ರಾಜಕಾರಣ ಅಂದ್ರೆನೇ ಹಾಗೆ, ಇಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ! ಸದಾಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟುತ್ತಿದ್ದ ಬಿಜೆಪಿ ನಾಯಕ, ಮಾಜಿ ಸಚಿವ ಬಿ. ಶ್ರೀರಾಮುಲು ಈಗ ದಿಢೀರ್ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಳ್ಳಾರಿಯಲ್ಲಿ ಮಾತನಾಡಿರುವ ಶ್ರೀರಾಮುಲು, ಕಾಂಗ್ರೆಸ್ ಹೈಕಮಾಂಡ್ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಭರ್ಜರಿ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆ ಹಿಂದೆ ನಡೆದಿರುವ ಹೈಡ್ರಾಮಾದ ಬಗ್ಗೆ ರಾಮುಲು ಆಡಿರುವ ಚುಚ್ಚು ಮಾತುಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
"ಕುರ್ಚಿ ಕಿತ್ತುಕೊಂಡು ಅವಮಾನ ಮಾಡಿದರು!"
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, "ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಕಾಂಗ್ರೆಸ್‌ನವರು ತೀವ್ರವಾಗಿ ಅವಮಾನಿಸಿದ್ದಾರೆ. ಅವರು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಹಗಲಿರುಳು ಕೆಲಸ ಮಾಡಿದವರು. 2023ರಲ್ಲಿ ಎರಡನೇ ಬಾರಿ ಸಿಎಂ ಆದ ದಿನದಿಂದಲೂ ಅವರಿಗೆ ನೆಮ್ಮದಿಯಿಂದ ಇರಲು ಬಿಡಲಿಲ್ಲ. ದಿನಕ್ಕೊಂದು ಕಿರಿಕಿರಿ ಮಾಡಿ, ಕೊನೆಗೆ ನಿನ್ನೆ ಕ್ಲೈಮ್ಯಾಕ್ಸ್ ಹಂತಕ್ಕೆ ತಂದು ರಾಜೀನಾಮೆ ಕೊಡಿಸಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರಿದು, "ನಿನ್ನೆ ರಾಜೀನಾಮೆ ಕೊಡುವಾಗ ಸಿದ್ದರಾಮಯ್ಯ ಅವರ ಮುಖದಲ್ಲಿ ದೊಡ್ಡ ನೋವಿತ್ತು. ಅದನ್ನು ನೋಡಿ ರಾಜಕೀಯವಾಗಿ ವಿರೋಧಿಯಾದ ನನಗೇ ತುಂಬಾ ನೋವಾಗಿದೆ. ಒಬ್ಬ ದೊಡ್ಡ ಹಿಂದುಳಿದ ವರ್ಗದ ನಾಯಕನಿಗೆ ಈ ತರಹ ನೋವು ತರುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಬಾರದಿತ್ತು. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕಿತ್ತು. ಒಂದು ಕಡೆ ಡಿ.ಕೆ. ಶಿವಕುಮಾರ್ ಕಾಲು ಎಳೆದರೆ, ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಕಾಲು ಎಳೆದರು. ಸಿಎಂ ಕುರ್ಚಿಗಾಗಿ ಎಳೆದಾಟ ನಡೆಸಿ ಕೊನೆಗೂ ಸಿದ್ದರಾಮಯ್ಯ ಅವರಿಂದ ಅದನ್ನು ಕಸಿದುಕೊಂಡರು. ಸಿಎಂ ಕುರ್ಚಿಗೆ ಬೆಲೆ ಇಲ್ಲದಂತೆ ಮಾಡಿದ ಡಿ.ಕೆ. ಶಿವಕುಮಾರ್ ಕೊನೆಗೂ ತಮ್ಮ ಪ್ರಯತ್ನದಲ್ಲಿ ಸಕ್ಸಸ್ ಆಗಿದ್ದಾರೆ" ಎಂದು ನೇರವಾಗಿಯೇ ಚಾಟಿ ಬೀಸಿದರು.
ರಾಹುಲ್ ಗಾಂಧಿಗೆ ಶ್ರೀರಾಮುಲು ಖಡಕ್ ಪ್ರಶ್ನೆ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಗುಡುಗಿದ ರಾಮುಲು, "ರಾಹುಲ್ ಗಾಂಧಿ ಅವರು ಭಾಷಣ ಮಾಡಿದ ಕಡೆಯಲ್ಲೆಲ್ಲಾ ಒಬಿಸಿ (OBC) ನಾಯಕರು, ಹಿಂದುಳಿದ ವರ್ಗಗಳ ಬೆಂಬಲದ ಬಗ್ಗೆ ದೊಡ್ಡದಾಗಿ ಬಾಯಿ ಬಡಿದುಕೊಳ್ಳುತ್ತಾರೆ. ಮೋದಿ ಕ್ಯಾಬಿನೆಟ್‌ನಲ್ಲಿ ಎಷ್ಟು ಜನ ಒಬಿಸಿ ಇದ್ದಾರೆ ಅಂತ ಲೆಕ್ಕ ಕೇಳ್ತಾರೆ. ಆದರೆ, ದೇಶದಲ್ಲೇ ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಕೈಕ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ, ಒಬ್ಬ ಪ್ರಭಾವಿ ಒಬಿಸಿ ನಾಯಕನನ್ನು ಕುರ್ಚಿಯಿಂದ ಕೆಳಗಿಳಿಸಿದಾಗ ರಾಹುಲ್ ಗಾಂಧಿ ಎಲ್ಲಿ ಹೋಗಿದ್ದರು? ಈಗ ಅವರೇನು ಹೇಳುತ್ತಾರೆ? ಹಿಂದುಳಿದ ನಾಯಕನನ್ನು ಕೆಳಗಿಳಿಸಿ ಕಾಂಗ್ರೆಸ್ ದೊಡ್ಡ ತಪ್ಪು ಮಾಡಿದೆ, ಇದಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸುತ್ತಾರೆ" ಎಂದರು.
"ಸಿದ್ದರಾಮಯ್ಯ ಫೋಟೋ ಇಟ್ಟು ಗೆದ್ದವರು ಈಗ ಡಿಕೆಶಿ ಮನೆ ಮುಂದೆ ನಿಂತಿದ್ದಾರೆ!"
ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರ ವಿರುದ್ಧ ತಿರುಗಿಬಿದ್ದ ರಾಮುಲು, "ಇವತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಇಷ್ಟೊಂದು ಸೀಟು ಗೆದ್ದು ಈ ಹಂತಕ್ಕೆ ಬಂದಿರುವುದಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಬಳ್ಳಾರಿ ಜಿಲ್ಲೆಯ ಎಲ್ಲಾ ಶಾಸಕರು ಸಿದ್ದರಾಮಯ್ಯ ಅವರ ಫೋಟೋ ಹಾಕಿಕೊಂಡು, ಕುರುಬರು ಸೇರಿದಂತೆ ಎಲ್ಲಾ ಜನಾಂಗದವರ ವೋಟ್ ಪಡೆದು ಗೆದ್ದವರು. ಆದರೆ ಇವತ್ತು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಕ್ಕೆ ನಮ್ಮ ಜಿಲ್ಲೆಯ ಶಾಸಕರಿಗೆ ಕನಿಷ್ಠ ನೋವು ಕೂಡ ಇಲ್ಲ. ಅವರೆಲ್ಲಾ ಈಗ ನಗುತ್ತಾ ನಗುತ್ತಾ ಹೋಗಿ ಡಿ.ಕೆ. ಶಿವಕುಮಾರ್ ಮನೆ ಮುಂದೆ ನಿಂತು ಹೂಗುಚ್ಚ ಕೊಡುತ್ತಿದ್ದಾರೆ" ಎಂದು ಲೇವಡಿ ಮಾಡಿದರು.
ಇದೇ ವೇಳೆ ಬಿಎಸ್‌ವೈ ರಾಜೀನಾಮೆಗೂ ಸಿದ್ದರಾಮಯ್ಯ ರಾಜೀನಾಮೆಗೂ ಹೋಲಿಕೆ ಮಾಡಿದ ಅವರು, "ಯಡಿಯೂರಪ್ಪ ಅವರ ರಾಜೀನಾಮೆ ವಿಚಾರವೇ ಬೇರೆ ಇತ್ತು. ಅವರು ಮತ್ತೊಬ್ಬ ನಾಯಕನ ಸೃಷ್ಟಿಗಾಗಿ ತಾವಾಗಿಯೇ ರಿಸೈನ್ ಮಾಡಿದ್ದರು. ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಹೈಕಮಾಂಡ್ ಕುರ್ಚಿಯನ್ನು ಕಸಿದುಕೊಂಡಿದೆ. ಐದು ವರ್ಷ ಅವರೇ ಸಿಎಂ ಆಗಿರಬೇಕಿತ್ತು, ಈ ನಿರ್ಧಾರಕ್ಕೆ ಮುಂದೆ ಕಾಂಗ್ರೆಸ್ ಪಶ್ಚಾತ್ತಾಪ ಪಡುತ್ತದೆ. ನಮ್ಮ ನಡುವೆ ರಾಜಕೀಯ ವಿರೋಧ ಇರಬಹುದು, ಆದರೆ ವೈಯಕ್ತಿಕ ಸಂಬಂಧವೇ ಬೇರೆ" ಎಂದರು.
2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನೂರಕ್ಕೆ ನೂರು ಗ್ಯಾರಂಟಿ!
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಸದ್ಯಕ್ಕೆ ಬಿ.ವೈ. ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಕಾಂಗ್ರೆಸ್ ಮಾಡಿರುವ ಈ ದ್ರೋಹಕ್ಕೆ ಬೇಸತ್ತು ಮುಂದಿನ 2028ರ ಎಲೆಕ್ಷನ್‌ನಲ್ಲಿ ಎಲ್ಲಾ ಸಮುದಾಯದ ಜನರು ಬಿಜೆಪಿಗೆ ವೋಟ್ ಹಾಕಲಿದ್ದಾರೆ. ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನಾನು ಕೂಡ ಹಿಂದುಳಿದ ವರ್ಗಗಳ ಜನರನ್ನು ಪಕ್ಷದ ಕಡೆ ಸೆಳೆಯಲು ಪೂರ್ತಿ ಪ್ರಯತ್ನ ಮಾಡುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ರಾಜೀನಾಮೆ ಎಫೆಕ್ಟ್ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪಕ್ಷಾತೀತವಾಗಿ ನಾಯಕರು ಇದರ ಬಗ್ಗೆ ರಿಯಾಕ್ಟ್ ಮಾಡ್ತಿದ್ದಾರೆ. ಶ್ರೀರಾಮುಲು ಅವರ ಈ ಹಠಾತ್ ಅನುಕಂಪದ ಮಾತುಗಳು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.