ಜಲಸಮಾಧಿಯಾದ 11 ದುರ್ದೈವಿಗಳು - ಭಟ್ಕಳ ದುರಂತದ ಮೃತರ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರದಿಂದ ಪರಿಹಾರ ಘೋಷಣೆ!!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಇಡೀ ನಾಡೇ ಕಣ್ಣೀರು ಹಾಕುವಂತಹ ಅತ್ಯಂತ ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ವೆಂಕಟಾಪುರ ನದಿಯಲ್ಲಿ ಕಪ್ಪೆಚಿಪ್ಪು (ಮಳವಿ) ಹೆಕ್ಕಲು ಹೋದ ಒಂದೇ ಹಳ್ಳಿಯ 11 ಮಂದಿ ದುರ್ದೈವಿಗಳು ಏಕಾಏಕಿ ಬಂದ ಭೀಕರ ಜಲಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.

ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ, ಜನರಿಂದ ಸಾಂತ್ವನ! | Photo Credit: bharatexpress.com/https://udayavani.com/
ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ, ಜನರಿಂದ ಸಾಂತ್ವನ! | Photo Credit: bharatexpress.com/https://udayavani.com/

ಇಂದು (ಮೇ 25, ಸೋಮವಾರ) ಸಾರದ ಹೊಳೆಯ ಒಂದೇ ಕಡೆ ಈ ಎಲ್ಲಾ 11 ಶವಗಳ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಗುತ್ತಿದ್ದು, ಸ್ಮಶಾನದಂತಾಗಿರುವ ಆ ಜಾಗದಲ್ಲಿ ಸಾವಿರಾರು ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಭಟ್ಕಳ ತಾಲೂಕಿನಾದ್ಯಂತ ನೀರವ ಮೌನ ಆವರಿಸಿದ್ದು, ಪ್ರತಿಯೊಬ್ಬರ ಕಣ್ಣಾಲಿಗಳು ಒದ್ದೆಯಾಗಿವೆ.

ಅಸಲಿಗೆ ಭಾನುವಾರ ಬೆಳಿಗ್ಗೆ ಆಗಿದ್ದೇನು?

ಯಾವಾಗಲೂ ಹಳ್ಳಿಯ ಜನ ಜೀವನೋಪಾಯಕ್ಕಾಗಿ ಅಥವಾ ಅಡುಗೆಗಾಗಿ ನದಿಗೆ ಹೋಗುವುದು ಸಹಜ. ಅದೇ ರೀತಿ ಭಾನುವಾರ ಬೆಳಿಗ್ಗೆ ಶಿರಾಲಿಯ ಸಾರದಹೊಳೆಯ ಒಟ್ಟು 14 ಜನ ನದಿಯ ದಡದಲ್ಲಿ ಮಳವಿ (ಕಪ್ಪೆಚಿಪ್ಪು) ಆರಿಸಲು ವೆಂಕಟಾಪುರ ನದಿಯ ತಟ್ಟಿಹಕ್ಕಲು ಎಂಬ ಜಾಗಕ್ಕೆ ಇಳಿದಿದ್ದರು. ಆದರೆ, ವಿಧಿಯ ಆಟ ಬೇರೆಯೇ ಇತ್ತು.

ಅವರು ಕಪ್ಪೆಚಿಪ್ಪು ಆರಿಸುತ್ತಿದ್ದಾಗ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಉಕ್ಕಿ ಬಂದಿದೆ. ಅಷ್ಟೇ ಅಲ್ಲದೆ, ಸಮುದ್ರದ ಭರತದ ನೀರು ಕೂಡ ಒಮ್ಮೆಗೆ ನದಿಗೆ ನುಗ್ಗಿದೆ ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಅವರೆಲ್ಲರೂ ನದಿಯ ದಡಕ್ಕೆ ಓಡಿ ಬರಲು ಪ್ರಯತ್ನಪಟ್ಟಿದ್ದಾರೆ. ಆದರೆ ನೀರಿನ ಭೋರ್ಗರೆತ ಎಷ್ಟು ವೇಗವಾಗಿತ್ತೆಂದರೆ, ನೋಡ ನೋಡುತ್ತಿದ್ದಂತೆ 11 ಜನ ಪ್ರವಾಹದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್, ಅಲ್ಲೇ ಇದ್ದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಮೂರು ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕರುಳು ಕಿವುಚುವಂತಿದೆ ಊರಿನ ಪರಿಸ್ಥಿತಿ!

ಸೋಮವಾರ ಎಲ್ಲಾ 11 ಮೃತದೇಹಗಳನ್ನು ಸಾರದ ಹೊಳೆಯ ಒಂದೇ ಮೈದಾನದಂತಹ ಜಾಗದಲ್ಲಿ ಸಾಲಾಗಿ ಇಟ್ಟು ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಹೆತ್ತವರು, ಒಡಹುಟ್ಟಿದವರು ಹಾಗೂ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ನೋಡಲು ಅಸಾಧ್ಯವಾಗಿದೆ. ಇಡೀ ಊರಿಗೆ ಊರೇ ಕಣ್ಣೀರಿನಲ್ಲಿ ಮುಳುಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಸ್ಥಳೀಯ ಯುವಕರು ಮತ್ತು ಹಲವು ಸಾಮಾಜಿಕ ಸಂಘಟನೆಗಳ ನೂರಾರು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಬಂದು ವಿಧಿವಿಧಾನಗಳಿಗೆ ನೆರವಾಗುತ್ತಿದ್ದಾರೆ.

ಮೃತರ ಕುಟುಂಬಕ್ಕೆ ನೆರವಿನ ಹಸ್ತ: ಸರಕಾರದಿಂದ ಪರಿಹಾರ

ಈ ಭೀಕರ ಜಲದುರಂತಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಆಸರೆಯಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ಘೋಷಿಸಿವೆ:

ರಾಜ್ಯ ಸರ್ಕಾರ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಪ್ರಕಟಿಸಿದೆ.

ಕೇಂದ್ರ ಸರ್ಕಾರ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಾಂತ್ವನ:

"ಇದೊಂದು ಅತ್ಯಂತ ದುರದೃಷ್ಟಕರ ಮತ್ತು ತೀವ್ರ ನೋವಿನ ಘಟನೆ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಸಂತ್ರಸ್ತ ಕುಟುಂಬಗಳಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಇನ್ನು ಹೆಚ್ಚಿನ ಸೂಕ್ತ ಸಹಾಯ ಒದಗಿಸಲು ನಾನು ವೈಯಕ್ತಿಕವಾಗಿ ಪ್ರಯತ್ನಿಸುತ್ತೇನೆ" ಎಂದು ಸಂಸದ ಕಾಗೇರಿ ಹೇಳಿದ್ದಾರೆ.

ನಾಲ್ಕು ಮಕ್ಕಳ ಜವಾಬ್ದಾರಿ ಹೊತ್ತ ಸಚಿವ ಮಂಕಾಳ ವೈದ್ಯ:

ಈ ದುರಂತದಲ್ಲಿ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡು ನಾಲ್ಕು ಜನ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಈ ಮಕ್ಕಳ ಪರಿಸ್ಥಿತಿ ಕಂಡು ಭಾವುಕರಾದ ಭಟ್ಕಳ ಶಾಸಕರೂ ಆಗಿರುವ ಸಚಿವ ಮಂಕಾಳ ವೈದ್ಯ ಅವರು, "ಆ ನಾಲ್ಕೂ ಮಕ್ಕಳ ಸಂಪೂರ್ಣ ಶಿಕ್ಷಣ ಮತ್ತು ಜೀವನದ ಜವಾಬ್ದಾರಿಯನ್ನು ನಾನು ವೈಯಕ್ತಿಕವಾಗಿ ವಹಿಸಿಕೊಳ್ಳುತ್ತೇನೆ. ಅವರಿಗೆ ನನ್ನ ಕಡೆಯಿಂದ ಕಂಪ್ಲೀಟ್ ನೆರವು ನೀಡುತ್ತೇನೆ" ಎಂದು ಭರವಸೆ ನೀಡಿದ್ದಾರೆ.

ಜಲಸಮಾಧಿಯಾದ ದುರ್ದೈವಿಗಳ ವಿವರ:

ಬಲಿಯಾದವರೆಲ್ಲರೂ ಶಿರಾಲಿಯ ಸಾರದಹೊಳೆ ಗ್ರಾಮದ ನಿವಾಸಿಗಳಾಗಿದ್ದಾರೆ. ಲಕ್ಷ್ಮೀ ಮಾದೇವ ನಾಯ್ಕ (38), ಮಾಲತಿ ಜಟ್ಟಪ್ಪ ನಾಯ್ಕ (38), ಲಕ್ಷ್ಮೀ ಅಣ್ಣಪ್ಪ ನಾಯ್ಕ (44), ಮಾಸ್ತಮ್ಮ ಮಂಜುನಾಥ ನಾಯ್ಕ (43), ಉಮೇಶ್ ಮಂಜುನಾಥ ನಾಯ್ಕ (42), ಲಕ್ಷ್ಮೀ ಶಿವರಾಮ ನಾಯ್ಕ (39), ಮಂಜಮ್ಮ ನಾಯ್ಕ (50), ಜ್ಯೋತಿ ನಾಗಪ್ಪ ನಾಯ್ಕ (37), ಲಕ್ಷ್ಮೀ ನಾಯ್ಕ, ನಾಗರತ್ನ ನಾಯ್ಕ (40) ಮತ್ತು ಮಾದೇವ ನಾಯ್ಕ (52) ಎಂಬುವವರು ನದಿಯಲ್ಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ.

ಪ್ರಕೃತಿಯ ವಿಕೋಪಕ್ಕೆ ಒಂದೇ ಹಳ್ಳಿಯ 11 ಜೀವಗಳು ಬಲಿಯಾಗಿರುವುದು ಎಂದಿಗೂ ಮರೆಯಲಾಗದ ಕರಾಳ ಕಲೆಯಾಗಿ ಉಳಿದುಕೊಂಡಿದೆ. ಆ ಕುಟುಂಬಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂಬುದೇ ಎಲ್ಲರ ಪ್ರಾರ್ಥನೆ. 

Latest News