ ‘ಆಡ್‌ವರ್ಟೈಸ್‌ಮೆಂಟ್ ಕಾಂಟ್ರಾಕ್ಟ್’ ಪಡೆಯಲೇಬೇಕೆಂದು ಆಪ್‌ಗಳು ಹೋಟೆಲ್ ಮಾಲೀಕರ ಮೇಲೆ ಬಲವಂತ ಹೇರುತ್ತಿವೆ. ಈ ಜಾಹೀರಾತು ವೆಚ್ಚಗಳ ಭಾರಿ ಹೊರೆಯಿಂದಾಗಿ ಹೋಟೆಲ್ ಮಾಲೀಕರಿಗೆ ಯಾವುದೇ ಲಾಭ ಉಳಿಯದಂತಾಗಿದೆ.

ಗ್ರಾಹಕರಿಗೂ ಜೇಬು ಖಾಲಿ, ಹೋಟೆಲ್‌ಗಳಿಗೂ ನಷ್ಟ

ಆನ್‌ಲೈನ್ ಫುಡ್ ಆರ್ಡರ್ ವ್ಯವಸ್ಥೆಯು ಕೇವಲ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೆ ಸಾಮಾನ್ಯ ಗ್ರಾಹಕರ ಜೇಬಿಗೂ ಕತ್ತರಿ ಹಾಕುತ್ತಿದೆ. ಪ್ಯಾಕಿಂಗ್ ಚಾರ್ಜ್, ಪ್ಲಾಟ್‌ಫಾರ್ಮ್ ಫೀ, ಡೆಲಿವರಿ ಚಾರ್ಜ್, ಜಿಎಸ್‌ಟಿ ಹೆಸರಿನಲ್ಲಿ ಗ್ರಾಹಕರಿಂದ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಹೋಟೆಲ್‌ನಲ್ಲಿ 100 ರೂಪಾಯಿಗೆ ಸಿಗುವ ತಿಂಡಿ, ಆಪ್‌ನಲ್ಲಿ ಗ್ರಾಹಕನಿಗೆ ತಲುಪುವಷ್ಟರಲ್ಲಿ 180 ರಿಂದ 200 ರೂಪಾಯಿಯಾಗುತ್ತದೆ. ಅತ್ತ ಗ್ರಾಹಕನಿಗೆ ಬೆಲೆ ತುಟ್ಟಿಯಾದರೆ, ಇತ್ತ ಹೋಟೆಲ್‌ ಮಾಲೀಕನಿಗೆ ಕಮಿಷನ್ ಕಡಿತದಿಂದ ನಷ್ಟವಾಗುತ್ತಿದೆ. ಈ ಮಧ್ಯವರ್ತಿ ಆಪ್‌ಗಳು ಮಾತ್ರ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿವೆ.

ರಾಜ್ಯ ಸರಕಾರದ ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹ

ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ಈ ವಿಷಯದಲ್ಲಿ ಕರ್ನಾಟಕ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದೆ. ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳ ಮೇಲೆ ಸೂಕ್ತ ನಿಯಂತ್ರಣ ಹಾಗೂ ಕಾನೂನು ಚೌಕಟ್ಟು ತರಬೇಕು.

ಕಮಿಷನ್ ಮಿತಿ: ಕಮಿಷನ್ ದರವನ್ನು ಶೇ. 10 ರಿಂದ 12ಕ್ಕೆ ಮಿತಿಗೊಳಿಸಬೇಕು.

ಪಾರದರ್ಶಕತೆ: ಹೋಟೆಲ್‌ಗಳ ಒಪ್ಪಿಗೆಯಿಲ್ಲದೆ ಯಾವುದೇ ರಿಯಾಯಿತಿ (Discount) ನೀಡುವುದನ್ನು ನಿಷೇಧಿಸಬೇಕು.

ಸಂಸ್ಥೆಗಳ ಜವಾಬ್ದಾರಿ: ಆರ್ಡರ್ ಕ್ಯಾನ್ಸಲ್ ಆದಲ್ಲಿ ಆಪ್‌ಗಳೇ ಅದರ ಜವಾಬ್ದಾರಿ ವಹಿಸಿಕೊಳ್ಳಬೇಕು.

ಆಟೋ ಹಾಗೂ ಟ್ಯಾಕ್ಸಿ ಆಪ್‌ಗಳಿಗೆ ನಿಯಮ ರೂಪಿಸಿದಂತೆ, ಫುಡ್ ಡೆಲಿವರಿ ಆಪ್‌ಗಳಿಗೂ ಸರಕಾರ ತಕ್ಷಣವೇ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಸಂಘ ಮನವಿ ಮಾಡಿದೆ.

ಆಗಸ್ಟ್ 15ರ ಗಡುವು

ನಗರದ ಲಕ್ಷಾಂತರ ಹೋಟೆಲ್ ಕಾರ್ಮಿಕರು, ಮಾಲೀಕರು ಹಾಗೂ ಸಣ್ಣ ರೆಸ್ಟೋರೆಂಟ್‌ಗಳ ಉಳಿವಿಗಾಗಿ ಈ ಕಠಿಣ ನಿರ್ಧಾರ ತಳೆಯಲಾಗಿದೆ. ಆಗಸ್ಟ್ 15ರ ಒಳಗಾಗಿ ಸ್ವಿಗ್ಗಿ ಮತ್ತು ಜೊಮ್ಯಾಟೊ ಆಡಳಿತ ಮಂಡಳಿಯು ಹೋಟೆಲ್‌ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಈ ಮೇಲಿನ ನಾಲ್ಕೂ ಪ್ರಮುಖ ಕುಂದುಕೊರತೆಗಳನ್ನು ಬಗೆಹರಿಸದಿದ್ದರೆ, ಸ್ವಾತಂತ್ರ್ಯ ದಿನಾಚರಣೆಯಂದೇ ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಸಂಘದ ಈ ತೀರ್ಮಾನದಿಂದಾಗಿ ಬೆಂಗಳೂರಿನ ಲಕ್ಷಾಂತರ ಆನ್‌ಲೈನ್ ಫುಡ್ ಪ್ರಿಯರಲ್ಲಿ ಆತಂಕ ಮೂಡಿದ್ದು, ಡೆಲಿವರಿ ಸಂಸ್ಥೆಗಳು ಈ ಎಚ್ಚರಿಕೆಗೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Latest News

Related News