ಬರೋಬ್ಬರಿ 4,500 ಕೋಟಿ ರೂ. ವಂಚನೆ - ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಅರೆಸ್ಟ್!!

ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡುವ ವಂಚಕರ ಜಾಲಕ್ಕೆ ಬ್ರೇಕ್ ಬಿದ್ದಿದೆ. ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದ ಬರೋಬ್ಬರಿ 4,500 ಕೋಟಿ ರೂಪಾಯಿಗಳ ಬೃಹತ್ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪ್ರಸಿದ್ಧ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ನನ್ನು ಶನಿವಾರ ಪೊಲೀಸರು ಬಿಗಿ ಭದ್ರತೆಯಲ್ಲಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಆರೋಪಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ (ಜಪ್ತಿ) ಪ್ರಕ್ರಿಯೆಯೂ ಭರದಿಂದ ಸಾಗಿದೆ!

35 ಸಾವಿರ ಜನರಿಗೆ ಟೋಪಿ; | Photo Credit: https://www.instagram.com/shivamassociatesbgm/reels/
35 ಸಾವಿರ ಜನರಿಗೆ ಟೋಪಿ; | Photo Credit: https://www.instagram.com/shivamassociatesbgm/reels/

ಆರ್‌ಬಿಐ, ಸೆಬಿ ಪರ್ಮಿಷನ್ ಇಲ್ಲದೆ 35 ಸಾವಿರ ಜನರಿಗೆ ಟೋಪಿ;

ಬೆಳಗಾವಿ ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ ಗುಲಾಬ್ರಾವ್ ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ ಈ ಹಗರಣದ ಕಂಪ್ಲೀಟ್ ಡೀಟೇಲ್ಸ್ ಹಂಚಿಕೊಂಡಿದ್ದಾರೆ. ಆರೋಪಿ ಶಿವಾನಂದ ನೀಲಣ್ಣನವರ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಗಲಿ ಅಥವಾ ಸೆಬಿ (SEBI) ಇಲಾಖೆಯಿಂದಾಗಲಿ ಯಾವುದೇ ಅಧಿಕೃತ ಅನುಮೋದನೆ ಅಥವಾ ಪರವಾನಗಿ ಪಡೆದಿರಲಿಲ್ಲ. ಆದರೂ ಸಾರ್ವಜನಿಕರಿಗೆ ವಾರ್ಷಿಕ ಬರೋಬ್ಬರಿ ಶೇಕಡಾ 36 ರಷ್ಟು ಭರ್ಜರಿ ಬಡ್ಡಿ ನೀಡುವುದಾಗಿ ನಂಬಿಸಿ, ಸಾವಿರಾರು ಕೋಟಿ ರೂಪಾಯಿ ಹಣವನ್ನು ಹೂಡಿಕೆದಾರರಿಂದ ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಾನೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸರಿಸುಮಾರು 35,000 ಕ್ಕೂ ಹೆಚ್ಚು ಸಾಮಾನ್ಯ ಜನರು ಈತನ ಮಾತು ನಂಬಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತಂದು ಶಿವಂ ಅಸೋಸಿಯೇಟ್ಸ್‌ನಲ್ಲಿ ಇನ್ವೆಸ್ಟ್ ಮಾಡಿ ಮೋಸಹೋಗಿದ್ದಾರೆ. ಇದು ಮೇಲ್ನೋಟಕ್ಕೆ ಬಹುಕೋಟಿ ವಂಚನೆ ಪ್ರಕರಣ ಎಂದು ಕನ್ಫರ್ಮ್ ಆಗಿದ್ದು, ಕಂಪ್ಲೀಟ್ ಆಡಿಟಿಂಗ್ ಮುಗಿದ ನಂತರವಷ್ಟೇ ವಂಚನೆಯ ಅಸಲಿ ಮೊತ್ತ ಎಷ್ಟು ಎಂಬುದು ಹೊರಬರಲಿದೆ.

ಕಚೇರಿಗಳ ಮೇಲೆ ಖಾಕಿ ದಾಳಿ; ಹೈಡ್ರಾಮಾ ಅಂತ್ಯ!

ಕಳೆದ ಎರಡು ದಿನಗಳಿಂದ ಈ ಸಂಸ್ಥೆಯ ಕಳ್ಳಾಟದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು, ಶುಕ್ರವಾರ ಸಂಜೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಕಠಿಣವಾದ ಕೆಪಿಐಡಿ (ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ) ಕಾಯ್ದೆ ಹಾಗೂ ಬಡ್ಸ್ (ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ) ಕಾಯ್ದೆಯಡಿ ಕೇಸ್ ಬುಕ್ ಮಾಡಲಾಗಿದೆ.

ನಿನ್ನೆಯಷ್ಟೇ ಬೆಳಗಾವಿಯ ಶಿವಬಸವನಗರದಲ್ಲಿರುವ ಶಿವಂ ಅಸೋಸಿಯೇಟ್ಸ್ ಮುಖ್ಯ ಕಚೇರಿ ಸೇರಿದಂತೆ ಒಟ್ಟು ಎರಡು ಪ್ರಮುಖ ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ಮಿಂಚಿನ ದಾಳಿ ನಡೆಸಿತ್ತು. ಈ ವೇಳೆ ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣದ ವ್ಯವಹಾರಗಳು, ವಿವಿಧ ಇನ್ವೆಸ್ಟ್‌ಮೆಂಟ್ ಸ್ಕೀಮ್‌ಗಳು ಹಾಗೂ ಕೋಟ್ಯಂತರ ರೂಪಾಯಿ ಹೂಡಿಕೆಯ ಅಕ್ರಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೋರಲಿದ್ದಾರೆ.

ಆಪ್ ಮೂಲಕ ಕೋಟಿ ಕೋಟಿ ಕೊಳ್ಳೆ - ಆಸ್ತಿ ಜಪ್ತಿ ಕಾರ್ಯ ಚುರುಕು!

ಮತ್ತೊಂದೆಡೆ, ಜಿಲ್ಲಾಧಿಕಾರಿಗಳ ಕಡಕ್ ಆದೇಶದ ಮೇರೆಗೆ ಕಳೆದ ಎರಡು ದಿನಗಳಿಂದ ಉಪ ವಿಭಾಗಾಧಿಕಾರಿ ಶ್ರವಣ್‌ ನಾಯಕ್, ಸಹಕಾರ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಜಂಟಿ ಅಧಿಕಾರಿಗಳ ತಂಡವು ವಂಚಕ ಶಿವಾನಂದನಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡುವ ಆಪರೇಷನ್ ಶುರು ಮಾಡಿದೆ.

ಮಾಹಿತಿಯ ಪ್ರಕಾರ, 2020ರಲ್ಲಿ ಈ ಶಿವಂ ಅಸೋಸಿಯೇಟ್‌ ಸಂಸ್ಥೆ ನೋಂದಣಿಯಾಗಿದ್ದು, ಅಂದಿನಿಂದಲೂ ‘ಆಕ್ಯೂಮೆನ್‌ ಆಪ್’ (Acumen App) ಮೂಲಕ ಅತ್ಯಂತ ವ್ಯವಸ್ಥಿತವಾಗಿ ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಂದ ಕೋಟಿ ಕೋಟಿ ಹಣವನ್ನು ಕಲೆಕ್ಟ್ ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಸದ್ಯಕ್ಕೆ ಪೊಲೀಸರು ಆರೋಪಿಯ ಬ್ಯಾಂಕ್ ಅಕೌಂಟ್‌ಗಳನ್ನು ಫ್ರೀಜ್ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ!

Latest News

Related News