ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದ ಪಕ್ಕದಲ್ಲಿರುವ ಅಮೃತ್ ಲೈಫ್ ಲೈನ್ ಖಾಸಗಿ ಆಸ್ಪತ್ರೆ ಇದೀಗ ಭಾರಿ ವಿವಾದದ ಸುಳಿಗೆ ಸಿಲುಕಿದೆ. ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 48 ವರ್ಷದ ದೇವಿ ಬಾಯಿ ಎಂಬ ಮಹಿಳೆ, ಇದೀಗ ಕೋಮಾ ಸ್ಥಿತಿಗೆ ತಲುಪಿದ್ದು, ಕುಟುಂಬಸ್ಥರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ದೇವಿ ಬಾಯಿ ಅವರನ್ನು ಮಾಚ್ 11ರಂದು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ, ಅಂದರೆ ಮಾರ್ಚ್ 12ರ ರಾತ್ರಿ ವೈದ್ಯರು ಹರ್ನಿಯಾ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಮಾಡುವ ಮುನ್ನ ಬಹಳ ಲವಲವಿಕೆಯಿಂದ ಇದ್ದ ದೇವಿ ಬಾಯಿ, ಶಸ್ತ್ರಚಿಕಿತ್ಸೆಯ ನಂತರ ಇದ್ದಕ್ಕಿದ್ದಂತೆ ಕೋಮಾ ಸ್ಥಿತಿಗೆ ಜಾರಿದ್ದಾರೆ. ಕುಟುಂಬಸ್ಥರ ಪ್ರಕಾರ, ವೈದ್ಯರು ನೀಡಿದ 'ಹೈಡೋಸ್' (ಹೆಚ್ಚಿನ ಪ್ರಮಾಣದ) ಔಷಧಿಯೇ ಈ ಅನಾಹುತಕ್ಕೆ ಕಾರಣ. ಶಸ್ತ್ರಚಿಕಿತ್ಸೆ ನಡೆದ ಬಳಿಕ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ, ಸಾವು-ಬದುಕಿನ ನಡುವೆ ಹೋರಾಡುವಂತಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಘಟನೆ ನಡೆದು ಈಗಾಗಲೇ 12 ದಿನಗಳು ಕಳೆದಿವೆ. ಆದರೆ, ಆಸ್ಪತ್ರೆಯ ಮುಖ್ಯಸ್ಥರು ಇದುವರೆಗೂ ರೋಗಿಯ ಸ್ಥಿತಿಯ ಬಗ್ಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂಬುದು ಸಂಬಂಧಿಕರ ಸಿಟ್ಟಿಗೆ ಕಾರಣವಾಗಿದೆ. ಆಸ್ಪತ್ರೆಗೆ ನುಗ್ಗಿದ ರೋಗಿಯ ಅಳಿಯ ಕಾಂತರಾಜ್ ಮತ್ತು ಸಂಬಂಧಿ ಉಷಾ ನಾಯ್ಕ್ ಅವರು, ಮೂರ್ನಾಲ್ಕು ವೈದ್ಯರ ನಿರ್ಲಕ್ಷ್ಯದಿಂದಾಗಿ ನಮ್ಮವರ ಸ್ಥಿತಿ ಹೀಗಾಗಿದೆ. ಆಪರೇಷನ್ ಮೊದಲು ಆರೋಗ್ಯವಾಗಿದ್ದವರು, ಆಸ್ಪತ್ರೆಯ ಎಡವಟ್ಟಿನಿಂದ ಕೋಮಾಗೆ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಧೋರಣೆಯಿಂದ ಬೇಸತ್ತ ಕುಟುಂಬದವರು ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ, ವೈದ್ಯರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನು ಆಸ್ಪತ್ರೆಯ ಸರ್ಜನ್ ಡಾ. ಧನಂಜಯ್ ಮತ್ತು ಜನರಲ್ ಫಿಸಿಷಿಯನ್ ಡಾ. ಮಧುಸೂಧನ್ ಅವರು ತಳ್ಳಿಹಾಕಿದ್ದಾರೆ. "ರೋಗಿ ಕೋಮಾಗೆ ಜಾರಿದ್ದಕ್ಕೂ ಮತ್ತು ನಾವು ಮಾಡಿದ ಹರ್ನಿಯಾ ಆಪರೇಷನ್‌ಗೂ ಯಾವುದೇ ಸಂಬಂಧವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯವಾಗಿ ಆಪರೇಷನ್ ಯಶಸ್ವಿಯಾಗಿತ್ತು ಎಂಬುದು ಅವರ ವಾದ.
ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ದೇವಿ ಬಾಯಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಚೇತರಿಕೆಯತ್ತ ಸಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯಕೀಯ ಲೋಪದ ಆರೋಪಗಳು ಬರುವುದು ಹೊಸದೇನಲ್ಲ, ಆದರೆ ಇಂತಹ ಪ್ರಕರಣಗಳಲ್ಲಿ ರೋಗಿಯ ಜೀವದ ಜೊತೆ ಚೆಲ್ಲಾಟವಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.