May 5, 2026 Languages : ಕನ್ನಡ | English

ಸಿರಸಿ-ಹಾವೇರಿ ಹೆದ್ದಾರಿಯಲ್ಲಿ ಜನರ ಆಕ್ರೋಶದ ಕಟ್ಟೆ - ಧೂಳಿನ ರಾಮಾಯಣಕ್ಕೆ ಬ್ರೇಕ್ ಹಾಕಲು ರಸ್ತೆಗಿಳಿದ ಗ್ರಾಮಸ್ಥರು!!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದ ಜನರಿಗೆ ಈಗ "ರೋಡ್" ಅಂದ್ರೆ ಸಾಕು ಮೈ ಉರಿಯುತ್ತೆ. ಅದರಲ್ಲೂ ಈ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ (NH 766 E) ಪರಿಸ್ಥಿತಿಯಂತೂ ಕೇಳೋದೇ ಬೇಡ. ಸಾಗರಮಾಲಾ ಯೋಜನೆಯಡಿ ಈ ರಸ್ತೆ ಅದ್ಭುತವಾಗುತ್ತೆ ಅಂತ ಜನ ಅಂದುಕೊಂಡಿದ್ದರು. ಆದರೆ, ಈಗ ಅದೇ ರಸ್ತೆ ಜನರ ನೆಮ್ಮದಿ ಕೆಡಿಸಿದೆ. ಇದನ್ನ ಖಂಡಿಸಿ ಇವತ್ತು ಬಿಸಲಕೊಪ್ಪದಲ್ಲಿ ಸಾರ್ವಜನಿಕರು ರಸ್ತೆ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಶಿರಸಿ - ಹಾವೇರಿ ಹೈವೇ ಗೋಳು - ರಸ್ತೆ ಅಗೆದು ಎಸ್ಕೇಪ್ ಆದ ಗುತ್ತಿಗೆದಾರ
ಶಿರಸಿ - ಹಾವೇರಿ ಹೈವೇ ಗೋಳು - ರಸ್ತೆ ಅಗೆದು ಎಸ್ಕೇಪ್ ಆದ ಗುತ್ತಿಗೆದಾರ

ಏನಿದು ಧೂಳಿನ ರಾಮಾಯಣ?

ಈ ರಸ್ತೆ ಕಾಮಗಾರಿಯನ್ನ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿ ಅನ್ನೋರು ಗುತ್ತಿಗೆ ತಗೊಂಡಿದ್ದಾರೆ. ಸುಮಾರು 8 ಕಿಲೋಮೀಟರ್ ದೂರದ ರಸ್ತೆಯನ್ನ ಇವರು ಆರು ತಿಂಗಳ ಹಿಂದೆಯೇ ಕಂಪ್ಲೀಟ್ ಅಗೆದು ಹಾಕಿದ್ದಾರೆ. ಅಗೆದ ಮೇಲೆ ಕೆಲಸವನ್ನ ಚುರುಕಾಗಿ ಮಾಡಬೇಕಲ್ವಾ? ಆದರೆ ಈ ಗುತ್ತಿಗೆದಾರರು ಮಾತ್ರ ರಸ್ತೆ ಅಗೆದು ಹಾಗೇ ಬಿಟ್ಟು "ನಾಪತ್ತೆ"ಯಾಗಿದ್ದಾರೆ. ಇದರಿಂದ ಇಡೀ ರಸ್ತೆ ಧೂಳಿನ ಮಯವಾಗಿದೆ. ಗಾಡಿಗಳು ಹೋದ್ರೆ ಸಾಕು, ರಸ್ತೆಯ ಪಕ್ಕದ ಮನೆಯವರಿಗೆ ಅಡುಗೆ ಮಾಡೋಕು ಆಗದಷ್ಟು ಧೂಳು ಬರ್ತಿದೆ.

ಕಳೆದ 6 ತಿಂಗಳಿಂದ ಈ ರಸ್ತೆಯಲ್ಲಿ ಓಡಾಡೋದು ಅಂದ್ರೆ ಜೀವ ಕೈಯಲ್ಲಿ ಹಿಡಿದು ಸಾಗಿದಂತೆ. ಗುಂಡಿಗಳು, ಅಗೆದ ಮಣ್ಣು, ಧೂಳು  ಇದರ ಮಧ್ಯೆ ವಾಹನ ಸವಾರರು ರೋಸಿ ಹೋಗಿದ್ದಾರೆ. ದಿನನಿತ್ಯ ಇದೇ ಹಾದಿಯಲ್ಲಿ ಹೋಗುವವರಿಗೆ ಬೆನ್ನು ನೋವು, ಕೆಮ್ಮು ಗ್ಯಾರಂಟಿ ಅನ್ನೋ ಸ್ಥಿತಿ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾತ್ರ ಇದೆಲ್ಲವನ್ನೂ ನೋಡಿಯೂ ಸುಮ್ಮನಿರೋದು ಜನರ ಕೋಪಕ್ಕೆ ತುಪ್ಪ ಸುರಿದಂತಾಗಿದೆ.

ಸಹನೆ ಕಳೆದುಕೊಂಡ ಬಿಸಲಕೊಪ್ಪ ಗ್ರಾಮಸ್ಥರು ಮತ್ತು ವಾಹನ ಸವಾರರು ಇವತ್ತು ಬೆಳ್ಳಂಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯನ್ನ ಸಂಪೂರ್ಣ ಬಂದ್ ಮಾಡಿದರು. "ಗುತ್ತಿಗೆದಾರರಿಗೆ ಬುದ್ಧಿ ಕಲಿಸಿ, ನಮಗೆ ರಸ್ತೆ ಮಾಡಿಕೊಡಿ" ಅಂತ ಘೋಷಣೆ ಕೂಗಿದರು. ಸಾರಿಗೆ ಬಸ್‌ಗಳು, ಖಾಸಗಿ ಗಾಡಿಗಳು ಕಿಲೋಮೀಟರ್ ಗಟ್ಟಲೆ ಸಾಲಾಗಿ ನಿಂತಿದ್ದವು. ಸ್ಥಳದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳು

ವಿಷಯ ತಿಳಿಯುತ್ತಿದ್ದಂತೆಯೇ ಶಿರಸಿ ಉಪವಿಭಾಗಾಧಿಕಾರಿಗಳು (AC) ಮತ್ತು ತಹಸೀಲ್ದಾರ್ ಅವರು ಬಿಸಲಕೊಪ್ಪಕ್ಕೆ ಧಾವಿಸಿದರು. ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ, "ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕೆಲಸ ಶುರು ಮಾಡಿಸುತ್ತೇವೆ" ಅಂತ ಮನವೊಲಿಸಲು ಪ್ರಯತ್ನಿಸಿದರು. ಆದರೆ, "ಕೆಲಸ ಶುರುವಾಗುವವರೆಗೂ ನಾವು ಕದಲಲ್ಲ" ಅಂತ ಜನ ಪಟ್ಟು ಹಿಡಿದಿದ್ದು ಕಂಡುಬಂತು.

ಅಭಿವೃದ್ಧಿ ಹೆಸರಲ್ಲಿ ಜನರಿಗೆ ಇಷ್ಟೊಂದು ಹಿಂಸೆ ಕೊಡೋದು ಸರಿಯಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಮಾಯಕ ಸಾರ್ವಜನಿಕರು ಬೆಲೆ ತೆರುವಂತಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ರಸ್ತೆ ಕಾಮಗಾರಿಯನ್ನ ಬೇಗ ಮುಗಿಸಲಿ ಅನ್ನೋದೇ ಎಲ್ಲರ ಆಶಯ.

Latest News