Apr 8, 2026 Languages : ಕನ್ನಡ | English

"ಅಪ್ಪ-ಮಗನಿಗೆ RSS ಹುಚ್ಚು ಹಿಡಿದಿದೆ" - ಮೈಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ವಾಗ್ದಾಳಿ!!

ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಆರ್‌ಎಸ್‌ಎಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಖರ್ಗೆ ಅವರನ್ನು ನೇರವಾಗಿ ಪಾಕಿಸ್ತಾನದ ಸ್ಥಾಪಕ ಮಹಮದ್ ಅಲಿ ಜಿನ್ನಾಗೆ ಹೋಲಿಸಿದ್ದಾರೆ!

ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ
ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, "ಮಲ್ಲಿಕಾರ್ಜುನ ಖರ್ಗೆ ಅವರು 21ನೇ ಶತಮಾನದ ಮಹಮದ್ ಅಲಿ ಜಿನ್ನಾ ತರಹ ವರ್ತಿಸುತ್ತಿದ್ದಾರೆ. ಅಂದು ಮುಸ್ಲಿಂ ಲೀಗ್ ಅಧ್ಯಕ್ಷ ಜಿನ್ನಾ ಯಾವ ರೀತಿ ದ್ವೇಷದ ಭಾಷಣ ಮಾಡುತ್ತಿದ್ದರೋ, ಇಂದು ಖರ್ಗೆ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಖರ್ಗೆ ಅವರೇ ಮುಸ್ಲಿಂ ಲೀಗ್ ಮನೋಭಾವದ ಪ್ರತಿನಿಧಿಯಂತಾಗಿದ್ದಾರೆ" ಎಂದು ಕಿಡಿಕಾರಿದರು.

"ಅಪ್ಪ-ಮಗನಿಗೆ ಆರ್‌ಎಸ್‌ಎಸ್ ಹುಚ್ಚು"

ಖರ್ಗೆ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, "ಇತ್ತೀಚೆಗೆ ಮರಿ ಖರ್ಗೆಗೆ (ಪ್ರಿಯಾಂಕ್ ಖರ್ಗೆ) ಆರ್‌ಎಸ್‌ಎಸ್ ಬಗ್ಗೆ ಮಾತಾಡುವ ಹುಚ್ಚು ಹಿಡಿದಿತ್ತು. ಈಗ ಆ ಹುಚ್ಚು ಅಪ್ಪನಿಗೂ ವರ್ಗಾವಣೆಯಾದಂತಿದೆ. ಆರ್‌ಎಸ್‌ಎಸ್ ಬಗ್ಗೆ ಒಂದೆರಡು ಮಾತು ಆಡದಿದ್ದರೆ ಅಪ್ಪ-ಮಗನಿಗೆ ತಿಂದ ಅನ್ನ ಕರಗುವುದಿಲ್ಲ ಅನಿಸುತ್ತೆ. ಬಹುಶಃ ತಮ್ಮ ಎಐಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರಪಡಿಸಿಕೊಳ್ಳಲು ಹೈಕಮಾಂಡ್ ಮೆಚ್ಚಿಸಲು ಇಂತಹ ಹೇಳಿಕೆ ನೀಡುತ್ತಿರಬಹುದು" ಎಂದು ವ್ಯಂಗ್ಯವಾಡಿದರು.

ಅಸ್ಸಾಂ ಚುನಾವಣಾ ಪ್ರಚಾರದ ವೇಳೆ ಖರ್ಗೆ ಅವರು ನೀಡಿದ್ದ ಹೇಳಿಕೆ ಈಗ ಈ ಎಲ್ಲಾ ಗಲಾಟೆಗೆ ಮೂಲ ಕಾರಣ. "ಕುರಾನ್‌ನಲ್ಲಿ ನಮಾಜ್ ಮಾಡುವಾಗಲೂ ವಿಷಕಾರಿ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಹೇಳಲಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೂಡ ಅಂತಹ ಹಾವುಗಳಿದ್ದಂತೆ. ಅವುಗಳನ್ನು ಎದುರಿಸದಿದ್ದರೆ ಬದುಕಲು ಸಾಧ್ಯವಿಲ್ಲ" ಎಂದು ಖರ್ಗೆ ಹೇಳಿದ್ದರು ಎನ್ನಲಾಗಿದೆ. ಈ ಮಾತನ್ನು ಉಲ್ಲೇಖಿಸಿದ ಪ್ರತಾಪ್ ಸಿಂಹ, ಇದು ಕೋಮು ದ್ವೇಷವನ್ನು ಹರಡುವ ಪ್ರಯತ್ನ ಎಂದು ಆರೋಪಿಸಿದರು.

"ಖರ್ಗೆ ಅವರ ಕುಟುಂಬವೇ ಹಿಂದೆ ಕೋಮು ಹಿಂಸಾಚಾರದ ನೋವನ್ನು ಅನುಭವಿಸಿದೆ. ಆದರೂ ಅವರು ಇಂದು ಅದೇ ಸಮುದಾಯದ ಓಲೈಕೆಗಾಗಿ ಹಿಂದೂ ಸಂಘಟನೆಗಳನ್ನು ಟೀಕಿಸುತ್ತಿರುವುದು ವಿಷಾದನೀಯ. ಮುಸ್ಲಿಂ ಓಲೈಕೆ ವಿಚಾರದಲ್ಲಿ ಖರ್ಗೆ ಅವರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ" ಎಂದು ಪ್ರತಾಪ್ ಸಿಂಹ ಟೀಕಿಸಿದರು.

ಖರ್ಗೆ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಬಿಜೆಪಿ, ಈಗಾಗಲೇ ಅವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದೆ. "ಆರ್‌ಎಸ್‌ಎಸ್ ಅನ್ನು ದೇಶದ ಹಿಂದೂಗಳು ಕಟ್ಟಿ ಬೆಳೆಸಿದ್ದಾರೆ. ಅಂತಹ ಸಂಸ್ಥೆಯನ್ನು ಹಾವಿಗೆ ಹೋಲಿಸುವುದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ" ಎಂಬುದು ಬಿಜೆಪಿ ನಾಯಕರ ವಾದ.

Latest News