ತುಮಕೂರಿನ ಸಿದ್ಧಗಂಗಾ ಮಠ ಅಂದಮೇಲೆ ಅಲ್ಲಿ ಅನ್ನ, ಅಕ್ಷರ ಮತ್ತು ಆಶ್ರಯದ ದಾಸೋಹಕ್ಕೆ ಯಾವತ್ತೂ ಕೊರತೆಯಿಲ್ಲ. 'ನಡೆದಾಡುವ ದೇವರು' ಎಂದೇ ಖ್ಯಾತರಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಹಾಕಿಕೊಟ್ಟ ಈ ದಾರಿಯಲ್ಲಿ ಮಠ ಇಂದಿಗೂ ಸಾಗುತ್ತಿದೆ. ಇಂದು ಶ್ರೀಗಳ 119ನೇ ಜನ್ಮದಿನೋತ್ಸವದ ಅಂಗವಾಗಿ ಮಠದಲ್ಲಿ ಅತ್ಯಂತ ಅರ್ಥಪೂರ್ಣ ಮತ್ತು ವಿಶಿಷ್ಟವಾದ ಕಾರ್ಯಕ್ರಮವೊಂದು ನಡೆಯಿತು. ಅದೇ 119 ಮಕ್ಕಳಿಗೆ ನಾಮಕರಣೋತ್ಸವ!
ಶ್ರೀಗಳ ಹೆಸರನ್ನು ಮತ್ತು ಅವರ ಆದರ್ಶಗಳನ್ನು ಮುಂದಿನ ಪೀಳಿಗೆಯಲ್ಲೂ ಜೀವಂತವಾಗಿರಿಸಬೇಕು ಎಂಬ ಉದ್ದೇಶದಿಂದ ಶಿವಕುಮಾರ ಟ್ರಸ್ಟ್ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಶ್ರೀಗಳ ಜನ್ಮದಿನದ ಸಂಖ್ಯೆಗೆ ಅನುಗುಣವಾಗಿ ಅಂದರೆ 119ನೇ ವರ್ಷದ ನೆನಪಿಗಾಗಿ 119 ಕಂದಮ್ಮಗಳಿಗೆ ನಾಮಕರಣ ಮಾಡಲಾಯಿತು. ಈ ಸಂಭ್ರಮಕ್ಕೆ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಾಕ್ಷಿಯಾಗಿ ಮಕ್ಕಳಿಗೆ ಆಶೀರ್ವದಿಸಿದರು.
ವಿಶೇಷ ಅಂದ್ರೆ, ಇಲ್ಲಿ ನಾಮಕರಣಗೊಂಡ ಎಲ್ಲಾ ಗಂಡು ಮಕ್ಕಳಿಗೆ 'ಶಿವಕುಮಾರ' ಎಂದು ಹಾಗೂ ಹೆಣ್ಣು ಮಕ್ಕಳಿಗೆ 'ಶಿವಾನಿ' ಎಂದು ಹೆಸರಿಡಲಾಯಿತು. ಮಠದ ವತಿಯಿಂದ ಈ ಪುಟ್ಟ ಕಂದಮ್ಮಗಳಿಗೆ ತೊಟ್ಟಿಲು, ಹಾಸಿಗೆ ಮತ್ತು ಸೊಳ್ಳೆ ಪರದೆಗಳನ್ನು ಉಚಿತವಾಗಿ ನೀಡುವ ಮೂಲಕ ದಾಸೋಹ ಪರಂಪರೆಯನ್ನು ಎತ್ತಿ ಹಿಡಿಯಲಾಯಿತು.
ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಅಂದ್ರೆ ಅದು ಜಾತಿ-ಧರ್ಮದ ಹಂಗಿಲ್ಲದೆ ನಡೆದದ್ದು. ಶ್ರೀಗಳ ಆಶೀರ್ವಾದ ಪಡೆಯಲು ಕೇವಲ ಹಿಂದೂ ಧರ್ಮದವರು ಮಾತ್ರವಲ್ಲದೆ, ಬೇರೆ ಬೇರೆ ಧರ್ಮದ ಪೋಷಕರು ಕೂಡ ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಆಂಧ್ರ ಮೂಲದ ಕ್ರಿಶ್ಚಿಯನ್ ಸಮುದಾಯದ ಇಸ್ತ್ರಾ ಎಂಬುವವರು ತಮ್ಮ ಮಗಳಿಗೆ 'ಶಿವಾನಿ' ಎಂದು ಹೆಸರಿಟ್ಟು ಸಂಭ್ರಮಿಸಿದರು. "ಧರ್ಮ ಯಾವುದಾದರೇನು, ದೇವರು ಒಬ್ಬನೇ. ನಮ್ಮ ಮಗುವಿನ ಭವಿಷ್ಯ ಚೆನ್ನಾಗಿರಲಿ ಎಂದು ಶ್ರೀಗಳ ಹೆಸರಿಟ್ಟಿದ್ದೇವೆ" ಎಂದು ಅವರು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
20 ವರ್ಷದ ಕಾಯುವಿಕೆಗೆ ಸಿಕ್ಕ ವರ
ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತುಮಕೂರಿನ ದಂಪತಿಯ ಕಥೆ ಅಕ್ಷರಶಃ ಕಣ್ಣೀರು ತರಿಸುವಂತಿತ್ತು. ಮದುವೆಯಾಗಿ 20 ವರ್ಷ ಕಳೆದರೂ ಮಗುವಿಲ್ಲದೆ ಈ ದಂಪತಿ ಆಸ್ಪತ್ರೆ, ದೇವಸ್ಥಾನ ಎಂದು ಅಲೆದಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಕೊನೆಗೂ ಶ್ರೀಗಳ ಅನುಗ್ರಹದಿಂದ ತಮಗೆ ಮಗುವಾಗಿದೆ ಎಂಬ ನಂಬಿಕೆಯಲ್ಲಿ ಅವರು ಮಗುವಿಗೆ 'ಶಿವಕುಮಾರ' ಎಂದು ಹೆಸರಿಟ್ಟು ಧನ್ಯತೆ ಮೆರೆದರು.
ಶಿವಕುಮಾರ ಸ್ವಾಮೀಜಿಗಳು ಬರೀ ಒಬ್ಬ ಸಂತರಾಗಿರಲಿಲ್ಲ, ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಬೆಳಕಾದವರು. ಅವರ ಹೆಸರನ್ನು ಈ ರೀತಿ ಮಕ್ಕಳ ಮೂಲಕ ಮುಂದುವರೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಿದ್ಧಗಂಗಾ ಮಠದ ಈ ವಿಶಿಷ್ಟ ಕಾರ್ಯಕ್ರಮವು ಶ್ರೀಗಳ ಮೇಲಿರುವ ಭಕ್ತಿ ಮತ್ತು ಅವರ ತತ್ವಗಳು ಎಂದಿಗೂ ಅಜರಾಮರ ಎಂಬುದನ್ನು ಸಾಬೀತುಪಡಿಸಿದೆ.