ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇವತ್ತು ಮಾಧ್ಯಮಗಳ ಮುಂದೆ ಸಖತ್ ಬ್ಯಾಟಿಂಗ್ ಮಾಡಿದ್ದಾರೆ. ಬಿ.ಎಸ್.ವೈ ಅಭಿನಂದನೋತ್ಸವದಿಂದ ಹಿಡಿದು ತಮಿಳುನಾಡು ರಾಜಕೀಯದವರೆಗೆ ಹಲವು ವಿಷಯಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
ಬಿಎಸ್ ವೈ ಕಾರ್ಯಕ್ರಮ ನಮಗೇನು ಸಂಬಂಧ?
ಕಲಬುರಗಿಯಲ್ಲಿ ಇಂದು ನಡೆಯುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿನಂದನೋತ್ಸವದ ಬಗ್ಗೆ ಕೇಳಿದಾಗ ಖರ್ಗೆ ಅವರು ಸಖತ್ ಕ್ಯಾಶುವಲ್ ಆಗಿ ಉತ್ತರಿಸಿದರು. "ಅದು ಅವರ ಪಕ್ಷದ ಕಾರ್ಯಕ್ರಮ, ನಮಗೇನು ಆಕ್ಷೇಪ ಇಲ್ಲ. ಆದರೆ ಅವರ ಪಕ್ಷದ ಶಾಸಕರೇ ಈ ಕಾರ್ಯಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಎಸ್ ವೈ ಮೇಲೆ ಕೇಸ್ ಇದೆ ಅಂತ ಅವರವರೇ ಕಿತ್ತಾಡುತ್ತಿದ್ದಾರೆ. ಮೊದಲು ತಮ್ಮ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ" ಎಂದು ಕುಟುಕಿದರು.
"ನಾರಾಯಣಸ್ವಾಮಿ ಮೊದಲು ಪಂಚಾಯತ್ ಎಲೆಕ್ಷನ್ ಗೆಲ್ಲಲಿ!"
ತಮಿಳುನಾಡಿನಲ್ಲಿ ಕಾಂಗ್ರೆಸ್ ಸಚಿವರು ಭಿಕ್ಷೆ ಬೇಡುತ್ತಿದ್ದಾರೆ ಎಂಬ ನಾರಾಯಣಸ್ವಾಮಿ ಅವರ ಹೇಳಿಕೆಗೆ ಖರ್ಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.
"ಅಲ್ಲಿ ಬಿಜೆಪಿಯವರು ಎಷ್ಟು ಸ್ಥಾನ ಗೆದ್ದಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ನಾರಾಯಣಸ್ವಾಮಿ ಅವರು ಮೊದಲು ಒಂದು ಗ್ರಾಮ ಪಂಚಾಯತ್ ಎಲೆಕ್ಷನ್ ಗೆದ್ದು ಬರಲಿ. ಕೇವಲ ಆರ್ ಎಸ್ ಎಸ್ ಚಡ್ಡಿ ಹೊತ್ತುಕೊಂಡಿದ್ದಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿದೆ. ಇಂತವರಿಂದ ನಾವು ಪಾಠ ಕಲಿಯಬೇಕಾ?" ಎಂದು ಲೇವಡಿ ಮಾಡಿದರು.
ಅಷ್ಟೇ ಅಲ್ಲದೆ, "ಬಿಜೆಪಿಯವರೇ, ಚುನಾವಣಾ ಆಯೋಗವನ್ನ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ. ಇಸಿಐ, ಸಿಬಿಐ, ಇಡಿ ಸಂಸ್ಥೆಗಳು ಪಾರದರ್ಶಕವಾಗಿ ಕೆಲಸ ಮಾಡಿದ್ರೆ ತಮಿಳುನಾಡು, ಆಂಧ್ರ, ಕೇರಳದಲ್ಲಿ ನಿಮ್ಮ ಪರಿಸ್ಥಿತಿ ಏನಾಗುತ್ತೆ ಅಂತ ಇಡೀ ದೇಶಕ್ಕೆ ಗೊತ್ತಾಗುತ್ತೆ. ಪ್ರಾದೇಶಿಕ ಪಕ್ಷಗಳಿಗಿಂತಲೂ ಹೀನಾಯವಾಗಿ ನೀವು ಸೋಲ್ತೀರಾ" ಎಂದು ಸವಾಲು ಹಾಕಿದರು.
ರಾಜಭವನಗಳು ಆರ್‌ಎಸ್‌ಎಸ್ ಕಚೇರಿಯಾಗುತ್ತಿವೆಯೇ?
ತಮಿಳುನಾಡಿನಲ್ಲಿ ನಟ ವಿಜಯ್ ಅವರ ಪಕ್ಷ ಗೆದ್ದಿದ್ದರೂ ಅಧಿಕಾರ ಸ್ವೀಕಾರಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. "ಕರ್ನಾಟಕದಲ್ಲಿ ಬಿಎಸ್ ವೈ ಅವರಿಗೆ ಸರ್ಕಾರ ರಚಿಸಲು ತಕ್ಷಣ ಅವಕಾಶ ಕೊಟ್ಟಿದ್ದ ರಾಜ್ಯಪಾಲರು, ಈಗ ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಯಾಕೆ ಅನುಮತಿ ನೀಡುತ್ತಿಲ್ಲ? ಈಗೇನು ಶಾಸಕರನ್ನೆಲ್ಲಾ ರಾಜ್ಯಪಾಲರ ಮನೆಯ ಮುಂದೆ ನಿಲ್ಲಿಸಿ ಬಹುಮತ ತೋರಿಸಬೇಕಾ? ರಾಜ್ಯಪಾಲರ ಕಚೇರಿಗಳು ಈಗ ಆರ್‌ಎಸ್‌ಎಸ್ ಕಚೇರಿಗಳಂತೆ ಬದಲಾಗುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ಕಾಂಗ್ರೆಸ್‌ನಲ್ಲಿ ಎಲ್ಲವೂ ಓಕೆ!
ಕೇರಳದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. "ಕೇರಳದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ನಾಯಕರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ದಾರೆ. ಚುನಾವಣೆ ಮುಗಿದು ಕೇವಲ ಮೂರು ದಿನ ಆಗಿದೆ ಅಷ್ಟೇ. ಹೈಕಮಾಂಡ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೆ. ಅಲ್ಲಿ ಕಗ್ಗಂಟು ಎನ್ನುವ ಪ್ರಶ್ನೆಯೇ ಬರಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.