Apr 29, 2026 Languages : ಕನ್ನಡ | English

ಎರಡನೇ ಮದುವೆಯಾದ ಕೆಲವೇ ತಿಂಗಳಲ್ಲಿ ಹೆ*ಣವಾದ ಪತ್ನಿ - ಸೊರಬದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ಲೀಡರ್ ಕೇಸ್!!

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಊರಿನಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡನ ಪತ್ನಿ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಆ*ತ್ಮಹತ್ಯೆ ಅಂದುಕೊಂಡ್ರೂ, ಇದರ ಹಿಂದೆ ಬೇರೆಯದ್ದೇ ಕಥೆ ಇದೆ ಅನ್ನೋ ಅನುಮಾನ ಶುರುವಾಗಿದೆ.

ರಾಜಕೀಯ ವರ್ಚಸ್ಸಿದ್ದರೂ ತಪ್ಪಲಿಲ್ಲ ಜೈಲು ವಾಸ
ರಾಜಕೀಯ ವರ್ಚಸ್ಸಿದ್ದರೂ ತಪ್ಪಲಿಲ್ಲ ಜೈಲು ವಾಸ

ಪತ್ನಿಯ ಸಾವಿಗೆ ಆಕೆಯ ಗಂಡನೇ ಕೊಟ್ಟ ಕಿರುಕುಳ ಕಾರಣ ಅನ್ನೋ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಆ ಬಿಜೆಪಿ ಮುಖಂಡನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ.

ಸೊರಬದ ಕಾನುಕೇರಿ ಬಡಾವಣೆಯ ಮನೆಯಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದೆ. ಮಂಜುಳಾ (38) ಸಾವನ್ನಪ್ಪಿದ ಮಹಿಳೆ. ಮೂಲತಃ ಹಿರೇಕೆರೂರು ತಾಲೂಕಿನ ಹೊಸವೀರಾಪುರದವರಾದ ಇವರು, ಸೊರಬದ ಬಿಜೆಪಿ ಲೀಡರ್ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಮಂಜುಳಾ ಅವರ ಬದುಕು ಹೀಗೆ ದುರಂತವಾಗಿ ಕೊನೆಯಾಗಿದೆ.

ಎರಡನೇ ಮದುವೆಯಾದ ಬೆನ್ನಲ್ಲೇ ಕಿರಿಕ್

ಪ್ರಭು ಮೇಸ್ತ್ರಿ ಅವರು ಸೊರಬದಲ್ಲಿ ಹಾರ್ಡ್‌ವೇರ್ ಅಂಗಡಿ ನಡೆಸುತ್ತಾ, ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಇವರು 2024ರಲ್ಲಿ ಮಂಜುಳಾ ಅವರನ್ನು ಎರಡನೇ ಮದುವೆಯಾಗಿದ್ದರು. ಹೊಸ ಜೀವನ ಸುಂದರವಾಗಿರುತ್ತದೆ ಎಂದು ನಂಬಿದ್ದ ಮಂಜುಳಾಗೆ ಆರಂಭದಲ್ಲೇ ಕಹಿ ಅನುಭವಗಳು ಎದುರಾದವು. ಆರೋಪಗಳ ಪ್ರಕಾರ, ಪ್ರಭು ಮೇಸ್ತ್ರಿ ಅವರು ಎರಡನೇ ಮದುವೆಯಾದ ನಂತರವೂ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಈ ವಿಷಯ ದಂಪತಿಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿತ್ತು. ಕುಟುಂಬಸ್ಥರು ಮತ್ತು ಹಿರಿಯರು ಸೇರಿ ಹಲವು ಬಾರಿ ರಾಜೀ ಪಂಚಾಯತಿ ಮಾಡಿದ್ದರೂ ಸಹ, ಪ್ರಭು ತನ್ನ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ. ಪರಸ್ತ್ರೀ ವ್ಯಾಮೋಹದ ಜೊತೆಗೆ ಪತ್ನಿ ಮಂಜುಳಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬುದು ಮೃತಳ ಕುಟುಂಬಸ್ಥರ ಆರೋಪವಾಗಿದೆ.

"ತನ್ನ ಗಂಡ ಕೊಡುತ್ತಿದ್ದ ಕಾಟ ಮತ್ತು ಆತನಿಗಿದ್ದ ಅಕ್ರಮ ಸಂಬಂಧದಿಂದ ಬೇಸತ್ತು ಮಂಜುಳಾ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಮೃತಳ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಜುಳಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕುಟುಂಬದವರು, ಕೂಡಲೇ ಸೊರಬ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಮಗಳ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಆಕ್ಷನ್ ತಗೆದುಕೊಂಡು, ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಪ್ರಭು ಮೇಸ್ತ್ರಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಒಂದೆಡೆ ಪುರಸಭೆಯ ಮಾಜಿ ಅಧ್ಯಕ್ಷನಾಗಿ ಸಮಾಜದಲ್ಲಿ ಗೌರವ ಹೊಂದಿದ್ದ ವ್ಯಕ್ತಿ, ಮತ್ತೊಂದೆಡೆ ಕೌಟುಂಬಿಕ ಕಲಹ ಮತ್ತು ಅಕ್ರಮ ಸಂಬಂಧದ ಆರೋಪದ ಮೇಲೆ ಜೈಲು ಪಾಲಾಗಿರುವುದು ಸೊರಬದಲ್ಲಿ ಸಂಚಲನ ಮೂಡಿಸಿದೆ. ರಾಜಕೀಯವಾಗಿ ಪ್ರಭಾವಿಯಾಗಿದ್ದರೂ ಸಹ, ಕಾನೂನು ತನ್ನ ಕೆಲಸ ಮಾಡಿದೆ. ಮಂಜುಳಾ ಅವರ ತವರಿನವರು ನಮ್ಮ ಮಗಳಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Latest News