Apr 17, 2026 Languages : ಕನ್ನಡ | English

ನಾಲ್ಕು ತಿಂಗಳ ಗರ್ಭಿಣಿ ಬಲಿ - ಹೊಟ್ಟೆಯಲ್ಲಿರೋ ಮಗು ಲೋಕ ನೋಡುವ ಮುನ್ನವೇ ಕಿರುಕುಳಕ್ಕೆ ಅಂತ್ಯ!!

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ತುಂಬಾನೇ ನೋವಿನ ಸಂಗತಿಯೊಂದು ನಡೆದಿದೆ. ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ನಾಲ್ಕು ತಿಂಗಳ ಗರ್ಭಿಣಿ ಶ್ವೇತಾ (30), ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆದರೆ ಶ್ವೇತಾ ಪೋಷಕರು ಮಾತ್ರ, "ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಇದು ಪತಿ ಮನೆಯವರೇ ಮಾಡಿದ ಕೊಲೆ" ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.

ಆಸ್ತಿ ಆಸೆಗೆ ಬಲಿಯಾಯ್ತಾ ಒಂದು ಜೀವ
ಆಸ್ತಿ ಆಸೆಗೆ ಬಲಿಯಾಯ್ತಾ ಒಂದು ಜೀವ

ಏನಿದು ಘಟನೆ?

ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ ಶ್ವೇತಾ ಅವರು ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿದ್ದರು. ಮಾರ್ಚ್ 29 ರಂದು ಶ್ವೇತಾ ಅವರ ಮೈಮೇಲೆ ಬೆಂಕಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು, ಚಿಕಿತ್ಸೆ ಫಲಕಾರಿಯಾಗದೆ ಶ್ವೇತಾ ಸಾವನ್ನಪ್ಪಿದ್ದಾರೆ. ಹೊಟ್ಟೆಯಲ್ಲಿದ್ದ ನಾಲ್ಕು ತಿಂಗಳ ಕಂದಮ್ಮನೂ ಕೂಡ ಲೋಕ ನೋಡುವ ಮುನ್ನವೇ ಕಣ್ಮುಚ್ಚಿದೆ.

ಆಸ್ತಿ ವಿಚಾರಕ್ಕೆ ಕಿರುಕುಳ?

ಶ್ವೇತಾ ಪೋಷಕರು ಹೇಳುವ ಪ್ರಕಾರ, ಮದುವೆಯಾದಾಗಿನಿಂದಲೂ ಮನೆಯ ಜಾಗದ ವಿಚಾರಕ್ಕೆ ಶ್ವೇತಾಗೆ ಕಿರುಕುಳ ನೀಡಲಾಗುತ್ತಿತ್ತು. ಅತ್ತೆ-ಮಾವನಿಗೆ ಹಿರಿಯ ಮಗ ಹೇಮಂತ್ ಮತ್ತು ಸೊಸೆ ದಿವ್ಯಾ ಎಂದರೆ ಅತಿಯಾದ ಪ್ರೀತಿಯಂತೆ. ಹೀಗಾಗಿ ಆಸ್ತಿ ವಿಚಾರದಲ್ಲಿ ಶ್ವೇತಾಳನ್ನು ಮನೆಯಿಂದ ಹೊರಹಾಕಲು ಹತ್ತಾರು ರೀತಿ ಚಿತ್ರಹಿಂಸೆ ನೀಡುತ್ತಿದ್ದರು ಎಂಬುದು ಪೋಷಕರ ಆರೋಪ. "ಅವರೇ ನಮ್ಮ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ, ಈಗ ಆತ್ಮಹತ್ಯೆ ಎಂದು ನಾಟಕವಾಡುತ್ತಿದ್ದಾರೆ" ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಪೊಲೀಸರ ಕ್ರಮ: ನಾಲ್ವರ ಬಂಧನ

ಈ ಸಂಬಂಧ ಶ್ವೇತಾ ಅವರ ಪೋಷಕರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ:

  • ಸಣ್ಣಪ್ಪ (ಮಾವ)

  • ಜಾನಕಿ (ಅತ್ತೆ)

  • ಹೇಮಂತ್ (ಭಾವ)

  • ದಿವ್ಯಾ (ಅತ್ತಿಗೆ)

ನ್ಯಾಯಕ್ಕಾಗಿ ಪೋಷಕರ ಮೊರೆ

ಮಗಳ ಶವದ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. "ನನ್ನ ಮಗಳು ಎಲ್ಲರನ್ನೂ ಉಳಿಸುವ ಕೆಲಸ ಮಾಡುತ್ತಿದ್ದ ನರ್ಸ್ ಆಗಿದ್ದಳು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ" ಎಂದು ತಂದೆ-ತಾಯಿ ಗೋಳಾಡುತ್ತಿದ್ದಾರೆ. ಗರ್ಭಿಣಿ ಮಗಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ತಮಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ಕುಟುಂಬವೊಂದರ ಆಸ್ತಿ ಆಸೆ ಮತ್ತು ಕಿರುಕುಳಕ್ಕೆ ಒಬ್ಬ ಜೀವ ಹಾಗೂ ಹುಟ್ಟಲಿರುವ ಮಗು ಬಲಿಯಾಗಿರುವುದು ನಿಜಕ್ಕೂ ದುರಂತ.

Latest News