Apr 2, 2026 Languages : ಕನ್ನಡ | English

ಬೆಟ್ಟದ ಭೈರವೇಶ್ವರದಲ್ಲಿ ಫೋಟೋ ಶೂಟ್‌ಗೆ ಬೀಳುತ್ತಾ ಬ್ರೇಕ್? ಪ್ರವಾಸಿಗರ ಸ್ವೇಚ್ಛಾಚಾರಕ್ಕೆ ಗ್ರಾಮಸ್ಥರ ಆಕ್ರೋಶ!!

ಸಕಲೇಶಪುರ ಅಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದೇ ಪ್ರಕೃತಿಯ ಮಡಿಲಲ್ಲಿರುವ ಸುಂದರ ಬೆಟ್ಟದ ಭೈರವೇಶ್ವರ ದೇವಸ್ಥಾನ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪವಿತ್ರ ತಾಣ ಕೇವಲ ಭಕ್ತಿಯ ಕೇಂದ್ರವಾಗಿ ಉಳಿಯದೆ, ಪ್ರವಾಸಿಗರ ಮತ್ತು ಫೋಟೋ ಶೂಟ್ ಮಾಡುವವರ ಅತಿರೇಕದ ವರ್ತನೆಯಿಂದ ವಿವಾದದ ಕೇಂದ್ರವಾಗುತ್ತಿದೆ. ಕಳೆದ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ಫೋಟೋಗ್ರಾಫರ್‌ಗಳ ನಡುವೆ ನಡೆದ ಘರ್ಷಣೆಯು ಈಗ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲೇ ಮಹತ್ವದ ಸಭೆ ನಡೆಸಲಾಯಿತು.

ಸಕಲೇಶಪುರ ಭೈರವೇಶ್ವರ ದೇವಸ್ಥಾನದಲ್ಲಿ ಫೋಟೋ ಶೂಟ್ ನಿಷೇಧ; | Photo Credit: https://x.com/temple_of_India
ಸಕಲೇಶಪುರ ಭೈರವೇಶ್ವರ ದೇವಸ್ಥಾನದಲ್ಲಿ ಫೋಟೋ ಶೂಟ್ ನಿಷೇಧ; | Photo Credit: https://x.com/temple_of_India

ಈ ಸಭೆಯಲ್ಲಿ ಭಾಗವಹಿಸಿದ್ದ ಮರಗುಂದ ಗ್ರಾಮದ ಜನರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಪ್ರವಾಸಿಗರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. "ದೇವಸ್ಥಾನಕ್ಕೆ ಪ್ರೀ-ವೆಡ್ಡಿಂಗ್ ಶೂಟ್ ಮತ್ತು ಪ್ರವಾಸಕ್ಕಾಗಿ ಬರುವವರು ಇಲ್ಲಿನ ಪಾವಿತ್ರ್ಯತೆಯನ್ನು ಗಾಳಿಗೆ ತೂರುತ್ತಿದ್ದಾರೆ. ದೇವಸ್ಥಾನದ ಆವರಣದೊಳಗೆ ಪಾದرಕ್ಷೆ ಧರಿಸಿ ಬರುವುದು, ನಾಗರಕಟ್ಟೆಯ ಸಮೀಪ ಮಹಿಳೆಯರು ಹೋಗಬಾರದು ಎಂಬ ನಿಯಮವಿದ್ದರೂ ಅದನ್ನು ಮೀರುವುದು ಮತ್ತು ಅರೆಬರೆ ಬಟ್ಟೆ ಧರಿಸಿ ಫೋಟೋಗಳಿಗೆ ಫೋಸ್ ನೀಡುತ್ತಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ" ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ದೂರಿದರು.

ದೇವಸ್ಥಾನದ ಆವರಣದಲ್ಲಿ ಸ್ವೇಚ್ಛಾಚಾರದಿಂದ ವರ್ತಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಕೂಡಲೇ ಇಲ್ಲಿ ಫೋಟೋ ಮತ್ತು ವಿಡಿಯೋ ಶೂಟಿಂಗ್‌ಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಮುಖಂಡರು ಒತ್ತಾಯಿಸಿದರು. ಕೇವಲ ಫೋಟೋ ಶೂಟ್ ಮಾತ್ರವಲ್ಲದೆ, ದೇವಸ್ಥಾನದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಭದ್ರತೆಗಾಗಿ ಕಾವಲುಗಾರರನ್ನು ನೇಮಿಸಬೇಕು ಎಂಬ ಬೇಡಿಕೆಯನ್ನೂ ಸಭೆಯಲ್ಲಿ ಮಂಡಿಸಲಾಯಿತು. ಪ್ರವಾಸಿಗರು ದೇವಸ್ಥಾನದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇನ್ನು ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಪ್ರವಾಸಿಗರ ಬೇಜವಾಬ್ದಾರಿತನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. "ಕೆಲವು ಪ್ರವಾಸಿಗರು ಈ ಸುಂದರ ತಾಣವನ್ನು ತಮ್ಮ ಸ್ವಂತ ಆಸ್ತಿಯಂತೆ ಭಾವಿಸಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ದೇವಸ್ಥಾನದ ಸುತ್ತಮುತ್ತ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕಸ ಮತ್ತು ಕೇಕ್ ಬಾಕ್ಸ್‌ಗಳನ್ನು ಎಸೆದು ಪ್ರಕೃತಿಯನ್ನು ಹಾಳು ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಇಂತಹ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು" ಎಂದು ಅವರು ವಿಷಾದಿಸಿದರು.

ದೇವಸ್ಥಾನದ ಪಾವಿತ್ರ್ಯತೆ ಮತ್ತು ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಇನ್ಮುಂದೆ ದೇವಸ್ಥಾನದ ಆವರಣದಲ್ಲಿ ಫೋಟೋ ಶೂಟ್ ಮಾಡಲು ಇಚ್ಛಿಸುವವರಿಗೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗುತ್ತದೆ ಮತ್ತು ಅದಕ್ಕೆ ಪ್ರತ್ಯೇಕ ಶುಲ್ಕವನ್ನೂ ನಿಗದಿಪಡಿಸಲಾಗುತ್ತದೆ. ಈ ಮೂಲಕ ಬರುವ ಆದಾಯವನ್ನು ಗ್ರಾಮ ಪಂಚಾಯಿತಿ ಮೂಲಕ ದೇವಸ್ಥಾನದ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಬಳಸಲಾಗುವುದು. ಸಿಸಿಟಿವಿ ಅಳವಡಿಕೆ ಮತ್ತು ಪೊಲೀಸ್ ಭದ್ರತೆಯ ಬಗ್ಗೆಯೂ ಅವರು ಭರವಸೆ ನೀಡಿದರು.

ಬೆಟ್ಟದ ಭೈರವೇಶ್ವರ ದೇವಸ್ಥಾನದ ಗರಿಮೆಯನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ ಮತ್ತು ಸ್ಥಳೀಯರು ಈಗ ಒಂದಾಗಿದ್ದಾರೆ. ಪ್ರವಾಸೋದ್ಯಮ ಬೆಳೆಯುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಯನ್ನು ಕಾಪಾಡುವುದು. ಇನ್ಮುಂದೆಯಾದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ದೇವಸ್ಥಾನದ ಶಿಸ್ತನ್ನು ಗೌರವಿಸಿ, ಪ್ರಕೃತಿಯನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡಬೇಕಿದೆ. ಈ ಸಭೆಯಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಸೇರಿದಂತೆ ಹತ್ತಾರು ಗಣ್ಯರು ಭಾಗವಹಿಸಿ ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಲು ನಿರ್ಧರಿಸಿದರು.

Latest News