ಕೆಲವೊಮ್ಮೆ ಸಣ್ಣ ತಪ್ಪುಗಳು ದೊಡ್ಡ ಕನಸುಗಳನ್ನೇ ಬಲಿ ಪಡೆಯುತ್ತವೆ ಅನ್ನೋದಕ್ಕೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕಣ್ಣಿಲ್ಲದಿದ್ದರೂ ಕನಸು ಕಂಡ ಲೀಸಾ ಖಾನಮ್ ಎಂಬ ಛಲಗಾರ್ತಿ, ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ಒಂದೆರಡು ದಿನ ಕಣ್ಣೀರು ಹಾಕಬೇಕಾಯಿತು. ಆದರೆ ಈಗ ಆಕೆ ಜಿಲ್ಲೆಗೆ ಟಾಪರ್ ಆಗಿ ಮಿಂಚುತ್ತಿದ್ದಾರೆ.
ಶಿರಸಿಯ ಲೀಸಾ ಖಾನಮ್ ಒಬ್ಬ ಜನ್ಮಜಾತ ಅಂಧ ವಿದ್ಯಾರ್ಥಿನಿ. ದೃಷ್ಟಿ ಇಲ್ಲದಿದ್ದರೂ ಅಚಲ ಆತ್ಮವಿಶ್ವಾಸದಿಂದ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸಿದ್ದರು. ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗುವ ಪಕ್ಕಾ ಭರವಸೆ ಅವರಿಗಿತ್ತು. ಆದರೆ, ಫಲಿತಾಂಶದ ದಿನ ಅವರ ಪಾಲಿಗೆ ಸಿಹಿ ಸುದ್ದಿಯ ಬದಲು ಬರಸಿಡಿಲು ಬಡಿದಂತಾಯಿತು.
ಸಮಾಜ ವಿಜ್ಞಾನ ಪರೀಕ್ಷೆಯನ್ನು ಅತ್ಯುತ್ತಮವಾಗಿ ಬರೆದಿದ್ದರೂ, ಮಂಡಳಿಯ ಎಡವಟ್ಟಿನಿಂದಾಗಿ ಲೀಸಾ ಅವರ ರಿಸಲ್ಟ್‌ನಲ್ಲಿ ಗೈರು ಹಾಜರಿ ಎಂದು ನಮೂದಿಸಲಾಗಿತ್ತು. 80% ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ ಆ ಸಾಧಕಿ, ಈ ತಾಂತ್ರಿಕ ಲೋಪದಿಂದಾಗಿ ಫೇಲ್ ಎಂಬ ಹಣೆಪಟ್ಟಿ ಹೊತ್ತು ಅಕ್ಷರಶಃ ಕಂಗಾಲಾಗಿದ್ದರು. ಕಣ್ಣಿಲ್ಲದಿದ್ದರೂ ಕನಸು ಕಂಡ ಹುಡುಗಿಗೆ ವ್ಯವಸ್ಥೆಯ ಸಣ್ಣ ತಪ್ಪು ಬೆಟ್ಟದಷ್ಟು ಆಘಾತ ನೀಡಿತ್ತು.
ಅಧಿಕಾರಿಗಳ ಈ ಯಡವಟ್ಟಿಗೆ ಲೀಸಾ ಮೌನವಾಗಿ ಕೂರಲಿಲ್ಲ. ತನ್ನ ಹಾಲ್ ಟಿಕೆಟ್ ಮೇಲೆ ಪರೀಕ್ಷಾ ಮೇಲ್ವಿಚಾರಕರು ಮಾಡಿದ್ದ ಸಹಿಯನ್ನೇ ಆಯುಧವನ್ನಾಗಿ ಮಾಡಿಕೊಂಡರು. ಮಾಧ್ಯಮಗಳ ಮೂಲಕ ಲೀಸಾ ಪೋಷಕರು ಈ ಅನ್ಯಾಯವನ್ನು ಪ್ರಶ್ನಿಸಿದರು. ಯಾವಾಗ ಸುದ್ದಿ ದೊಡ್ಡದಾಯಿತೋ, ಆಗ ಎಚ್ಚೆತ್ತುಕೊಂಡ ಬೋರ್ಡ್‌ನವರು ಮರುಪರಿಶೀಲನೆ ನಡೆಸಿದರು.
ಜಿಲ್ಲೆಗೆ ಟಾಪರ್ ಆದ 'ಫೇಲ್' ಆಗಿದ್ದ ಹುಡುಗಿ!
ಪರೀಕ್ಷಾ ಮಂಡಳಿ ತನ್ನ ತಪ್ಪನ್ನು ಸರಿಪಡಿಸಿಕೊಂಡು ಹೊಸ ಅಂಕಪಟ್ಟಿ ನೀಡಿದಾಗ ಎಲ್ಲರಿಗೂ ಶಾಕ್! ಯಾಕಂದ್ರೆ, ಫೇಲ್ ಎಂದು ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಲೀಸಾ ಈಗ 625ಕ್ಕೆ ಬರೋಬ್ಬರಿ 603 ಅಂಕ ಪಡೆದಿದ್ದಾರೆ.
ಅವರ ಅಂಕಗಳ ಕಮಾಲ್ ನೋಡಿ:
ಕನ್ನಡ: 100/100 (ಪರ್ಫೆಕ್ಟ್ ಸ್ಕೋರ್!)
ಸಮಾಜ ವಿಜ್ಞಾನ: 97 (ಯಾವ ವಿಷಯದಲ್ಲಿ ಫೇಲ್ ಅಂದಿದ್ದರೋ ಅದರಲ್ಲೇ ಇಷ್ಟು ಅಂಕ!)
ಉರ್ದು: 124
ಇಕನಾಮಿಕ್ಸ್: 98
ಇತರೆ ವಿಷಯಗಳು: ಸರಿಸುಮಾರು 90ಕ್ಕೂ ಹೆಚ್ಚು ಅಂಕಗಳು.
ಅಂಧ ವಿದ್ಯಾರ್ಥಿಗಳ ಪೈಕಿ ಲೀಸಾ ಇಡೀ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. ಇದು ಲೀಸಾ ಅವರ ಆತ್ಮವಿಶ್ವಾಸಕ್ಕೆ ಸಂದ ಜಯ.
ದೃಷ್ಟಿ ಇಲ್ಲದಿದ್ದರೂ ಸಮಾಜದ ದೃಷ್ಟಿಕೋನವನ್ನು ಬದಲಿಸುವಂತಹ ಸಾಧನೆ ಲೀಸಾ ಅವರಿಂದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಿದ್ದ ಒಂದು ದೊಡ್ಡ ಪ್ರತಿಭೆ, ಕೊನೆಗೂ ನ್ಯಾಯ ಗೆದ್ದಿದೆ ಎಂದು ಖುಷಿ ಪಡುತ್ತಿದೆ. ಶಿರಸಿಯ ಪ್ರತಿ ಗಲ್ಲಿಯಲ್ಲೂ ಈಗ ಲೀಸಾ ಸಾಧನೆಯದ್ದೇ ಮಾತು.
ಸೋಲು ಅನ್ನೋದು ಅಂತ್ಯವಲ್ಲ, ಅದು ಗೆಲುವಿನ ಹಾದಿಯ ಸಣ್ಣ ತಿರುವು ಅಷ್ಟೇ ಅನ್ನೋದನ್ನ ಲೀಸಾ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.