Feb 16, 2026 Languages : ಕನ್ನಡ | English

ದರ್ಶನಕ್ಕಾಗಿ ಬಂದ ಭಕ್ತರಿಗೆ ಏಟು – ಶ್ರೀಶೈಲದಲ್ಲಿ ರಣರಂಗದ ವಾತಾವರಣ

ಶ್ರೀಶೈಲ ಕ್ಷೇತ್ರಕ್ಕೆ ಶಿವರಾತ್ರಿಯ ಮುನ್ನಾದಿನಗಳಲ್ಲಿ ಭಕ್ತರ ದಂಡೇ ಹರಿದುಬರುತ್ತಿದೆ. ಆದರೆ, ದೇವಸ್ಥಾನದ ಮಂಡಳಿಯ ಸರಿಯಾದ ಮುಂಜಾಗ್ರತಾ ಕ್ರಮಗಳಿಲ್ಲದ ಕಾರಣ, ಇಂದು ಅಲ್ಲಿ ಒಂದು ರೀತಿಯ ರಣರಂಗದ ವಾತಾವರಣ ನಿರ್ಮಾಣವಾಗಿತ್ತು. ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಂತಿದ್ದ ಶಿವಮಾಲೆ ಧರಿಸಿದ ಭಕ್ತರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದ್ದು, ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ದೇವಾಲಯ ಮಂಡಳಿಯ ಅವ್ಯವಸ್ಥೆಗೆ ಶಿವಮಾಲೆ ಧಾರಿಗಳು ಹೈರಾಣ!!
ದೇವಾಲಯ ಮಂಡಳಿಯ ಅವ್ಯವಸ್ಥೆಗೆ ಶಿವಮಾಲೆ ಧಾರಿಗಳು ಹೈರಾಣ!!

ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯಲು ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಶ್ರೀಶೈಲಕ್ಕೆ ಆಗಮಿಸುತ್ತಿದ್ದಾರೆ. ಆದರೆ, ದೇವಸ್ಥಾನದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ದರ್ಶನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಪುಟ್ಟ ಮಕ್ಕಳು, ವೃದ್ಧರು ಎನ್ನದೆ ಭಕ್ತರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಯಿತು. ಕುಡಿಯುವ ನೀರು ಅಥವಾ ಕನಿಷ್ಠ ಸೌಲಭ್ಯಗಳಿಲ್ಲದೆ ಭಕ್ತರು ಕಂಗಾಲಾಗಿದ್ದರು.

ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದ ಭಕ್ತರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ, ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಪೊಲೀಸರು ಶಿವಮಾಲೆ ಧರಿಸಿದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಸ್ವಾಮಿಯ ದರ್ಶನಕ್ಕೆಂದು ಭಕ್ತಿಯಿಂದ ಬಂದಿದ್ದ ಭಕ್ತರು ಪೊಲೀಸರ ಏಟಿನಿಂದ ರಕ್ತಸಿಕ್ತರಾದ ಘಟನೆ ನಡೆದಿದ್ದು, ಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ.

ನಾವು ದೇವರ ದರ್ಶನಕ್ಕೆ ಬಂದಿದ್ದೇವೆಯೇ ಹೊರತು ಏಟು ತಿನ್ನಲು ಅಲ್ಲ. ದೇವಾಲಯ ಮಂಡಳಿ ಸರಿಯಾದ ವ್ಯವಸ್ಥೆ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ನೊಂದ ಭಕ್ತರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರ ಈ ನಡೆಯನ್ನು ನಾಡಿನಾದ್ಯಂತ ಜನರು ಖಂಡಿಸುತ್ತಿದ್ದು, ಪವಿತ್ರ ಕ್ಷೇತ್ರದಲ್ಲಿ ಭಕ್ತರ ಮೇಲೆ ಹಲ್ಲೆ ನಡೆಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.