Apr 9, 2026 Languages : ಕನ್ನಡ | English

ರೇಬಿಸ್: ಮೈ ಮರೆತರೆ ಸಾವು ಗ್ಯಾರಂಟಿ - ನಾಯಿ ಕಚ್ಚಿದಾಗ ನೀವು ಮಾಡಬೇಕಾದ ಮೊದಲ ಕೆಲಸಗಳಿವು!!

ಇತ್ತೀಚೆಗೆ ರೇಬಿಸ್ ರೋಗಿಯ ಪ್ರಕರಣವೊಂದು ವರದಿಯಾಗಿದ್ದು, ಇಡೀ ವೈದ್ಯಕೀಯ ಲೋಕವೇ ಬೆಚ್ಚಿಬಿದ್ದಿದೆ. ಯಾಕಂದ್ರೆ, ರೇಬಿಸ್ ಎನ್ನುವುದು ಮನುಕುಲ ಕಂಡ ಅತ್ಯಂತ ಡೇಂಜರಸ್ ವೈರಲ್ ಸೋಂಕುಗಳಲ್ಲಿ ಒಂದು. ಒಮ್ಮೆ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡರೆ, ಆ ವ್ಯಕ್ತಿ ಬದುಕುವುದು ಅಸಾಧ್ಯವೇ ಸರಿ. ಆದರೆ ಒಂದು ಖುಷಿಯ ವಿಚಾರ ಅಂದ್ರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಇದನ್ನು 100% ತಡೆಯಬಹುದು. ಹಾಗಾದ್ರೆ ರೇಬಿಸ್ ಅಂದ್ರೆ ಏನು? ಅದರ ಲಕ್ಷಣಗಳೇನು? ನಾಯಿ ಕಚ್ಚಿದಾಗ ಏನು ಮಾಡಬೇಕು? ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.

ರೇಬಿಸ್: ನಾಯಿ ಕಚ್ಚಿದಾಗ ತಕ್ಷಣ ಏನು ಮಾಡಬೇಕು? | Photo Credit: https://x.com/Bio_comunidad
ರೇಬಿಸ್: ನಾಯಿ ಕಚ್ಚಿದಾಗ ತಕ್ಷಣ ಏನು ಮಾಡಬೇಕು? | Photo Credit: https://x.com/Bio_comunidad

ರೇಬಿಸ್ ಎನ್ನುವುದು ಒಂದು ವೈರಸ್‌ನಿಂದ ಹರಡುವ ಕಾಯಿಲೆ. ಇದು ಸಾಮಾನ್ಯವಾಗಿ ರೇಬಿಸ್ ಪೀಡಿತ ಪ್ರಾಣಿಗಳು (ಹೆಚ್ಚಾಗಿ ಬೀದಿ ನಾಯಿಗಳು) ಮನುಷ್ಯರನ್ನು ಕಚ್ಚಿದಾಗ ಅಥವಾ ಪರಚಿದಾಗ ಹರಡುತ್ತದೆ. ಈ ವೈರಸ್ ಮನುಷ್ಯನ ದೇಹ ಸೇರಿದ ಮೇಲೆ ನರಗಳ ಮೂಲಕ ಮೆದುಳನ್ನು ತಲುಪುತ್ತದೆ. ಅಲ್ಲಿ ಮೆದುಳಿನ ಉರಿಯೂತ ಮತ್ತು ತೀವ್ರವಾದ ನರವೈಜ್ಞಾನಿಕ ಹಾನಿಯನ್ನು ಉಂಟುಮಾಡುತ್ತದೆ.

ರೇಬಿಸ್‌ನ ಲಕ್ಷಣಗಳು ತಕ್ಷಣವೇ ಕಾಣಿಸಿಕೊಳ್ಳುವುದಿಲ್ಲ. ಕೆಲವು ವಾರಗಳಿಂದ ಹಿಡಿದು ಕೆಲವು ತಿಂಗಳವರೆಗೆ ತೆಗೆದುಕೊಳ್ಳಬಹುದು. ಜ್ವರ, ತಲೆನೋವು ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯ ಜ್ವರದಂತೆ ಇರುವುದರಿಂದ ಜನರು ನಿರ್ಲಕ್ಷಿಸುತ್ತಾರೆ. ರೋಗಿಗೆ ನೀರನ್ನು ಕಂಡರೆ ವಿಪರೀತ ಭಯವಾಗುತ್ತದೆ. ನೀರು ಕುಡಿಯಲು ಹೋದರೆ ಗಂಟಲಿನಲ್ಲಿ ತೀವ್ರವಾದ ನೋವು ಮತ್ತು ಸೆಳೆತ ಉಂಟಾಗುತ್ತದೆ.

ಸಣ್ಣ ಗಾಳಿ ಮೈಗೆ ತಗುಲಿದರೂ ರೋಗಿ ಕಿರುಚಾಡುತ್ತಾರೆ ಅಥವಾ ಅವರ ಮೈ ಸೆಳೆತಕ್ಕೆ ಒಳಗಾಗುತ್ತದೆ. ವಿಪರೀತ ಕೋಪ, ಗೊಂದಲ, ಭ್ರಮೆಗಳು ಮತ್ತು ಅಸಹಜ ನಡವಳಿಕೆ ಕಾಣಿಸಿಕೊಳ್ಳುತ್ತದೆ. ಇದು ಮೆದುಳಿನ ಮೇಲೆ ವೈರಸ್ ದಾಳಿ ಮಾಡಿದೆ ಎಂಬುದರ ಸಂಕೇತ. ದುರಂತ ಏನೆಂದರೆ, ಒಮ್ಮೆ ಹೈಡ್ರೋಫೋಬಿಯಾ (ನೀರು ಕಂಡು ಹೆದರುವುದು) ಲಕ್ಷಣಗಳು ಕಾಣಿಸಿಕೊಂಡರೆ, ಜಗತ್ತಿನಲ್ಲಿ ರೇಬಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ಈ ಹಂತದಲ್ಲಿ ವೈದ್ಯರು ಕೇವಲ ರೋಗಿಯ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆಯೇ ಹೊರತು, ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ.

ನಾಯಿ ಅಥವಾ ಯಾವುದೇ ಪ್ರಾಣಿ ಕಚ್ಚಿದ ತಕ್ಷಣ ನೀವು ಈ ಕೆಲಸಗಳನ್ನು ಮಾಡಲೇಬೇಕು. ಕಚ್ಚಿದ ತಕ್ಷಣ ಗಾಯವನ್ನು ಹರಿಯುವ ನೀರಿನಲ್ಲಿ ಕನಿಷ್ಠ 15 ನಿಮಿಷಗಳ ಕಾಲ ಸೋಪು ಹಾಕಿ ಚೆನ್ನಾಗಿ ತೊಳೆಯಿರಿ. ಇದು ವೈರಸ್ ಹರಡುವಿಕೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡುತ್ತದೆ. ನಾಟಿ ಮದ್ದು, ಮಂತ್ರ ಹಾಕಿಸುವುದು ಅಥವಾ ಮನೆಯಲ್ಲೇ ಏನೋ ಹಚ್ಚಿಕೊಳ್ಳುವ ಸಾಹಸ ಮಾಡಬೇಡಿ. ತಕ್ಷಣ ವೈದ್ಯರನ್ನು ಭೇಟಿ ಮಾಡಿ 'ಪೋಸ್ಟ್-ಎಕ್ಸ್ಪೋಸರ್' ವ್ಯಾಕ್ಸಿನ್ (Anti-Rabies Vaccine) ಹಾಕಿಸಿಕೊಳ್ಳಿ. ಗಾಯ ದೊಡ್ಡದಾಗಿದ್ದರೆ ವೈದ್ಯರು ಇಮ್ಯುನೊಗ್ಲಾಬ್ಯುಲಿನ್ ಇಂಜೆಕ್ಷನ್ ನೀಡುತ್ತಾರೆ, ಇದು ವೈರಸ್ ಮೆದುಳಿಗೆ ತಲುಪದಂತೆ ತಡೆಯುತ್ತದೆ.

ನಮ್ಮ ಜವಾಬ್ದಾರಿ ಏನು?

  • ನಿಮ್ಮ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವುಗಳಿಗೆ ತಪ್ಪದೆ ವ್ಯಾಕ್ಸಿನ್ ಹಾಕಿಸಿ.
  • ಬೀದಿ ನಾಯಿಗಳ ಬಗ್ಗೆ ಎಚ್ಚರವಿರಲಿ ಮತ್ತು ಅವುಗಳ ಸಂತಾನಹರಣ ಚಿಕಿತ್ಸೆಗೆ ಸಹಕರಿಸಿ.
  • ಬೀದಿ ನಾಯಿ ಕಚ್ಚಿದ ತಕ್ಷಣ ಲಕ್ಷಣಗಳು ಇಲ್ಲದಿದ್ದರೂ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ.

ರೇಬಿಸ್ ಎನ್ನುವುದು ಒಂದು ತಡೆಗಟ್ಟಬಹುದಾದ ದುರಂತ. ಸರಿಯಾದ ಸಮಯದಲ್ಲಿ ವೈದ್ಯಕೀಯ ಸಹಾಯ ಪಡೆದರೆ ಯಾವುದೇ ಜೀವಕ್ಕೆ ಅಪಾಯವಿಲ್ಲ. ಈ ಮಾಹಿತಿಯನ್ನು ನಿಮ್ಮ ಗೆಳೆಯರಿಗೆ ಮತ್ತು ಫ್ಯಾಮಿಲಿಗೆ ಶೇರ್ ಮಾಡಿ, ರೇಬಿಸ್ ಮುಕ್ತ ಸಮಾಜ ನಿರ್ಮಿಸಲು ಸಹಕರಿಸಿ.