ಮತದಾರರೇ ನನ್ನ ಪಾಲಿನ ದೇವರು - ರಾಜೀನಾಮೆ ಬೆನ್ನಲ್ಲೇ ಅಣ್ಣಾವ್ರ ಮಾತುಗಳ ನೆನೆದು ಸಿದ್ದರಾಮಯ್ಯ ಭಾವುಕ!

ಕರ್ನಾಟಕ ರಾಜಕೀಯದ ದಶಕಗಳ ಇತಿಹಾಸದಲ್ಲಿ ಇಂದು ಅತ್ಯಂತ ಪ್ರಮುಖ ಮತ್ತು ಭಾವುಕ ದಿನ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ಪತ್ರಿಕಾಗೋಷ್ಠಿ! | Photo Credit: https://www.thehindu.com
ಸಿದ್ದರಾಮಯ್ಯ ರಾಜೀನಾಮೆ ಪತ್ರಿಕಾಗೋಷ್ಠಿ! | Photo Credit: https://www.thehindu.com

ರಾಜೀನಾಮೆ ಪತ್ರ ಸಲ್ಲಿಸಿದ ತಕ್ಷಣವೇ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಹಿರಿಯ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ನಾಡಿನ ಜನತೆಯನ್ನುದ್ದೇಶಿಸಿ ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು. ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಪ್ರಸಿದ್ಧ ಸಾಲುಗಳನ್ನು ನೆನೆದ ಸಿದ್ದರಾಮಯ್ಯ, "ಮತದಾರರೇ ನಮ್ಮ ಪಾಲಿನ ಅಭಿಮಾನಿ ದೇವರು" ಎಂದು ಭಾವುಕರಾದರು. ಸುದ್ದಿಗೋಷ್ಠಿಯ ಕಂಪ್ಲೀಟ್ ಹೈಲೈಟ್ಸ್ ಇಲ್ಲಿದೆ.

"ಅಣ್ಣಾವ್ರು ಅಭಿಮಾನಿ ದೇವರು ಅಂತಿದ್ರು, ನನಗೆ ಮತದಾರರೇ ದೇವರು!"

ಪತ್ರಿಕಾಗೋಷ್ಠಿ ಆರಂಭಿಸುತ್ತಿದ್ದಂತೆ ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ಮೆಲುಕು ಹಾಕಿದ ಸಿದ್ದರಾಮಯ್ಯ, "ಕರ್ನಾಟಕದ ಮೇರು ನಟ ಡಾ. ರಾಜ್‌ಕುಮಾರ್ ಅವರು ಜನರನ್ನು 'ಅಭಿಮಾನಿ ದೇವರುಗಳೇ' ಎಂದು ಕರೆಯುತ್ತಿದ್ದರು. ನಾನು ರಾಜಕಾರಣಿ, ನನಗೆ ಸಂವಿಧಾನವೇ ಧರ್ಮ ಮತ್ತು ಈ ನಾಡಿನ ಮತದಾರರೇ ನನ್ನ ಪಾಲಿನ ಅಭಿಮಾನಿ ದೇವರುಗಳು. ಕನ್ನಡ ನಾಡಿನ ಏಳು ಕೋಟಿ ಜನರಿಗೆ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು" ಎಂದು ಕೃತಜ್ಞತೆ ಸಲ್ಲಿಸಿದರು.

ರಾಜೀನಾಮೆಯ ತಾಂತ್ರಿಕ ವಿವರ ನೀಡಿದ ಅವರು, "ರಾಜ್ಯಪಾಲರು ಸದ್ಯ ಬೆಂಗಳೂರಿನಲ್ಲಿ ಇಲ್ಲ, ರಾತ್ರಿ ವಾಪಸ್ ಬರಲಿದ್ದಾರೆ. ಹಾಗಾಗಿ ಸಂವಿಧಾನ ಬದ್ಧವಾಗಿ ನನ್ನ ರಾಜೀನಾಮೆ ಪತ್ರವನ್ನು ಅವರ ಕಚೇರಿಯ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದೇನೆ. ಅವರು ಬಂದ ಬಳಿಕ ಅಂಗೀಕರಿಸಲಿದ್ದಾರೆ" ಎಂದರು.

ಹಳ್ಳಿಯ ಹುಡುಗನಿಂದ ಹಿಡಿದು 16 ಬಜೆಟ್ ಮಂಡಿಸುವವರೆಗೆ...

ತಾವು ನಡೆದುಬಂದ ಹಾದಿಯನ್ನು ನೆನೆದ ಸಿದ್ದರಾಮಯ್ಯ, "ನಾನು ಸಾಮಾನ್ಯ ಹಳ್ಳಿಯಿಂದ ಬಂದವನು. ಮುಂದೊಂದು ದಿನ ಶಾಸಕ, ಸಚಿವ ಅಥವಾ ಸಿಎಂ ಆಗ್ತೀನಿ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ರಾಜಕೀಯ ಎಂಟ್ರಿ ಆಕಸ್ಮಿಕ. ಆದರೆ ಬಂದ ದಿನದಿಂದಲೂ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಗಾಂಧೀಜಿ ತತ್ವಗಳನ್ನು ನಂಬಿ ರಾಜಕಾರಣ ಮಾಡಿದ್ದೇನೆ. ನನ್ನ 50 ವರ್ಷಗಳ ರಾಜಕೀಯ ಜೀವನ ಒಂದು ತೆರೆದ ಪುಸ್ತಕ. ನಾನು ಯಾವತ್ತೂ ಆಸ್ತಿ-ಪಾಸ್ತಿ ಮಾಡುವ ಯೋಚನೆ ಮಾಡಲಿಲ್ಲ, ಹಣ ಮತ್ತು ಅಧಿಕಾರದ ಹಿಂದೆ ಓಡಲಿಲ್ಲ" ಎಂದು ಗಟ್ಟಿಯಾಗಿ ಹೇಳಿದರು.

ಎರಡು ಬಾರಿ ಸಿಎಂ ಹಾಗೂ ಎರಡು ಬಾರಿ ವಿಪಕ್ಷ ನಾಯಕರಾಗಲು ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಡೀ ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸಿದರು.

ಅಧಿಕಾರದ ಬಲ ಮತ್ತು ಬಹುಮತ: "ನಮ್ಮ ಪಕ್ಷ 135+1 ಸ್ಥಾನಗಳನ್ನು ಗೆದ್ದಿದೆ, ಜೊತೆಗೆ ಇಬ್ಬರು ಪಕ್ಷೇತರರ ಬೆಂಬಲವೂ ಇದೆ. ನಮ್ಮಲ್ಲಿ ಸಂಪೂರ್ಣ ಬಹುಮತ ಇರುವುದರಿಂದ ಮುಂದಿನ ಮುಖ್ಯಮಂತ್ರಿಗೆ (ಡಿ.ಕೆ. ಶಿವಕುಮಾರ್) ಹಾದಿ ಸುಗಮ ಮಾಡಿಕೊಡುವುದು ಸಂವಿಧಾನ ಬದ್ಧವಾಗಿದೆ" ಎಂದು ಸ್ಪಷ್ಟಪಡಿಸಿದರು.

"ಪ್ರಧಾನಿ ಮೋದಿ ಅಪಪ್ರಚಾರ ಮಾಡಿದ್ರು, ಆದ್ರೆ ತಲಾ ಆದಾಯದಲ್ಲಿ ನಾವೇ ನಂಬರ್ 1!"
ತಮ್ಮ ಸರ್ಕಾರದ ಸಾಧನೆಗಳನ್ನು ಅಂಕಿ-ಅಂಶಗಳ ಸಮೇತ ಬಿಚ್ಚಿಟ್ಟ ಸಿದ್ದರಾಮಯ್ಯ, ವಿರೋಧ ಪಕ್ಷಗಳಿಗೆ ಹಾಗೂ ಪ್ರಧಾನಿ ಮೋದಿಯವರಿಗೆ ನೇರ ಕೌಂಟರ್ ಕೊಟ್ಟರು: 

ವಿವರಗಳು,ಸರ್ಕಾರದ ಸಾಧನೆಯ ಅಂಕಿ-ಅಂಶಗಳು

ವಿವರಗಳು ಸರ್ಕಾರದ ಸಾಧನೆಯ ಅಂಕಿ-ಅಂಶಗಳು
ಪ್ರಣಾಳಿಕೆ ಭರವಸೆಗಳು 2023 ರ ಪ್ರಣಾಳಿಕೆಯ 550 ಭರವಸೆಗಳ ಪೈಕಿ 300 ಕ್ಕೂ ಹೆಚ್ಚು ಈಡೇರಿಕೆ
ಪಂಚ ಗ್ಯಾರಂಟಿಗಳು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ
ಗ್ಯಾರಂಟಿ ವೆಚ್ಚ ಬಡವರಿಗಾಗಿ ಬರೋಬ್ಬರಿ 1,40,000 ಕೋಟಿ ರೂಪಾಯಿ ಖರ್ಚು
ಆರ್ಥಿಕ ಸಾಧನೆ ಇಷ್ಟೆಲ್ಲಾ ಕೊಟ್ಟರೂ ಕರ್ನಾಟಕ ಇಂದು ದೇಶದಲ್ಲೇ ತಲಾ ಆದಾಯದಲ್ಲಿ ನಂಬರ್ 1

"ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಹಲವರು ಅಪಪ್ರಚಾರ ಮಾಡಿದರು. ಆದರೆ ನಾವು ಕಟ್ಟುನಿಟ್ಟಾದ ಆರ್ಥಿಕ ಶಿಸ್ತು ಪಾಲಿಸಿದ್ದೇವೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಅಡಿಯಲ್ಲೇ ಸಾಲ ಮಾಡಲಾಗಿದ್ದು, ಶೇಕಡಾ 3 ರ ಮಾನದಂಡವನ್ನು ಎಲ್ಲೂ ಮೀರಿಲ್ಲ. ನಮ್ಮ ಮೇಲಿನ ಸಾಲದ ಆರೋಪಗಳು ಕೇವಲ ರಾಜಕೀಯ ಪ್ರೇರಿತ" ಎಂದು ತಿರುಗೇಟು ನೀಡಿದರು. ಕೊನೆಯಲ್ಲಿ, "ನೆಲ, ಜಲ, ಭಾಷೆ ಮತ್ತು ನಾನು ನಂಬಿದ ಸಿದ್ಧಾಂತಗಳ ವಿಚಾರದಲ್ಲಿ ನಾನೆಂದೂ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ಮಾಡಲ್ಲ" ಎನ್ನುವ ಮೂಲಕ ತಮ್ಮ ರಾಜಕೀಯ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ರವಾನಿಸಿದರು. 

Latest News