Mar 29, 2026 Languages : ಕನ್ನಡ | English

'ಅಹಿಂದ' ಅವಮಾನ ಸಹಿಸಲ್ಲ - ಬಿಜೆಪಿ ವಿರುದ್ಧ ತೊಡೆತಟ್ಟಿದ ಶಾಸಕ ಪ್ರದೀಪ್ ಈಶ್ವರ್!!

ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಕಚೇರಿ ಹತ್ತಿರವೇ ಕಾಂಗ್ರೆಸ್ ಪರ ಮತಯಾಚನೆ ನಡೆಸುತ್ತಾ ಭಾಷಣದ ಮೂಲಕ ಮತದಾರರ ಗಮನ ಸೆಳೆದರು. ಅವರು ಬಿಜೆಪಿ ವಿರುದ್ಧ ನೇರಾನೇರ ವಾಗ್ದಾಳಿ ನಡೆಸುತ್ತಾ, ಅಲ್ಪಸಂಖ್ಯಾತರು ಯೋಚಿಸಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ನಾಯಕರ ದ್ವಂದ್ವ ನೀತಿಗೆ ಪ್ರದೀಪ್ ಈಶ್ವರ್ ತರಾಟೆ
ಬಿಜೆಪಿ ನಾಯಕರ ದ್ವಂದ್ವ ನೀತಿಗೆ ಪ್ರದೀಪ್ ಈಶ್ವರ್ ತರಾಟೆ

"ಅಲ್ಪಸಂಖ್ಯಾತರ ಪ್ರಾರ್ಥನೆಗೆ ಅಡ್ಡಿಪಡಿಸಿದವರು ಯಾರು? ಹಿಜಾಬ್ ವಿಷಯದಲ್ಲಿ ವಿವಾದ ಸೃಷ್ಟಿಸಿದವರು ಯಾರು? ಅವರ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಬೇಡಿ ಎಂದು ಪ್ರಚೋದಿಸಿದವರು ಯಾರು?" ಎಂದು ಬಿಜೆಪಿ ನಾಯಕರನ್ನು ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ಸಮಾಜವನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಒಡೆದು ಆಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪ್ರತಾಪ್ ಸಿಂಹ ಅವರಂತಹ ನಾಯಕರು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಅಲ್ಪಸಂಖ್ಯಾತರಿಗೆ ಸಿಎಂ ಸಿದ್ದರಾಮಯ್ಯ ಅವರು ಸಂವಿಧಾನಬದ್ಧವಾಗಿ ಬಜೆಟ್‌ನಲ್ಲಿ ಅನುದಾನ ನೀಡಿದರೆ, ಅದನ್ನು 'ಮೈನಾರಿಟಿ ಬಜೆಟ್' ಎಂದು ಟೀಕಿಸುವ ಬಿಜೆಪಿ ನಾಯಕರ ದ್ವಂದ್ವ ನೀತಿಯನ್ನು ಅವರು ತರಾಟೆಗೆ ತೆಗೆದುಕೊಂಡರು.

ತಮಗೆ ಪೊರಕೆ ಮತ್ತು ಚಪ್ಪಲಿ ತೋರಿಸಿದ ಘಟನೆಯನ್ನು ಪ್ರಸ್ತಾಪಿಸಿದ ಪ್ರದೀಪ್ ಈಶ್ವರ್, "ಅದು ಬರಿ ನನಗೆ ಮಾಡಿದ ಅಪಮಾನವಲ್ಲ, ಇಡೀ ಅಹಿಂದ (OBC) ಸಮುದಾಯಕ್ಕೆ ಮಾಡಿರುವ ಅವಮಾನ," ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ನಾಯಕರನ್ನು ಬಿಜೆಪಿ ವ್ಯವಸ್ಥಿತವಾಗಿ ಗುರಿ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಜನತೆ ಮತ್ತು ಒಬಿಸಿ ವರ್ಗದವರು ಬಿಜೆಪಿಯ ಈ ನಡೆಯನ್ನು ಗಮನಿಸುತ್ತಿದ್ದಾರೆ, ಈ ಬಾರಿ ಚುನಾವಣೆಯಲ್ಲಿ ಅವರಿಗೆ ಸೂಕ್ತ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.

"ಕಾಂಗ್ರೆಸ್‌ಗೆ ಮತ ಹಾಕಿ, ಅಭಿವೃದ್ಧಿಯನ್ನು ಬೆಂಬಲಿಸಿ"
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕರು, ಶಾಮನೂರು ಶಿವಶಂಕರಪ್ಪ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರು ನೆನಪಿಸಿಕೊಳ್ಳಬೇಕು ಎಂದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನಲ್ಲಿ ಆರೋಗ್ಯ, ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳಂತಹ ಪ್ರಮುಖ ವಿಷಯಗಳ ಬಗ್ಗೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

"ನಿಮ್ಮ ಧ್ವನಿ ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಕೇಳಿಬರಬೇಕೆಂದರೆ, ನೀವು ಜವಾಬ್ದಾರಿಯುತವಾಗಿ ಯೋಚಿಸಿ ಮತ ಚಲಾಯಿಸಬೇಕು. ಸಮಾಜವನ್ನು ಒಡೆಯುವ ಶಕ್ತಿಗಳಿಗೆ ಮಣೆ ಹಾಕಬೇಡಿ, ಅಭಿವೃದ್ಧಿಪರವಾದ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿ" ಎಂದು ಮತದಾರರಲ್ಲಿ ವಿನಂತಿಸಿದರು.

ಪ್ರದೀಪ್ ಈಶ್ವರ್ ಅವರ ಈ ಪ್ರಚಾರದ ಭಾಷಣ, ದಾವಣಗೆರೆ ಉಪಚುನಾವಣೆಯಲ್ಲಿ ಧರ್ಮ ಮತ್ತು ಅಭಿವೃದ್ಧಿಯ ವಿಷಯಗಳನ್ನು ಮುನ್ನೆಲೆಗೆ ತಂದಿದೆ. ಮತದಾರ ಪ್ರಭು ಯಾರಿಗೆ ಜಯದ ಮಾಲೆ ಹಾಕುತ್ತಾನೆ ಅನ್ನೋದು ಸದ್ಯದ ಕುತೂಹಲ.