ಜಗಳ ಬಿಡಿಸಲು ಹೈರಾಣಾದ ಡ್ರೈವರ್-ಕಂಡಕ್ಟರ್ - ಸೀಟಿಗಾಗಿ ಕಿತ್ತಾಡಿಕೊಂಡ ಇಬ್ಬರು ಮಹಿಳೆಯರ ವಿಡಿಯೋ ವೈರಲ್!!

ರಾಜ್ಯ ಸರ್ಕಾರದ 'ಶಕ್ತಿ' ಯೋಜನೆ ಬಂದಾಗಿನಿಂದ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಡಬಲ್ ಆಗಿರೋದು ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಹಾವೇರಿಯಲ್ಲಿ ನಿನ್ನೆ ನಡೆದ ಘಟನೆ ಮಾತ್ರ ಸ್ವಲ್ಪ ಜೋರಾಗಿಯೇ ಇತ್ತು. ಸೀಟಿಗಾಗಿ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡರೆ, ಇವರ ಜಗಳ ನೋಡಿ ಪುಟ್ಟ ಮಕ್ಕಳು ಭಯ ಬಿದ್ದು ಚೀರಾಡಿದ ಘಟನೆ ಹಾವೇರಿ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹಾವೇರಿ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಮಹಾಭಾರತ
ಹಾವೇರಿ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಮಹಾಭಾರತ

ನಡೆದಿದ್ದೇನು?

ಹಾವೇರಿಯಿಂದ ಲಕ್ಷ್ಮೇಶ್ವರಕ್ಕೆ ಹೋಗುವ 'ನಾನ್ ಸ್ಟಾಪ್' ಬಸ್ಸು ಹಾವೇರಿ ನಿಲ್ದಾಣಕ್ಕೆ ಬಂದು ನಿಂತಿದ್ದೇ ತಡ, ಯುದ್ಧ ಶುರುವಾದಂತಾಗಿತ್ತು. ಸಮಯ ಸಂಜೆಯಾಗುತ್ತಿತ್ತು, ಗದಗ ಕಡೆಗೆ ಹೋಗುವ ಬಸ್ಸುಗಳ ಸಂಖ್ಯೆ ಕಡಿಮೆ ಇದ್ದಿದ್ದರಿಂದ ನೂರಾರು ಜನ ಪ್ರಯಾಣಿಕರು ಒಮ್ಮೆಗೆ ಬಸ್ ಹತ್ತಲು ಮುಗಿಬಿದ್ದರು.

ಬಸ್ ಇರೋದು 50-60 ಸೀಟಿನದು, ಆದ್ರೆ ಹತ್ತಿದ್ದು ಮಾತ್ರ 120ಕ್ಕೂ ಅಧಿಕ ಜನ! "ನಾ ಮುಂದೆ, ತಾ ಮುಂದೆ" ಅಂತ ಬಸ್ ಹತ್ತಿದ ಮಹಿಳೆಯರಿಗೆ ಅಸಲಿ ಟೆನ್ಶನ್ ಶುರುವಾಗಿದ್ದೇ ಸೀಟಿಗಾಗಿ.

ಸೀಟಿಗಾಗಿ ಮಹಾಭಾರತ!

ಬಸ್ ಹತ್ತಿದ ಇಬ್ಬರು ಮಹಿಳೆಯರಿಗೆ ಒಂದೇ ಸೀಟಿನ ಮೇಲೆ ಕಣ್ಣು ಬಿದ್ದಿದೆ. ಅಷ್ಟೇ, ಅಲ್ಲಿಗೆ ಸಮಾಧಾನದ ಮಾತು ಮುಗಿದು 'ಸೀಟು ಸಮರ' ಶುರುವಾಯ್ತು. "ನಾನು ಮೊದಲು ಬಂದೆ, ನೀನು ಆಮೇಲೆ ಬಂದೆ" ಅಂತ ಶುರುವಾದ ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇಬ್ಬರೂ ಮಹಿಳೆಯರು ಪರಸ್ಪರ ಕಿತ್ತಾಡಿಕೊಳ್ಳುವುದನ್ನು ಕಂಡು ಉಳಿದ ಪ್ರಯಾಣಿಕರು ದಂಗಾಗಿ ಹೋದರು.

ಮಕ್ಕಳ ಆರ್ತನಾದಕ್ಕೆ ಎಲ್ಲರೂ ಶಾಕ್!

ಈ ಜಗಳದ ಮಧ್ಯೆ ಅಸಲಿ ಸಂಕಷ್ಟ ಎದುರಾಗಿದ್ದು ಆ ಮಹಿಳೆಯರ ಜೊತೆಗಿದ್ದ ಪುಟ್ಟ ಮಕ್ಕಳಿಗೆ. ತಮ್ಮ ಅಮ್ಮಂದಿರು ಹೀಗೆ ಕಿತ್ತಾಡುತ್ತಿರುವುದನ್ನು ಕಂಡು, ಜನಜಂಗುಳಿಯ ಮಧ್ಯೆ ಸಿಕ್ಕಿಹಾಕಿಕೊಂಡ ಮಕ್ಕಳು ಜೋರಾಗಿ ಚೀರಾಡಲು ಶುರು ಮಾಡಿದರು. ಮಕ್ಕಳ ಆರ್ತನಾದ ಕೇಳಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ಸ್ತಬ್ಧರಾದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಬಸ್ ಚಾಲಕ ಮತ್ತು ಕಂಡಕ್ಟರ್ ಕೂಡಲೇ ಮಧ್ಯಪ್ರವೇಶಿಸಿ ಜಗಳ ಬಿಡಿಸಬೇಕಾಯಿತು.

ಸಾರಿಗೆ ವ್ಯವಸ್ಥೆಯ ಎಫೆಕ್ಟ್?

ಪ್ರಯಾಣಿಕರ ಪ್ರಕಾರ, ಸಂಜೆ ಹೊತ್ತಿನಲ್ಲಿ ಗದಗ ಮತ್ತು ಲಕ್ಷ್ಮೇಶ್ವರ ಕಡೆಗೆ ಹೋಗುವ ಬಸ್ಸುಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಶಕ್ತಿ ಯೋಜನೆ ಬಂದ ಮೇಲೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಸಾಲದಕ್ಕೆ ಬಸ್ಸುಗಳ ಕೊರತೆಯಿಂದಾಗಿ ದಿನಾಲೂ ಇಂತಹ ಸರ್ಕಸ್ ನಡೆಯುತ್ತಲೇ ಇರುತ್ತದೆ. 120 ಜನರನ್ನು ಒಂದೇ ಬಸ್ಸಿನಲ್ಲಿ ತುಳಿದು ತುಂಬಿದರೆ ಜಗಳ ಆಗದೆ ಇನ್ನೇನಾಗುತ್ತೆ ಅನ್ನೋದು ಸಾರ್ವಜನಿಕರ ಪ್ರಶ್ನೆ.

ಜಗಳ ಬಿಡಿಸಿದ ಕಂಡಕ್ಟರ್-ಡ್ರೈವರ್

ಕೊನೆಗೂ ಕಂಡಕ್ಟರ್ ಮತ್ತು ಚಾಲಕ ಇಬ್ಬರೂ ಪ್ರಯಾಣಿಕರಿಗೆ ಸಮಾಧಾನ ಹೇಳಿ, ಜಗಳವಾಡುತ್ತಿದ್ದ ಮಹಿಳೆಯರನ್ನು ಸಮಾಧಾನಪಡಿಸಿ ಬಸ್ಸನ್ನು ಮುಂದೆ ಸಾಗುವಂತೆ ಮಾಡಿದರು. ಆದ್ರೆ, ಈ ಒಂದು ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ಭಾರಿ ಹಂಗಾಮಾ ಸೃಷ್ಟಿಸಿತ್ತು.

Latest News