ನೋಡುನೋಡುತ್ತಲೇ ಉದ್ಯಮಿಯನ್ನು ನುಂಗಿದ ಬೃಹತ್ ಮೊಸಳೆ - 500 ಕೆಜಿ ತೂಕದ ದೈತ್ಯ ಪ್ರಾಣಿ ಏರ್‌ಲಿಫ್ಟ್ ಇಲ್ಲಿದೆ ನೋಡಿ!!

ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷದ ಕಥೆಗಳನ್ನು ನಾವು ಕೇಳಿದ್ದೇವೆ, ಆದರೆ ಈ ಘಟನೆ ಮಾತ್ರ ತುಂಬಾನೇ ಭಯಾನಕವಾಗಿದೆ. 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಎಂಬುವವರನ್ನು ಬಲಿ ಪಡೆದಿದ್ದ ಸುಮಾರು 500 ಕೆಜಿ ತೂಕದ ಬೃಹತ್ ಮೊಸಳೆಯನ್ನು ಅಧಿಕಾರಿಗಳು ಪತ್ತೆಹಚ್ಚಿ ಸಂಹಾರ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಕೋಮತಿ ನದಿಯಲ್ಲಿ ಹೈಡ್ರಾಮಾ | Photo Credit: https://x.com/CollinRugg
ದಕ್ಷಿಣ ಆಫ್ರಿಕಾದ ಕೋಮತಿ ನದಿಯಲ್ಲಿ ಹೈಡ್ರಾಮಾ | Photo Credit: https://x.com/CollinRugg

ಏನಿದು ಭೀಕರ ಘಟನೆ?

ಗೌಟೆಂಗ್‌ನ ವಂಡರ್‌ಬೈಲ್‌ಪಾರ್ಕ್‌ನ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಅವರು ಕಳೆದ ಏಪ್ರಿಲ್ 28 ರಂದು ನಾಪತ್ತೆಯಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಅಂದು ಸುರಿದ ಭಾರಿ ಮಳೆಯಿಂದಾಗಿ ಕೊಮಟಿಪೂರ್ಟ್ ಬಳಿಯ ಸೇತುವೆಯ ಮೇಲೆ ಅವರ ಕಾರು ನೀರಿನಲ್ಲಿ ಕೊಚ್ಚಿಹೋಗಿತ್ತು. ಅಂದಿನಿಂದ ಪೊಲೀಸರು, ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಅವರ ಹುಡುಕಾಟ ನಡೆಸುತ್ತಿದ್ದರು. ಮೇ 2 ರಂದು ಪೊಲೀಸರ ಕಣ್ಣಿಗೆ ಒಂದು ದೃಶ್ಯ ಬಿದ್ದಿತು.

ಕೋಮತಿ ನದಿಯಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಮೊಸಳೆಯೊಂದು ಅವಿತು ಕುಳಿತಿತ್ತು. ಅದರ ಹೊಟ್ಟೆ ಅಸಹಜವಾಗಿ ಉಬ್ಬಿಕೊಂಡಿರುವುದನ್ನು ಗಮನಿಸಿದ ಅಧಿಕಾರಿಗಳಿಗೆ ಸಂಶಯ ಮೂಡಿತು. ಈ ಮೊಸಳೆ ಉದ್ಯಮಿಯನ್ನು ತಿಂದಿರಬಹುದು ಎಂದು ಶಂಕಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಕ್ಕಿಳಿದರು.

ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್!

ಆ ದೈತ್ಯ ಮೊಸಳೆಯನ್ನು ಸುಮ್ಮನೆ ಹೊರಕ್ಕೆ ಎಳೆಯುವುದು ಅಸಾಧ್ಯವಾಗಿತ್ತು. ಹೀಗಾಗಿ ರಕ್ಷಣಾ ಸಿಬ್ಬಂದಿಗಳು ಅದನ್ನು ಗುಂಡಿಕ್ಕಿ ಕೊಂದರು. ನಂತರ ಕ್ಯಾಪ್ಟನ್ ಜೋಹಾನ್ ಪೋಟ್ಗೈಟರ್ ಅವರು ಹೆಲಿಕಾಪ್ಟರ್‌ನಿಂದ ನದಿಗೆ ಹಗ್ಗದ ಸಹಾಯದಿಂದ ಇಳಿದು, ಆ 500 ಕೆಜಿ ತೂಕದ ಮೊಸಳೆಯನ್ನು ಭದ್ರವಾಗಿ ಕಟ್ಟಿದರು. ನಂತರ ಹೆಲಿಕಾಪ್ಟರ್ ಮೂಲಕ ಆ ಮೊಸಳೆಯನ್ನು ನೀರಿನಾಚೆ ಏರ್‌ಲಿಫ್ಟ್ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಾಗಿಸಲಾಯಿತು. ಈ ಸಾಹಸಮಯ ದೃಶ್ಯದ ವಿಡಿಯೋಗಳು ಈಗ ಜಗತ್ತಿನಾದ್ಯಂತ ವೈರಲ್ ಆಗಿವೆ.

ಹೊಟ್ಟೆಯೊಳಗೆ ಸಿಕ್ಕಿದ್ದು ಏನು?

ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮೊಸಳೆಯ ಹೊಟ್ಟೆಯನ್ನು ಸೀಳಿ ನೋಡಿದ ವೈದ್ಯರಿಗೆ ಮತ್ತು ಪೊಲೀಸರಿಗೆ ದಿಗಿಲಾಯಿತು. ಅದರೊಳಗೆ ಮನುಷ್ಯನ ಪಕ್ಕೆಲುಬುಗಳು, ಎರಡು ಕೈಗಳು ಮತ್ತು ಎದೆಯ ಭಾಗದ ಮಾಂಸ ಪತ್ತೆಯಾಗಿವೆ. ಇಷ್ಟೇ ಅಲ್ಲದೆ, ಗೇಬ್ರಿಯಲ್ ಬಟಿಸ್ಟಾ ಅವರು ಧರಿಸಿದ್ದ ಬಟ್ಟೆಯ ಚೂರುಗಳು ಮತ್ತು ಒಂದು ಉಂಗುರ ಕೂಡ ಮೊಸಳೆಯ ಹೊಟ್ಟೆಯಲ್ಲಿ ಸಿಕ್ಕಿವೆ.

ಡಿಎನ್‌ಎ ಪರೀಕ್ಷೆಗೆ ಕಾಯುತ್ತಿರುವ ಪೊಲೀಸರು

ಸದ್ಯ ಸಿಕ್ಕಿರುವ ದೇಹದ ಅವಶೇಷಗಳು ಬಟಿಸ್ಟಾ ಅವರದ್ದೇ ಎಂದು ಪ್ರಾಥಮಿಕವಾಗಿ ಖಚಿತವಾಗಿದ್ದರೂ, ಅಧಿಕೃತವಾಗಿ ದೃಢಪಡಿಸಲು ಈಗ ಡಿಎನ್‌ಎ (DNA) ಪರೀಕ್ಷೆ ನಡೆಸಲಾಗುತ್ತಿದೆ. ಅವರು ನೀರಿನಲ್ಲಿ ಮುಳುಗಿ ಸತ್ತ ಮೇಲೆ ಮೊಸಳೆ ಅವರ ದೇಹವನ್ನು ತಿಂದಿದೆಯೇ ಅಥವಾ ಅವರು ಬದುಕಿರುವಾಗಲೇ ಮೊಸಳೆ ದಾಳಿ ಮಾಡಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ನಂತರ ತಿಳಿದುಬರಬೇಕಿದೆ.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುವುದು ನಿಜಕ್ಕೂ ದುರಂತ. ಉದ್ಯಮಿಯ ಸಾವು ಅವರ ಕುಟುಂಬಸ್ಥರಲ್ಲಿ ತುಂಬಲಾರದ ನೋವು ತಂದಿದೆ. ಮನುಷ್ಯ ಎಷ್ಟೇ ದೊಡ್ಡ ಉದ್ಯಮಿಯಾಗಿದ್ದರೂ, ಪ್ರಕೃತಿಯ ಮುಂದೆ ಎಷ್ಟು ಅಸಹಾಯಕ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

Latest News