ರಾಮನಗರ ಜಿಲ್ಲೆಯ ಸೋಮನಹಳ್ಳಿ ಟೋಲ್ ಬಳಿ ನಡೆದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಕನಕಪುರ ರಸ್ತೆಯಲ್ಲಿರುವ ಈ ಟೋಲ್‌ನಲ್ಲಿ ಸ್ಥಳೀಯರಿಗೆ ಉಚಿತ ಪ್ರವೇಶ ನೀಡಬೇಕಾದ ನಿಯಮವನ್ನು ಪಾಲಿಸದೇ, ಟೋಲ್ ಸಿಬ್ಬಂದಿ ಗೂಂಡಾವರ್ತನೆ ನಡೆಸಿದ್ದಾರೆ ಎಂದು ಕೇಳಿ ಬಂದಿದೆ. ನಿಯಮಗಳ ಪ್ರಕಾರ, ಟೋಲ್‌ನಿಂದ 20 ಕಿ.ಮೀ ವ್ಯಾಪ್ತಿಯಲ್ಲಿರುವ ಸ್ಥಳೀಯ ನಿವಾಸಿಗಳಿಗೆ ಉಚಿತ ಪ್ರವೇಶ ಅಥವಾ ಪಾಸ್ ಸೌಲಭ್ಯ ಕಲ್ಪಿಸಬೇಕು. ಆದರೆ, ಸೋಮನಹಳ್ಳಿ ಟೋಲ್‌ನಲ್ಲಿ ಸ್ಥಳೀಯರಿಗೆ ಯಾವುದೇ ಪಾಸ್ ಸೌಲಭ್ಯ ನೀಡದೇ, ಉಚಿತ ಅವಕಾಶವನ್ನೂ ನಿರಾಕರಿಸಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಗೂಡ್ಸ್ ವಾಹನ ಚಾಲಕರಾದ ಅಬ್ದುಲ್ ಮರ್ದಾನ್ ಹಾಗೂ ನಜೀರ್ ಅಹ್ಮದ್ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರು ಟೋಲ್ ಸಿಬ್ಬಂದಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಯಮ ಉಲ್ಲಂಘನೆ ಹಾಗೂ ಹಲ್ಲೆ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಟೋಲ್ ಸಿಬ್ಬಂದಿ ವಿರುದ್ಧ ತನಿಖೆ ಆರಂಭವಾಗಿದೆ. ಸ್ಥಳೀಯರು, ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆ ಸ್ಥಳೀಯರ ಹಕ್ಕುಗಳ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿದ್ದು, ಟೋಲ್ ನಿರ್ವಹಣೆಯಲ್ಲಿನ ಅಸಮರ್ಪಕತೆ ಹಾಗೂ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.