ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಸರ್ಕಸ್ ಮುಗಿದು ಈಗ ಅಧಿಕೃತವಾಗಿ ‘ಡಿಕೆಶಿ ಸರ್ಕಾರ’ದ ಆಡಳಿತ ಶುರುವಾಗಿದೆ. ಬುಧವಾರವಷ್ಟೇ ಸಚಿವರಾಗಿ ಶ್ರದ್ಧಾಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕ್ ಖರ್ಗೆ ಅವರು, ತಮಗೆ ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಜನಸೇವೆ ಮಾಡಲು ಅವಕಾಶ ಕೊಟ್ಟ ಹೈಕಮಾಂಡ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ತಾವು ಸಚಿವರಾಗಿ ಮಾಡಿದ ಸೂಪರ್ ಹಿಟ್ ಕೆಲಸಗಳ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದೆ ಇಟ್ಟಿದ್ದಾರೆ.
ಹಳೇ ಸರ್ಕಾರದಲ್ಲಿ ನಮ್ಮ ಸಾಧನೆ ನಂಬರ್ ಒನ್
ತಮ್ಮ ಪೋಸ್ಟ್‌ನಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆನೆದಿರುವ ಪ್ರಿಯಾಂಕ್ ಖರ್ಗೆ, "ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನನಗೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಐಟಿಬಿಟಿ ಇಲಾಖೆಯ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ. ಅದಕ್ಕೆ ನಮ್ಮ ಇಲಾಖೆಗಳು ಮಾಡಿರುವ ಪ್ರಗತಿಯೇ ಸಾಕ್ಷಿ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಪ್ರಿಯಾಂಕ್ ಖರ್ಗೆ ಟೀಮ್ ಮಾಡಿರೋ ಆ ಬಿಗ್ ಅಚೀವ್‌ಮೆಂಟ್‌ಗಳು ಏನೇನು ಗೊತ್ತಾ?
ದೇಶದಲ್ಲೇ ಕರ್ನಾಟಕ ನಂಬರ್ ಒನ್: ಪಂಚಾಯತ್ ವಿಕೇದ್ರೀಕರಣದಲ್ಲಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ತೆರಿಗೆ ಸಂಗ್ರಹ ಮಾಡುವುದರಲ್ಲೂ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ.
ಪಿಡಿಒ ವರ್ಗಾವಣೆಯಲ್ಲಿ ಪಾರದರ್ಶಕತೆ: ಇಷ್ಟು ದಿನ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದ ಪಿಡಿಒ (PDO) ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಕಂಪ್ಲೀಟ್ ಪಾರದರ್ಶಕವಾಗಿ ಆನ್‌ಲೈನ್ ಮೂಲಕ ಮಾಡಿ ಯಶಸ್ವಿಯಾಗಿದ್ದಾರೆ.
ಹೈಟೆಕ್ ಗ್ರಂಥಾಲಯ & ಕೂಸಿನ ಮನೆ: ಹಳ್ಳಿ ಯುವಕರಿಗಾಗಿ ಹಳೇ ಲೈಬ್ರರಿಗಳಿಗೆ ಡಿಜಿಟಲ್ ಸ್ಪರ್ಶ ನೀಡಿ ‘ಅರಿವು ಕೇಂದ್ರ’ಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇನ್ನು ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಮಕ್ಕಳ ಆರೈಕೆಗಾಗಿ ‘ಕೂಸಿನ ಮನೆ’ ಎಂಬ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಿ ಸೈ ಎನಿಸಿಕೊಂಡಿದ್ದಾರೆ.
ಬೆಂಗಳೂರು ಆಚೆಗೂ ಐಟಿ ಉದ್ಯಮ: ಐಟಿಬಿಟಿ ಇಲಾಖೆ ಮೂಲಕ ಕೇವಲ ಬೆಂಗಳೂರಿಗೆ ಮಾತ್ರ ಐಟಿ ಸೀಮಿತವಾಗಬಾರದು ಎಂದು ‘ಬಿಯಾಂಡ್ ಬೆಂಗಳೂರು’ ಕಾನ್ಸೆಪ್ಟ್ ಅಡಿಯಲ್ಲಿ ಉದ್ಯಮವನ್ನು ಬೆಂಬಲಿಸಲು ‘ಲೀಪ್’ (LEAP) ಯೋಜನೆಯನ್ನು ತಂದು ಸೂಪರ್ ಸಕ್ಸಸ್ ಆಗಿದ್ದಾರೆ.
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಮತೊಮ್ಮೆ ಜನಸೇವೆ ಮಾಡಲು ಅವಕಾಶ ಕಲ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ಹೃದಯಪೂರ್ವಕ ಧನ್ಯವಾದಗಳು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 3, 2026
ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಅವರು ನೀಡಿದ ಜವಾಬ್ದಾರಿಯನ್ನು ಶ್ರದ್ಧೆ… pic.twitter.com/9MGZXjlHwh
ಸಿಎಂ ಡಿಕೆಶಿ ನೇತೃತ್ವದಲ್ಲಿ ಕೆಲಸ ಮಾಡಲು ನಾನು ರೆಡಿ
"ನನ್ನ ಈ ಎಲ್ಲಾ ಕೆಲಸಗಳನ್ನು ಗಣನೆಗೆ ತೆಗೆದುಕೊಂಡು ಮತ್ತೊಮ್ಮೆ ನನ್ನನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿದ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು. ಈಗ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದ ಭಾಗವಾಗಿರುವುದು ನನಗೆ ನಿಜಕ್ಕೂ ತುಂಬಾ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷವಾಗಲಿ ಅಥವಾ ಮಾನ್ಯ ಮುಖ್ಯಮಂತ್ರಿಗಳಾಗಲಿ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಲು ನಾನು ಸದಾ ಬದ್ಧನಾಗಿದ್ದೇನೆ" ಎಂದು ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.