ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತಾಗಿ ಮಾಜಿ ಶಾಸಕ ಪ್ರೀತಂ ಗೌಡ ನೀಡಿದ ಹೇಳಿಕೆಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ತಿರುಗೇಟು ನೀಡಿದ್ದಾರೆ. ಬೀದಿಯಲ್ಲಿ ನಿಂತು ರಾಜಕೀಯ ರಂಪಾಟ ಮಾಡದೇ, ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದು ಪ್ರೀತಂ ಗೌಡರಿಗೆ ನಿಖಿಲ್ ಎಚ್ಚರಿಕೆ ನೀಡಿದ್ದಾರೆ.
ಬೀದಿ ರಾಜಕಾರಣ ಬೇಡ
ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ನಿರ್ಮಿಸಿರುವ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ,
“ಬಿಜೆಪಿ ರಾಷ್ಟ್ರೀಯ ಪಕ್ಷ. ಅವರಿಗೆ ಶಿಸ್ತುಪಾಲನಾ ಸಮಿತಿ ಇದೆ. ಪಕ್ಷದ ಅಶಿಸ್ತಿನ ನಡವಳಿಕೆಗಳ ಬಗ್ಗೆ ಆ ಸಮಿತಿಯಲ್ಲೇ ಚರ್ಚೆಯಾಗುತ್ತದೆ. ಬೀದಿಯಲ್ಲಿ ನಿಂತು ಕಾರ್ಯಕರ್ತರು ಮತ್ತು ನಾಯಕರು ಮಾತನಾಡೋದು ಸರಿಯಲ್ಲ. ಇಂತಹ ವರ್ತನೆಗೆ ಮುಂದಿನ ದಿನಗಳಲ್ಲಿ ತಿದ್ದಿ ಬುದ್ಧಿ ಹೇಳುತ್ತಾರೆಂಬ ವಿಶ್ವಾಸ ನನಗಿದೆ” ಎಂದು ಹೇಳಿದರು.
ಜೆಡಿಎಸ್ ನಾಯಕತ್ವದ ಬಗ್ಗೆ ಸ್ಪಷ್ಟನೆ
ಇನ್ನೂ ಜೆಡಿಎಸ್ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡಿದ ನಿಖಿಲ್, “ಜನತಾದಳ ಪಕ್ಷದ ಚುಕ್ಕಾಣಿ ಕುಮಾರಸ್ವಾಮಿಯವರ ಕೈಯಲ್ಲಿದೆ. ದೇವೇಗೌಡರ ಮಾರ್ಗದರ್ಶನ, ರೇವಣ್ಣ ಅವರ ಶಕ್ತಿಯೊಂದಿಗೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ಕಾಲದ ಆಡಳಿತವನ್ನು ನಾನು ಜನರಿಂದಲೇ ಕೇಳಿದ್ದೇನೆ” ಎಂದು ಹೇಳಿದರು.
ಸರ್ಕಾರದ ವಿರುದ್ಧ ಜನರ ಅಸಮಾಧಾನ
ಪ್ರಸ್ತುತ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ ನಿಖಿಲ್, “ಈ ಸರ್ಕಾರದ ದುರಾಡಳಿತ ಮತ್ತು ನಡವಳಿಕೆಯಿಂದ ಜನರು ಬೇಸತ್ತಿದ್ದಾರೆ. ಎಲ್ಲೆಡೆ ಹೋದರೂ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಇದು ಕೇವಲ ಕಾರ್ಯಕರ್ತರ ಬೇಡಿಕೆ ಅಲ್ಲ, ಜನರ ಅಭಿಪ್ರಾಯವೂ ಹೌದು” ಎಂದು ಹೇಳಿದರು.
ಮೈತ್ರಿ ಧರ್ಮದ ಮಾತು
“ಎಂಡ್ ಆಫ್ ದಿ ಡೇ ನಾವು ಎನ್‌ಡಿಎ ಮಿತ್ರಪಕ್ಷದಲ್ಲಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಒಂದಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆಲ್ಲಿಸಿದ್ದೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಮಯ ಬಂದಾಗ ಬಿಜೆಪಿ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ” ಎಂದು ನಿಖಿಲ್ ಸ್ಪಷ್ಟಪಡಿಸಿದರು.
ಶಾಸಕ ಎ. ಮಂಜು ಮತ್ತು ಶಿವಲಿಂಗೇಗೌಡರ ಹೇಳಿಕೆ
ಇದೇ ವಿಚಾರವಾಗಿ ಶಾಸಕ ಎ. ಮಂಜು ಕೂಡ ಪ್ರೀತಂ ಗೌಡರ ಹೇಳಿಕೆಯನ್ನು ಖಂಡಿಸಿದ್ದು, ಇದು ಹತಾಶೆಯ ಮಾತುಗಳೆಂದು ಟೀಕಿಸಿದ್ದಾರೆ. ಅದೇ ವೇಳೆ, ಮಹಿಳಾ ತಹಸೀಲ್ದಾರ್ ಕುರಿತು ಬಳಸಿದ ಪದಗಳ ಬಗ್ಗೆ ಶಿವಲಿಂಗೇಗೌಡರ ಅಸಂವಿಧಾನಿಕ ಭಾಷೆಯನ್ನು ತೀವ್ರವಾಗಿ ಖಂಡಿಸಿ, “ಅರಳಿಕಟ್ಟೆ ಭಾಷೆ ಅಸೆಂಬ್ಲಿಗೆ ಶೋಭೆ ಅಲ್ಲ. ಇದು ರಾಜ್ಯಕ್ಕೆ ಮಾಡಿದ ಅಪಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.