ರಾಯಚೂರಿನಲ್ಲಿ ಇವತ್ತು ನಡೆದ ಈ ಹೈಡ್ರಾಮಾ ನೋಡಿದ್ರೆ "ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳ ಇರಬಾರದಾ?" ಅಂತ ಅನ್ಸುತ್ತೆ. ಆದರೆ ಇಲ್ಲಿ ಆ ಜಗಳ ವಿಕೋಪಕ್ಕೆ ಹೋಗಿ ರ*ಕ್ತಪಾತದಲ್ಲೇ ಅಂತ್ಯವಾಗಿದೆ. ಕೃಷಿ ಇಲಾಖೆ ಅಧಿಕಾರಿ ಶೋಭಾ ಮತ್ತು ಬ್ಯಾಂಕ್ ಉದ್ಯೋಗಿ ಶಿವರಾಜ್ ನಡುವಿನ ಕಿತ್ತಾಟ ಈಗ ಇಡೀ ಕುಟುಂಬವನ್ನೇ ಆಸ್ಪತ್ರೆ ಪಾಲು ಮಾಡಿದೆ.
ಶೋಭಾ ಮತ್ತು ಶಿವರಾಜ್ ಇಬ್ಬರೂ ಒಳ್ಳೆಯ ಕೆಲಸದಲ್ಲಿದ್ದಾರೆ. ಆದರೆ ಇವರ ಸಂಸಾರದಲ್ಲಿ ಮಾತ್ರ ನೆಮ್ಮದಿ ಇರಲಿಲ್ಲ. ಈ ಹಿಂದೆಯೂ ಇವರ ಮಧ್ಯೆ ಮನಸ್ತಾಪ ಉಂಟಾಗಿ ಮ್ಯಾಟರ್ ಕೋರ್ಟ್ ಮೆಟ್ಟಿಲೇರಿತ್ತು. ಕೌಟುಂಬಿಕ ನ್ಯಾಯಾಲಯದ ಮೂಲಕ ರಾಜಿ ಮಾಡಿಕೊಂಡು ಇಬ್ಬರೂ ಒಂದಾಗಿದ್ದರು. ಆದರೆ ಒಟ್ಟಿಗೆ ಇದ್ದರೂ ಸಣ್ಣಪುಟ್ಟ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಮನೆಗೆ ನುಗ್ಗಿ ಅಟ್ಯಾಕ್!
ಇತ್ತೀಚೆಗೆ ನಡೆದ ಒಂದು ಸಣ್ಣ ಗಲಾಟೆಯನ್ನು ನೆಪ ಮಾಡಿಕೊಂಡ ಶೋಭಾ, ತನ್ನ ಕುಟುಂಬಸ್ಥರನ್ನು ಕರೆಸಿದ್ದಾರೆ. ಗಂಡನ ಮನೆಗೆ ಏಕಾಏಕಿ ನುಗ್ಗಿದ ಶೋಭಾ ಕಡೆಯವರು, ಅಲ್ಲಿ ಅತ್ತೆ ಲಕ್ಷ್ಮಿ, ಮಾವ ದೇವೇಂದ್ರಪ್ಪ ಹಾಗೂ ಪತಿ ಶಿವರಾಜ್ ಮತ್ತು ಸಂಬಂಧಿ ವೆಂಕಟೇಶ್ ಮೇಲೆ ಮನಸೋ ಇಚ್ಛೆ ಹ*ಲ್ಲೆ ನಡೆಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಇಡೀ ಮನೆಯೇ ರಣರಂಗವಾಗಿ ಬದಲಾಗಿತ್ತು.
ಮಾವನ ಸ್ಥಿತಿ ಗಂಭೀರ
ಈ ಹ*ಲ್ಲೆಯ ತೀವ್ರತೆ ಎಷ್ಟಿತ್ತೆಂದರೆ, ವಯಸ್ಸಾದ ಮಾವ ದೇವೇಂದ್ರಪ್ಪ ಅವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಅವರು ಕೋಮಾ ಸ್ಥಿತಿಗೆ ತಲುಪಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಉಳಿದ ಗಾಯಾಳುಗಳು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. "ನಮ್ಮದೇನು ತಪ್ಪಿಲ್ಲದಿದ್ದರೂ ಹೆಣ್ಣಿನ ಕಡೆಯವರು ಬಂದು ನಮ್ಮನ್ನು ಹೀಗೆ ಹೊಡೆದಿದ್ದಾರೆ" ಅಂತ ಗಂಡನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಐವರ ವಿರುದ್ಧ ಕೇಸ್ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ಶೋಭಾ ಅವರ ಕುಟುಂಬದ ತಾಯನಗೌಡ, ರಂಜಿತ್ ಕುಮಾರ್, ಅಕ್ಷಯ್ ಮತ್ತು ಶೋಭಾ ಸೇರಿದಂತೆ ಐದು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹ*ಲ್ಲೆ ಮಾಡಿದವರನ್ನು ಕೂಡಲೇ ಅರೆಸ್ಟ್ ಮಾಡಬೇಕು ಅಂತ ಗಾಯಾಳುಗಳ ಕಡೆಯವರು ಪಟ್ಟು ಹಿಡಿದಿದ್ದಾರೆ.
"ಮನೆ ಮನೆ ಕಥೆ" ಆಗಬೇಕಿದ್ದ ಜಗಳ ಈಗ ಪೊಲೀಸ್ ಸ್ಟೇಷನ್ ಅಂಗಳಕ್ಕೆ ಬಂದಿದೆ. ಮಗಳ ಸಂಸಾರ ಸರಿ ಮಾಡಬೇಕಾದವರೇ ಈ ರೀತಿ ಹಿಂಸೆಗೆ ಇಳಿದಿರುವುದು ನಿಜಕ್ಕೂ ದುರಂತ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.