Apr 5, 2026 Languages : ಕನ್ನಡ | English

ಕೊಡಗಿನ ದಟ್ಟಾರಣ್ಯದಲ್ಲಿ 3 ದಿನಗಳ ಕಾಲ 'ರಿಯಲ್' ಸಾಹಸ - ಐಟಿ ಉದ್ಯೋಗಿ ಶರಣ್ಯ ಪತ್ತೆಯಾದ ರೋಚಕ ಕಥೆ!!

ಕೊಡಗಿನ ಅಂದವಾದ ಬೆಟ್ಟಗುಡ್ಡಗಳು ಎಷ್ಟು ಸುಂದರವೋ, ಅಲ್ಲಿನ ದಟ್ಟಾರಣ್ಯ ಅಷ್ಟೇ ಅಪಾಯಕಾರಿ ಕೂಡ ಹೌದು. ಕೊಡಗಿನ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಐಟಿ ಉದ್ಯೋಗಿ ಶರಣ್ಯ (36), ಸತತ ಮೂರು ದಿನಗಳ ಕಾಲ ಕಾಡಿನಲ್ಲೇ ಕಳೆದ ನಂತರ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಈ ಸುದ್ದಿಯೊಂದಿಗೆ ಕೊಡಗು ಜಿಲ್ಲಾಡಳಿತ ಮತ್ತು ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಧೈರ್ಯವಂತ ಚಾರಣಿಗನಿಗೆ ಸಿಕ್ಕ ಜಯ
ಧೈರ್ಯವಂತ ಚಾರಣಿಗನಿಗೆ ಸಿಕ್ಕ ಜಯ

ಕೇರಳದ ಕೊಚ್ಚಿ ಮೂಲದ ಶರಣ್ಯ ಅವರಿಗೆ ಚಾರಣ (Trekking) ಅಂದ್ರೆ ಪಾಣ. ಕಳೆದ 15 ವರ್ಷಗಳಿಂದ ದೇಶದ ಮೂಲೆಮೂಲೆಯಲ್ಲಿ ಟ್ರೆಕ್ಕಿಂಗ್ ಮಾಡಿರೋ ಅನುಭವ ಅವರಿಗಿದೆ. ಇದೇ ಹವ್ಯಾಸದ ಬೆನ್ನೇರಿ ಏಪ್ರಿಲ್ 2 ರಂದು ಅವರು ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಒಬ್ಬರೇ ಹೊರಟಿದ್ದರು. ಬೆಟ್ಟ ಹತ್ತಿ ವಾಪಸ್ ಬರುವಾಗ ದಾರಿ ತಪ್ಪಿ ಕಾಡಿನ ಮಧ್ಯೆ ಸಿಲುಕಿಕೊಂಡಿದ್ದರು.

ತಾವು ದಾರಿ ತಪ್ಪಿರೋ ವಿಷಯ ತಿಳಿಯುತ್ತಿದ್ದಂತೆಯೇ ಶರಣ್ಯ ಅವರು ತಂಗಿದ್ದ ಹೋಂಸ್ಟೇ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಆದರೆ, ದುರದೃಷ್ಟವಶಾತ್ ಅದೇ ಸಮಯದಲ್ಲಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದಾಗಿ ಅವರು ಎಲ್ಲಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗದೆ ಆತಂಕ ಶುರುವಾಗಿತ್ತು.

ಶರಣ್ಯ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಕೊಡಗು ಜಿಲ್ಲಾಡಳಿತ ಅಲರ್ಟ್ ಆಗಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕೂಡಲೇ ಹುಡುಕಾಟ ತೀವ್ರಗೊಳಿಸಲು ಆದೇಶಿಸಿದ್ದರು. ಅಷ್ಟೇ ಅಲ್ಲದೆ, ಕೇರಳದಲ್ಲಿ ಪ್ರಚಾರದಲ್ಲಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿಯಾದ ಶರಣ್ಯ ಕುಟುಂಬಸ್ಥರು, ತಮ್ಮ ಮಗಳನ್ನು ಹುಡುಕಿಕೊಡುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಅರಣ್ಯ ಇಲಾಖೆ, ಪೊಲೀಸರು, ಸ್ಥಳೀಯರು ಮತ್ತು ನಕ್ಸಲ್ ನಿಗ್ರಹ ಪಡೆ (ANF) ಕೂಡ ಕಾರ್ಯಾಚರಣೆಗೆ ಇಳಿಯಿತು. ಮನುಷ್ಯರು ಹೋಗಲಾಗದ ಜಾಗಗಳಲ್ಲಿ ಥರ್ಮಲ್ ಡ್ರೋಣ್‌ಗಳು ಮತ್ತು ಶ್ವಾನ ದಳವನ್ನು ಬಳಸಿ ಹಗಲಿರುಳು ಹುಡುಕಾಟ ನಡೆಸಲಾಯಿತು.

3 ದಿನಗಳ ನಂತರ ಸಿಕ್ಕಿತು ಜಯ

ಇಂದು ಬೆಳಗ್ಗೆ ಅರಣ್ಯದ ತಪ್ಪಲಿನಲ್ಲಿ ಶೋಧ ನಡೆಸುತ್ತಿದ್ದ ತಂಡಕ್ಕೆ ಶರಣ್ಯ ಪತ್ತೆಯಾಗಿದ್ದಾರೆ. ಸತತ ಮೂರು ದಿನಗಳ ಕಾಲ ಕಾಡಿನಲ್ಲಿ, ಪ್ರಾಣಿಗಳ ಭಯದ ನಡುವೆಯೂ ಶರಣ್ಯ ಧೈರ್ಯ ಕಳೆದುಕೊಂಡಿರಲಿಲ್ಲ. ಅವರಿಗೆ ಚಾರಣದ ಹಳೆ ಅನುಭವವಿದ್ದ ಕಾರಣ ಇಂತಹ ಕಠಿಣ ಪರಿಸ್ಥಿತಿಯಲ್ಲೂ ಬದುಕುಳಿಯಲು ಸಾಧ್ಯವಾಯಿತು ಎನ್ನಲಾಗುತ್ತಿದೆ. ಸದ್ಯ ಶರಣ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಚಾರಣಕ್ಕೆ ಹೋಗುವಾಗ ಸ್ಥಳೀಯ ಮಾರ್ಗದರ್ಶಕರ (Guide) ಸಹಾಯ ಪಡೆಯುವುದು ಬಹಳ ಮುಖ್ಯ. ಕೊಡಗಿನಂತಹ ದಟ್ಟವಾದ ಕಾಡುಗಳಲ್ಲಿ ದಾರಿ ತಪ್ಪುವುದು ತುಂಬಾ ಸುಲಭ. ನಿಮ್ಮ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಜಿಲ್ಲಾಡಳಿತ ಮತ್ತೊಮ್ಮೆ ಮನವಿ ಮಾಡಿದೆ.