ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ರಾಜೀನಾಮೆ?, ಮೇ 31ಕ್ಕೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸಾಧ್ಯತೆ!

ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಳಗೊಳಗೆ ಹೊಗೆಯಾಡುತ್ತಿದ್ದ 'ಕುರ್ಚಿ ಕದನ' ಇದೀಗ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ! ಹೌದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗೋದು ಬಹುತೇಕ ಫಿಕ್ಸ್ ಆಗಿದೆ ಅಂತ ಕಾಂಗ್ರೆಸ್ ವಲಯದಿಂದ ಭಾರಿ ಸುದ್ದಿಗಳು ಕೇಳಿಬರುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರೋ ಡಿ.ಕೆ. ಶಿವಕುಮಾರ್ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರಂತೆ!

ಕರ್ನಾಟಕ ರಾಜಕೀಯದಲ್ಲಿ ಕುರ್ಚಿ ಕದನ ಕ್ಲೈಮ್ಯಾಕ್ಸ್; | Photo Credit: PTI
ಕರ್ನಾಟಕ ರಾಜಕೀಯದಲ್ಲಿ ಕುರ್ಚಿ ಕದನ ಕ್ಲೈಮ್ಯಾಕ್ಸ್; | Photo Credit: PTI

ಅಷ್ಟಕ್ಕೂ ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದೇನು? ಸಿದ್ದರಾಮಯ್ಯ ಅವರು ಸ್ಥಾನ ಬಿಟ್ಟುಕೊಡಲು ಒಪ್ಪಿದ್ದೇಕೆ?

ಹೈಕಮಾಂಡ್ ಗ್ರೀನ್ ಸಿಗ್ನಲ್: ಖರ್ಗೆ ಆಫರ್ ರಿಜೆಕ್ಟ್ ಮಾಡಿದ್ದೇಕೆ?

ಮೂಲಗಳ ಪ್ರಕಾರ, ಮೊನ್ನೆ ಮಂಗಳವಾರ ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಒಂದು ಹೈ-ಲೆವೆಲ್ ಮೀಟಿಂಗ್ ನಡೆದಿತ್ತು. ಈ ಸಭೆಯಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಲೇಬೇಕು ಅನ್ನೋ ಗಟ್ಟಿ ತೀರ್ಮಾನಕ್ಕೆ ಬರಲಾಗಿದೆ. ಮೊದಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೇ ರಾಜ್ಯದ ಸಿಎಂ ಸೀಟು ವಹಿಸಿಕೊಳ್ಳಿ ಅಂತ ಹಿರಿಯ ನಾಯಕರು ರಿಕ್ವೆಸ್ಟ್ ಮಾಡಿದ್ದರಂತೆ. ಆದರೆ ಖರ್ಗೆ ಅವರು ತಮ್ಮ ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ, "ನನಗೆ ಈ ಜವಾಬ್ದಾರಿ ಬೇಡ" ಎಂದು ನಯವಾಗಿಯೇ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಖರ್ಗೆ ಅವರು ಹಿಂದೆ ಸರಿದ ತಕ್ಷಣ, ಹೈಕಮಾಂಡ್ ಕಣ್ಣು ಬಿದ್ದಿದ್ದು ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರ ಮೇಲೆ. ಅದ್ರಲ್ಲೂ ವಿಶೇಷವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿಕೆಶಿ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. 2023ರ ಚುನಾವಣೆಯಲ್ಲಿ ಗೆದ್ದಾಗಲೇ ‘ಅರ್ಧಾವಧಿ ಅಧಿಕಾರ ಹಂಚಿಕೆ’ ಫಾರ್ಮುಲಾ ಚರ್ಚೆಯಾಗಿತ್ತು. ಅಂದರೆ ಮೊದಲ 2.5 ವರ್ಷ ಸಿದ್ದರಾಮಯ್ಯ, ಆಮೇಲೆ ಡಿಕೆಶಿ ಅಂತ ಒಪ್ಪಂದ ಆಗಿತ್ತಂತೆ. ಈಗ ಅದೇ ಒಪ್ಪಂದವನ್ನು ಜಾರಿಗೆ ತರಲು ಹೈಕಮಾಂಡ್ ಮುಂದಾಗಿದೆ.

ಇಂದು ಸಿದ್ದರಾಮಯ್ಯ ರಾಜೀನಾಮೆ? ಕಾವೇರಿ ನಿವಾಸದಲ್ಲಿ ಹೈಡ್ರಾಮಾ!

ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಮಾತಿಗೆ ಗೌರವ ಕೊಟ್ಟು ಸ್ಥಾನ ತ್ಯಾಗ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇಂದು (ಗುರುವಾರ) ಬೆಳಗ್ಗೆ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ. ಅದಾದ ಬಳಿಕ ಮಧ್ಯಾಹ್ನ ನೇರವಾಗಿ ರಾಜಭವನಕ್ಕೆ ಹೋಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ.

ಇತ್ತ ಸಿದ್ದರಾಮಯ್ಯ ಅವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ, ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಸಿಎಂ ಅಧಿಕೃತ ನಿವಾಸ ‘ಕಾವೇರಿ’ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಬಾರದು ಎಂದು ಘೋಷಣೆ ಕೂಗುತ್ತಿದ್ದಾರೆ. ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸ್ಮೂತ್ ಆಗಿ ಅಧಿಕಾರ ಹಸ್ತಾಂತರ ಮಾಡಲು ಸಹಕರಿಸಿ ಎಂದು ಮಾತುಕತೆ ನಡೆಸಿದ್ದಾರೆ.

ಒಂದು ಇಂಟರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ: ಸಿದ್ದರಾಮಯ್ಯ ಅವರು ಸಾಮಾನ್ಯವಾಗಿ ಈದ್ ಮತ್ತು ಬಕ್ರೀದ್ ಹಬ್ಬದ ಊಟದ ಆಹ್ವಾನಗಳನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ತಮ್ಮ ಆಪ್ತರು ಮತ್ತು ಸ್ನೇಹಿತರು ನೀಡಿದ್ದ ಬಕ್ರೀದ್ ಊಟದ ಆಮಂತ್ರಣವನ್ನು ತಿರಸ್ಕರಿಸಿದ್ದಾರಂತೆ. "ನಾನು ಗುರುವಾರ ರಿಸೈನ್ ಮಾಡ್ತಿದ್ದೀನಿ, ಹಾಗಾಗಿ ಬರಲು ಸಾಧ್ಯವಾಗುತ್ತಿಲ್ಲ" ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಡಿಕೆಶಿ ಮನೆಯಲ್ಲಿ ಹಬ್ಬದ ವಾತಾವರಣ;

ಬುಧವಾರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಮರಳಿದ ಡಿಕೆ ಶಿವಕುಮಾರ್ ಅವರು ನೇರವಾಗಿ ತಮ್ಮ ಆಧ್ಯಾತ್ಮಿಕ ಗುರು ಹಾಗೂ ಆಪ್ತ ಜ್ಯೋತಿಷಿ ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ್ (ಬುಲೆಟ್ ಸ್ವಾಮಿ) ಅವರ ಬಳಿ ಹೋಗಿ ಆಶೀರ್ವಾದ ಪಡೆದಿದ್ದಾರೆ. "ಡಿಕೆಶಿ ಅವರಿಗೆ ಸಿಎಂ ಪಟ್ಟ ಸಿಗೋದು ಕನ್ಫರ್ಮ್, ಕೇವಲ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ" ಎಂದು ಗುರೂಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತ ಸುದ್ದಿ ಹರಡುತ್ತಿದ್ದಂತೆ ಕನಕಪುರ ಮತ್ತು ಬೆಂಗಳೂರಿನ ಡಿಕೆಶಿ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ "ಮುಂದಿನ ಸಿಎಂ ಡಿಕೆಶಿ" ಎಂದು ಜೈಕಾರ ಹಾಕುತ್ತಿದ್ದಾರೆ.

2028ರ ಎಲೆಕ್ಷನ್ ಟಾರ್ಗೆಟ್!

ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರ ನಡುವಿನ ಈ ಕುರ್ಚಿ ಫೈಟ್‌ನಿಂದಾಗಿ ಇಷ್ಟು ದಿನ ಪಕ್ಷದ ಇಮೇಜ್‌ಗೆ ಸ್ವಲ್ಪ ಡ್ಯಾಮೇಜ್ ಆಗಿತ್ತು ಅನ್ನೋ ಬೇಸರ ಹೈಕಮಾಂಡ್‌ಗೆ ಇದೆ. ಅದಕ್ಕಾಗಿಯೇ, ಈಗ ಡಿಕೆಶಿಗೆ ಪಟ್ಟ ಕಟ್ಟಿ, ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸಿ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿಯನ್ನು ಹೈಕಮಾಂಡ್ ಅವರ ಹೆಗಲಿಗೆ ಹೊರಿಸಿದೆ.

ಒಟ್ಟಿನಲ್ಲಿ ಮೇ 29 ಅಥವಾ ಮೇ 31ರೊಳಗೆ ಹೊಸ ಸಿಎಂ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಮುಗಿಯುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ ರಾಜಕೀಯದ ಈ ಮಹಾ ತಿರುವಿಗೆ ಕ್ಲೈಮ್ಯಾಕ್ಸ್ ಸಿಗುತ್ತಾ ಅಂತ ನಾವೆಲ್ಲಾ ಕಾದು ನೋಡಬೇಕಿದೆ!

Latest News