ಸಾಗರದ ಅಳದಲ್ಲೂ ರಾರಾಜಿಸಿದ ತ್ರಿವರ್ಣ ಧ್ವಜ - ಗಿನ್ನೆಸ್ ದಾಖಲೆ ಬರೆದ ಬೆಂಗಳೂರಿನ ಸಾಹಸಿ ಶರತ್ ಅಶೋಕ್!!

ಭಾರತದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜವು ಸಾಗರದ ಆಳದಲ್ಲೂ ರಾರಾಜಿಸುವ ಮೂಲಕ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಉತ್ತುಂಗಕ್ಕೇರಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ 'ಸ್ವರಾಜ್‌ ದ್ವೀಪ್' (ಹ್ಯಾವ್ಲಾಕ್‌ ದ್ವೀಪ) ಸಮುದ್ರದ ನೀರಿನಲ್ಲಿ ಬೃಹತ್ ಗಾತ್ರದ ರಾಷ್ಟ್ರಧ್ವಜವನ್ನು ಅನಾವರಣ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿದೆ. ಈ ಅಸಾಮಾನ್ಯ ಹಾಗೂ ಐತಿಹಾಸಿಕ ಸಾಧನೆಯಲ್ಲಿ ಪ್ರಮುಖವಾಗಿ ಪಾಲ್ಗೊಂಡು ದೇಶದ ಹೆಮ್ಮೆಯನ್ನು ಹೆಚ್ಚಿಸಿದ ಬೆಂಗಳೂರಿನ ಹೆಮ್ಮೆಯ ಕನ್ನಡಿಗ ಶರತ್ ಅಶೋಕ್ ಅವರನ್ನು ಅಂಡಮಾನ್ ಮತ್ತು ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಅವರು ಅತ್ಯಂತ ಗೌರವಯುತವಾಗಿ ಸನ್ಮಾನಿಸಿದ್ದಾರೆ.

ಅಂಡಮಾನ್ ಸಮುದ್ರದಲ್ಲಿ ಬೃಹತ್ ಧ್ವಜ ಅನಾವರಣ
ಅಂಡಮಾನ್ ಸಮುದ್ರದಲ್ಲಿ ಬೃಹತ್ ಧ್ವಜ ಅನಾವರಣ

ಕಳೆದ 2026ರ ಮೇ 2 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸುಂದರ ಸ್ವರಾಜ್‌ ದ್ವೀಪದ ಸಮುದ್ರ ತೀರದಲ್ಲಿ ಈ ರೋಮಾಂಚಕಾರಿ ಘಟನೆ ಜರುಗಿತು. ಸುಮಾರು 200ಕ್ಕೂ ಅಧಿಕ ನುರಿತ ಸ್ಕೂಬಾ ಡೈವರ್‌ಗಳು ಒಟ್ಟಾಗಿ ಸೇರಿಕೊಂಡು ಭಾರತದ ಬೃಹತ್ ತ್ರಿವರ್ಣ ಧ್ವಜವನ್ನು ಸಮುದ್ರದ ಆಳಕ್ಕೆ ಹೊತ್ತೊಯ್ದು ನೀರಿನೊಳಗೆ ಅದ್ಧೂರಿಯಾಗಿ ಅನಾವರಣಗೊಳಿಸಿದರು.

ಈ ರಾಷ್ಟ್ರಧ್ವಜವು ಬರೋಬ್ಬರಿ 60x40 ಮೀಟರ್‌ (ಒಟ್ಟು 2,400 ಚದರ ಮೀಟರ್) ವಿಸ್ತೀರ್ಣವನ್ನು ಹೊಂದಿದ್ದು, ಇದು ವಿಶ್ವದಲ್ಲೇ ಒಂದು ವಿನೂತನ ಹಾಗೂ ಅತಿ ದೊಡ್ಡ ಪ್ರಯತ್ನವಾಗಿದೆ. ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ (ಕೋಸ್ಟ್ ಗಾರ್ಡ್), ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ನೆರವು ಮತ್ತು ಭದ್ರತೆಯೊಂದಿಗೆ ಡೈವರ್‌ಗಳ ಈ ತಂಡವು ಈ ಸಾಹಸವನ್ನು ಯಶಸ್ವಿಗೊಳಿಸಿತು. ದೇಶದಲ್ಲೇ ಮೊದಲ ಬಾರಿಗೆ ಇಂತಹ ಬೃಹತ್ ಗಾತ್ರದ ಧ್ವಜವನ್ನು ಸಮುದ್ರದ ನೀರಿನಲ್ಲಿ ಪ್ರದರ್ಶಿಸಿ ದಾಖಲೆ ಸೃಷ್ಟಿಸಲಾಗಿದ್ದು, ಈ ಅಪರೂಪದ ಸಾಧನೆಯು ಈಗ ಅಧಿಕೃತವಾಗಿ 'ಗಿನ್ನೆಸ್ ವಿಶ್ವ ದಾಖಲೆ'ಗೆ ಸೇರ್ಪಡೆಗೊಂಡಿದೆ.

ಈ ಐತಿಹಾಸಿಕ ದಾಖಲೆಯಲ್ಲಿ ಮುಂಚೂಣಿಯಲ್ಲಿ ನಿಂತು ಯಶಸ್ಸು ತಂದುಕೊಟ್ಟ ಬೆಂಗಳೂರಿನ ಸಾಹಸಿ ಶರತ್ ಅಶೋಕ್ ಅವರ ಸಾಧನೆಯನ್ನು ಗುರುತಿಸಿ, ಅಂಡಮಾನ್ ಮತ್ತು ನಿಕೋಬಾರ್‌ನ ರಾಜಭವನವಾದ 'ಲೋಕ ನಿವಾಸ'ದಲ್ಲಿ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಂಡಮಾನ್‌ನ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಅವರು ಶರತ್ ಅಶೋಕ್ ಅವರಿಗೆ ಅಧಿಕೃತ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ನೀಡಿ, ಶಾಲು ಹೊದಿಸಿ ಸತ್ಕರಿಸಿದರು. ದೇಶದ ಕೀರ್ತಿ ಪತಾಕೆಯನ್ನು ಸಮುದ್ರದ ಆಳದಲ್ಲಿ ಹಾರಿಸುವಲ್ಲಿ ಶರತ್ ತೋರಿದ ಶ್ರಮ ಮತ್ತು ಬದ್ಧತೆಯನ್ನು ಗವರ್ನರ್‌ಗಳು ಮುಕ್ತಕಂಠದಿಂದ ಪ್ರಶಂಸಿಸಿದರು.

ತಂದೆಯಾಗಿ ಹೆಮ್ಮೆಯ ಭಾವನೆ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್. ಅಶೋಕ ತಮ್ಮ ಮಗನ ಈ ಅಸಾಧಾರಣ ಸಾಧನೆಗೆ ಕರ್ನಾಟಕ ರಾಜ್ಯದ ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಹಿರಿಯ ರಾಜಕಾರಣಿ ಆರ್. ಅಶೋಕ ಅವರು ಅತೀವ ಸಂತಸ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಹಾಗೂ ತಮ್ಮ ಆನಂದವನ್ನು ಹಂಚಿಕೊಳ್ಳುತ್ತಾ ಅವರು ಮಾತನಾಡುತ್ತಾ ಭಾವುಕರಾದರು.

"ತಂದೆಯಾಗಿ ಇದು ನನ್ನ ಜೀವನದ ಅತ್ಯಂತ ಹೆಮ್ಮೆಯ ಮತ್ತು ಆನಂದದ ಕ್ಷಣವಾಗಿದೆ. ನನ್ನ ಮಗ ಶರತ್ ಸ್ವರಾಜ್‌ ದ್ವೀಪದಲ್ಲಿ ಇಂತಹ ಮಹತ್ವದ ಹಾಗೂ ದೇಶಭಕ್ತಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮತ್ತು ಅದು ಗಿನ್ನೆಸ್ ವಿಶ್ವ ದಾಖಲೆಗೆ ಸೇರಿರುವುದು ಮಾತ್ರವಲ್ಲದೆ, ಲೋಕ ನಿವಾಸದಲ್ಲಿ ಲೆಫ್ಟಿನೆಂಟ್ ಗವರ್ನರ್‌ಗಳಿಂದ ಸನ್ಮಾನ ಪಡೆದಿರುವುದು ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ಭಾವನಾತ್ಮಕ ಕ್ಷಣವಾಗಿದೆ" ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಸಾಗರದಾಳದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಸುರಕ್ಷಿತವಾಗಿ ಹಾರಿಸಲು ಮತ್ತು ಈ ಬೃಹತ್ ದಾಖಲೆ ನಿರ್ಮಿಸಲು ನನ್ನ ಮಗ ಹಾಗೂ ಇಡೀ ಡೈವಿಂಗ್ ತಂಡವು ತೋರಿದ ಅಸಾಧಾರಣ ಧೈರ್ಯ, ಸಮರ್ಪಣಾ ಮನೋಭಾವ, ಶಿಸ್ತು ಮತ್ತು ಕಠಿಣ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದರು. ದೇಶಕ್ಕೆ ಕೀರ್ತಿ ತರುವಂತಹ ಇಂತಹ ರಾಷ್ಟ್ರೀಯ ಮಟ್ಟದ ಕಾರ್ಯದಲ್ಲಿ ತಮ್ಮ ಮಗ ತನ್ನನ್ನು ತಾನು ತೊಡಗಿಸಿಕೊಂಡಿರುವುದನ್ನು ನೋಡುವುದು ಕೇವಲ ತಂದೆಯಾಗಿ ಮಾತ್ರವಲ್ಲ, ಒಬ್ಬ ಭಾರತೀಯನಾಗಿಯೂ ನನಗೆ ಅತ್ಯುನ್ನತ ಹೆಮ್ಮೆಯನ್ನು ತಂದಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಅಂಡಮಾನ್ ಸಮುದ್ರದ ಅಲೆಗಳ ನಡುವೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಗಿನ್ನೆಸ್ ದಾಖಲೆ ಬರೆದಿರುವ ಈ ಘಟನೆಯು ದೇಶದ ಪ್ರತಿಯೊಬ್ಬ ನಾಗರಿಕನ ಎದೆಯಲ್ಲಿ ದೇಶಭಕ್ತಿಯನ್ನು ಇಮ್ಮಡಿಗೊಳಿಸಿದೆ. ಈ ಐತಿಹಾಸಿಕ ಸಾಧನೆಯಲ್ಲಿ ಕನ್ನಡಿಗನೊಬ್ಬ ಪ್ರಮುಖ ಪಾತ್ರ ವಹಿಸಿರುವುದು ನಾಡಿಗೆ ಕಿರೀಟಪ್ರಾಯವಾಗಿದೆ. ಶರತ್ ಅಶೋಕ್ ಅವರ ಈ ಸಾಹಸಮಯ ಯಶಸ್ಸು ದೇಶದ ಯುವ ಜನತೆಗೆ ಸದಾ ಸ್ಫೂರ್ತಿದಾಯಕವಾಗಿದ್ದು, ಭಾರತದ ಧ್ವಜವು ಎಂದೆಂದಿಗೂ ಎತ್ತರದಲ್ಲಿ ಹಾರುತ್ತಿರಲಿ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿಯಾಗಿದೆ.