Apr 29, 2026 Languages : ಕನ್ನಡ | English

ಪಂಚಮಸಾಲಿ ಪೀಠದಲ್ಲಿ ಬಿರುಕು - ಅಧ್ಯಕ್ಷರು ಮತ್ತು ಟ್ರಸ್ಟಿಗಳ ನಡುವಿನ ಕೆಸರೆರಚಾಟ ಈಗ ಬೀದಿಗೆ!!

ದಾವಣಗೆರೆಯಲ್ಲಿ ಈಗ ಎಲ್ಲಿ ನೋಡಿದರೂ ಲಿಂಗಾಯತ ಪಂಚಮಸಾಲಿ ಸಂಘದ ಒಳಗಿನ ಗುದ್ದಾಟದ್ದೇ ಚರ್ಚೆ. ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷರಾದ ಸೋಮನಗೌಡ ಮಾಲಿ ಪಾಟೀಲ್ ಅವರು ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದಂತಿದೆ. ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಅವರು ಮಾತನಾಡಿದ್ದೇ ತಡ, ಪ್ರತಿಯಾಗಿ ಅವರದ್ದೇ ಒಂದು 'ಖಾಸಗಿ' ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸುದ್ದಿಗೋಷ್ಠಿ ಮುಗಿದ ಬೆನ್ನಲ್ಲೇ ಹರಿದಾಡ್ತಿದೆ 'ಖಾಸಗಿ' ವಿಡಿಯೋ
ಸುದ್ದಿಗೋಷ್ಠಿ ಮುಗಿದ ಬೆನ್ನಲ್ಲೇ ಹರಿದಾಡ್ತಿದೆ 'ಖಾಸಗಿ' ವಿಡಿಯೋ

ಮೊನ್ನೆ ತಾನೇ ಸುದ್ದಿಗೋಷ್ಠಿ ನಡೆಸಿದ್ದ ಸೋಮನಗೌಡರು, ವಚನಾನಂದ ಶ್ರೀಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ಮೂವರು ಟ್ರಸ್ಟಿಗಳನ್ನು ಉಚ್ಚಾಟನೆ ಮಾಡಿದ್ದಾಗಿ ಘೋಷಿಸಿದ್ದರು. ಆದರೆ ಈ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆಯೇ ಅಧ್ಯಕ್ಷರಿಗೆ ಶಾಕ್ ಎನ್ನುವಂತೆ ಒಂದು ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ ಸೋಮನಗೌಡರು ಪಂಚಮಸಾಲಿ ಸಂಘದ ಇತರ ಪದಾಧಿಕಾರಿಗಳ ಜೊತೆ ಕುಳಿತು ಮಾತನಾಡುತ್ತಾ, ಹಣವನ್ನು ಪಡೆದುಕೊಳ್ಳುತ್ತಿರುವ ದೃಶ್ಯ ಇದೆ ಎನ್ನಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಸೋಮನಗೌಡರು ವಚನಾನಂದ ಶ್ರೀಗಳ ಬಗ್ಗೆ ಕೆಲವು ಕಟು ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ:        

ಪರಿಚಯವೇ ಇರಲಿಲ್ಲ: "ನನಗೆ ವಚನಾನಂದ ಶ್ರೀಗಳ ಪರಿಚಯ ಮೊದಲೇ ಇರಲಿಲ್ಲ. ಕಿಚಡಿ ಕೊಟ್ರೇಶ್ ಎಂಬುವವರು ಶ್ರೀಗಳನ್ನು ನನಗೆ ಪರಿಚಯ ಮಾಡಿಕೊಟ್ಟರು" ಎಂದು ಅವರು ಹೇಳಿಕೊಂಡಿದ್ದಾರೆ.

ಮೋಸದ ಆರೋಪ: ಶ್ರೀಗಳು ಆರಂಭದಲ್ಲಿ ಬಿ.ಸಿ. ಉಮಾಪತಿ ಎಂಬುವವರನ್ನು "ಅಪ್ಪಾಜಿ ಅಪ್ಪಾಜಿ" ಎಂದು ಅತಿಯಾದ ಗೌರವ ಕೊಟ್ಟು ನಂಬಿಸಿ, ಕೊನೆಗೆ ಅವರಿಗೆ ಮೋಸ ಮಾಡಿದರು ಎನ್ನುವ ಗಂಭೀರವಾದ ಮಾತನ್ನು ಸೋಮನಗೌಡರು ಈ ವಿಡಿಯೋದಲ್ಲಿ ಆಡಿದ್ದಾರೆ.

ಸಂದಿಗ್ಧತೆಯಲ್ಲಿ ಸೋಮನಗೌಡ ಮಾಲಿ ಪಾಟೀಲ್

ವಚನಾನಂದ ಶ್ರೀಗಳನ್ನು ಸಂಘದಿಂದ ಉಚ್ಚಾಟಿಸಿದ ಬಳಿಕ ಸೋಮನಗೌಡರು ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಬಹಳ ದಿನಗಳ ನಂತರ ನಿನ್ನೆ ಸುದ್ದಿಗೋಷ್ಠಿಯಲ್ಲಿ ಪ್ರತ್ಯಕ್ಷರಾಗಿ ಟ್ರಸ್ಟಿಗಳ ವಿರುದ್ಧ ಗುಡುಗಿದ್ದರು. ಆದರೆ ಅವರು ಗುಡುಗಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದು ನೋಡಿದರೆ, ಅವರ ವಿರುದ್ಧ ಒಂದು ದೊಡ್ಡ ಪಡೆಯೇ ಸಜ್ಜಾಗಿ ನಿಂತಂತಿದೆ.

ಒಂದು ಕಡೆ ಹಣ ಪಡೆಯುತ್ತಿರುವ ವಿಡಿಯೋ, ಇನ್ನೊಂದು ಕಡೆ ಶ್ರೀಗಳ ಬಗ್ಗೆ ಆಡಿರುವ ಮಾತುಗಳು – ಇವೆರಡೂ ಈಗ ಸೋಮನಗೌಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸಬೇಕು ಎಂದು ಹೋರಾಟ ನಡೆಯುತ್ತಿರುವ ಈ ಸಂದರ್ಭದಲ್ಲಿ, ಸಂಘದ ಪದಾಧಿಕಾರಿಗಳ ನಡುವಿನ ಈ ಕೆಸರೆರಚಾಟ ಸಾಮಾನ್ಯ ಜನರಿಗೆ ಬೇಸರ ತರಿಸಿದೆ. ಬಹಿರಂಗವಾಗಿ ಸಮಾಜದ ಸೇವೆ ಎಂದು ಹೇಳುವವರು, ತೆರೆಯ ಹಿಂದೆ ಇಂತಹ ವ್ಯವಹಾರಗಳಲ್ಲಿ ತೊಡಗಿದ್ದಾರೆಯೇ? ಎಂಬ ಆಕ್ರೋಶ ಭಕ್ತರಲ್ಲಿ ವ್ಯಕ್ತವಾಗುತ್ತಿದೆ.

Latest News