Dec 16, 2025 Languages : ಕನ್ನಡ | English

ಕ್ಲಿನಿಕ್ ಗೆ ನುಗ್ಗಿ ಸಿಬ್ಬಂದಿ ಮೇಲೆ ಕೈ ಮಾಡಿದ ವ್ಯಕ್ತಿ!! ವಿಡಿಯೋ ವೈರಲ್ ಆಗ್ತಿದ್ದಂತೆಯೇ ಬಿತ್ತು ಕೇಸ್!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ಪ್ರದೇಶದಲ್ಲಿ ನವೆಂಬರ್ 29ರಂದು ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಡಾ. ರಾಮಮೋಹನ್ ರಾವ್ ಅವರ ಕ್ಲೀನಿಕ್‌ಗೆ ನುಗ್ಗಿದ ವ್ಯಕ್ತಿ ಸಿಬ್ಬಂದಿಗೆ ಹಲ್ಲೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ನಮಗೆ ತಿಳಿದು ಬಂದ ಮಾಹಿತಿಯ ಪ್ರಕಾರ, ತನ್ನ ಪರಿಚಯಸ್ಥರನ್ನು ತಪಾಸಣೆಗೆ ಬೇಗ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಪುತ್ತೂರಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತ ಕ್ಲೀನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕಂಡು ಬಂದಿದೆ. ಹಲ್ಲೆಯ ನಂತರ ಅಲ್ಲಿದ್ದ ರೋಗಿಗಳಿಗೆ ಭಯ ಹುಟ್ಟಿಸಿ, ಅವಾಚ್ಯವಾಗಿ ಬೈದಿರುವುದಾಗಿ ಸಾಕ್ಷಿಗಳು ತಿಳಿಸಿದ್ದಾರೆ. ವೈದ್ಯಕೀಯ ಸೇವೆ ಪಡೆಯಲು ಬಂದ ರೋಗಿಗಳ ಮುಂದೆ ನಡೆದ ಈ ಹಲ್ಲೆ, ಆರೋಗ್ಯ ಕೇಂದ್ರದ ಭದ್ರತೆ ಹಾಗೂ ಸಿಬ್ಬಂದಿ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎನ್ನಬಹುದು. 

ಕ್ಲಿನಿಕ್ ಗೆ ನುಗ್ಗಿ ಸಿಬ್ಬಂದಿ ಮೇಲೆ ಕೈ ಮಾಡಿದ ವ್ಯಕ್ತಿ
ಕ್ಲಿನಿಕ್ ಗೆ ನುಗ್ಗಿ ಸಿಬ್ಬಂದಿ ಮೇಲೆ ಕೈ ಮಾಡಿದ ವ್ಯಕ್ತಿ

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ವೈದ್ಯಕೀಯ ಕೇಂದ್ರಗಳಲ್ಲಿ ಶಿಸ್ತಿನ ಅಗತ್ಯತೆ ಹಾಗೂ ಸಾರ್ವಜನಿಕರ ಜವಾಬ್ದಾರಿ ಕುರಿತು ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಕಾನೂನುಬಾಹಿರವಾಗಿದ್ದು, ಇಂತಹ ಘಟನೆಗಳು ವೈದ್ಯಕೀಯ ಸೇವೆಗಳ ಮೇಲೆ ನಂಬಿಕೆಗೆ ಧಕ್ಕೆಯುಂಟುಮಾಡುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ರಾಹಿಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಕ್ಲೀನಿಕ್ ಸಿಬ್ಬಂದಿ ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.

ಈ ಘಟನೆ ವೈದ್ಯಕೀಯ ಕೇಂದ್ರಗಳಲ್ಲಿ ಶಿಸ್ತಿನ ಅಗತ್ಯತೆ, ಸಾರ್ವಜನಿಕರ ಜವಾಬ್ದಾರಿ ಹಾಗೂ ಕಾನೂನು ಸುವ್ಯವಸ್ಥೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ವೈದ್ಯಕೀಯ ಸಿಬ್ಬಂದಿ ಸುರಕ್ಷತೆ ಹಾಗೂ ರೋಗಿಗಳ ಭದ್ರತೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಸ್ಥಳೀಯರಲ್ಲಿ ಹೆಚ್ಚುತ್ತಿದೆ..

Latest News