ಕಳೆದ ಹನ್ನೆರಡು ವರ್ಷದ ಹಿಂದೆ ನಮ್ಮ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಹೇಗಿತ್ತು ಅಂತ ಒಂದ್ಸಲ ನೆನಪು ಮಾಡಿಕೊಳ್ಳಿ. ಎಲ್ಲಿಗೇ ಹೋಗಬೇಕಿದ್ರೂ ಜೇಬಿನಲ್ಲಿ ಕಂತೆ ಕಂತೆ ಕ್ಯಾಶ್ ಇಟ್ಟುಕೊಳ್ಳಬೇಕಿತ್ತು. ಇನ್ನು ಅಂಗಡಿಗಳಿಗೆ ಹೋದರೆ ಚಿಲ್ಲರೆದ್ದೇ ದೊಡ್ಡ ಫೈಟು. ಬ್ಯಾಂಕಿಗೆ ಏನಾದ್ರೂ ಕೆಲಸಕ್ಕೆ ಹೋದರೆ ದಿನವೆಲ್ಲಾ ಕ್ಯೂನಲ್ಲೇ ಕಳಿಬೇಕಿತ್ತು. ಇನ್ನು ಹೈವೇಗಳಲ್ಲಿ ಟೋಲ್ ಗೇಟ್ ಬಂತಾ, ಗಂಟೆಗಟ್ಟಲೆ ಲೈನ್‌ನಲ್ಲಿ ನಿಂತು ಸಾಕಪ್ಪಾ ಸಾಕು ಅನ್ಸುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ಭಾರತೀಯರ ದೈನಂದಿನ ಜೀವನ ಕಂಪ್ಲೀಟ್ ಉಲ್ಟಾ ಆಗಿದೆ.
1. ಯುಪಿಐ ಕ್ರಾಂತಿ (UPI)
2016ರಲ್ಲಿ ಶುರುವಾದ ಯುಪಿಐ ಇವತ್ತು ನಮ್ಮ ದೇಶದ ರೀಟೇಲ್ ಬಿಸಿನೆಸ್‌ನ ಬೆನ್ನೆಲುಬಾಗಿದೆ. ಬೀದಿಬದಿಯ ಪಾನಿಪೂರಿ ಗಾಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್‌ಗಳವರೆಗೆ ಇವತ್ತು ಕ್ಯೂಆರ್ (QR) ಕೋಡ್ ಕಾಮನ್ ಆಗ್ಬಿಟ್ಟಿದೆ. ಜೇಬಿನಲ್ಲಿ ಪರ್ಸ್ ಇಲ್ಲದಿದ್ದರೂ ಮೊಬೈಲ್ ನಂಬರ್ ಅಥವಾ ಯುಪಿಐ ಐಡಿ ಇದ್ದರೆ ಸಾಕು, ಸೆಕೆಂಡ್‌ಗಳಲ್ಲಿ ಪೇಮೆಂಟ್ ಮುಗಿಯುತ್ತೆ. ಕಳೆದ 2025-26ರ ಆರ್ಥಿಕ ವರ್ಷದಲ್ಲಂತೂ ಯುಪಿಐ ಮೂಲಕ ಬರೋಬ್ಬರಿ 20,000 ಕೋಟಿಗೂ ಹೆಚ್ಚು ಟ್ರಾನ್ಸಾಕ್ಷನ್‌ಗಳು ನಡೆದಿದ್ದು, ಇದರ ಒಟ್ಟು ಮೌಲ್ಯ 314 ಲಕ್ಷ ಕೋಟಿ ರೂಪಾಯಿ ದಾಟಿದೆ! ನಮ್ಮ ದೇಶದ ಶೇ. 85 ರಷ್ಟು ರೀಟೇಲ್ ಪಾವತಿ ಇವತ್ತು ಯುಪಿಐ ಮೂಲಕವೇ ಆಗ್ತಿದೆ.
2. ಜನ ಧನ್ ಖಾತೆಗಳು
ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ಬಡ ಮತ್ತು ಕಡಿಮೆ ಆದಾಯ ಇರೋ ಕುಟುಂಬಗಳಿಗೆ ಉಚಿತವಾಗಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿಕೊಡಲಾಯಿತು. ತಮ್ಮ ಜೀವನದಲ್ಲೇ ಮೊದಲ ಬಾರಿಗೆ ಬ್ಯಾಂಕ್ ಮೆಟ್ಟಿಲು ಹತ್ತಿದವರು ಕೋಟಿ ಕೋಟಿ ಜನ. ಈ ಜನ ಧನ್ ಖಾತೆಗಳಿಗೆ ಆಧಾರ್ ಮತ್ತು ಮೊಬೈಲ್ ನಂಬರ್ ಜೋಡಣೆ (JAM) ಮಾಡಿದ್ದು ಸರ್ಕಾರದ ಡಿಜಿಟಲ್ ಆಡಳಿತಕ್ಕೆ ಒಂದು ಗಟ್ಟಿ ಅಡಿಪಾಯ ಹಾಕಿಕೊಟ್ಟಿತು.
3. ನೇರ ನಗದು ವರ್ಗಾವಣೆ (DBT)
ಇದೊಂದು ನಿಜಕ್ಕೂ ಕ್ರಾಂತಿಕಾರಿ ಹೆಜ್ಜೆ. ಮುಂಚೆ ಸರ್ಕಾರದ ಸಬ್ಸಿಡಿ ಅಥವಾ ಪೆನ್ಷನ್ ಹಣ ಬರಬೇಕಾದರೆ ಮಧ್ಯವರ್ತಿಗಳಿಗೆ ಲಂಚ ಕೊಡಬೇಕಿತ್ತು. ಆದರೆ ಈಗ ಡಿಬಿಟಿ (Direct Benefit Transfer) ವ್ಯವಸ್ಥೆಯಿಂದಾಗಿ ಸರ್ಕಾರದ ಕಲ್ಯಾಣ ಯೋಜನೆಗಳ ದುಡ್ಡು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಇದರಿಂದಾಗಿ ನಕಲಿ ಅಕೌಂಟ್‌ಗಳಿಗೆ ಹೋಗ್ತಿದ್ದ ಬರೋಬ್ಬರಿ 44 ಲಕ್ಷ ಕೋಟಿಗೂ ಅಧಿಕ ಹಣದ ಸೋರಿಕೆಯನ್ನು ತಡೆಯಲಾಗಿದೆ.
4. ಆಧಾರ್ ಕಾರ್ಡ್
ಆಧಾರ್ ಎನ್ನುವುದು ಭಾರತವೇ ಸ್ವಂತವಾಗಿ ರೆಡಿ ಮಾಡಿದ ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆ. ಇವತ್ತು 142 ಕೋಟಿಗೂ ಹೆಚ್ಚು ಜನ ಆಧಾರ್ ಕಾರ್ಡ್ ಹೊಂದಿದ್ದಾರೆ. ಸಿಮ್ ಕಾರ್ಡ್ ತಗೋಬೇಕಾ, ಬ್ಯಾಂಕ್ ಅಕೌಂಟ್ ಮಾಡಿಸಬೇಕಾ ಅಥವಾ ಯಾವುದೇ ಸರ್ಕಾರಿ ಸೌಲಭ್ಯ ಬೇಕಾ... ಎಲ್ಲದಕ್ಕೂ ಆಧಾರ್ ಇವತ್ತು ಮಸ್ಟ್ ಅಂಡ್ ಶುಡ್.
5. ಫಾಸ್ಟ್‌ಟ್ಯಾಗ್ (FASTag)
ಹೈವೇಗಳಲ್ಲಿ ಕಾರು ಚಲಾಯಿಸುವವರಿಗೆ ಟೋಲ್ ಪ್ಲಾಜಾಗಳೇ ದೊಡ್ಡ ತಲೆನೋವಾಗಿದ್ದವು. ಆದರೆ ಆರ್‌ಎಫ್‌ಐಡಿ (RFID) ತಂತ್ರಜ್ಞಾನದ ಫಾಸ್ಟ್‌ಟ್ಯಾಗ್ ಬಂದಮೇಲೆ ಗಾಡಿ ನಿಲ್ಲಿಸದೆಯೇ ಆಟೋಮ್ಯಾಟಿಕ್ ಆಗಿ ಹಣ ಕಟ್ ಆಗುತ್ತೆ. ಇದರಿಂದ ಟೋಲ್‌ಗಳಲ್ಲಿ ವೇಟಿಂಗ್ ಟೈಮ್, ಇಂಧನ ಪೋಲಾಗುವುದು ಮತ್ತು ಟ್ರಾಫಿಕ್ ಜಾಮ್ ಕಂಪ್ಲೀಟ್ ಆಗಿ ಕಮ್ಮಿಯಾಗಿದೆ.
6. ಆನ್‌ಲೈನ್ ಟ್ಯಾಕ್ಸ್ ಸಲ್ಲಿಕೆ
ಒಂದ್ಕಾಲದಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (ITR) ಫೈಲ್ ಮಾಡೋದು ಅಂದ್ರೆ ಆಫೀಸ್‌ಗಳಿಗೆ ಅಲೆಯಬೇಕಿತ್ತು. ಈಗ ಆಧಾರ್ ಲಿಂಕ್ ಮತ್ತು ಮೊದಲೇ ಭರ್ತಿಯಾಗಿರೋ ಫಾರ್ಮ್‌ಗಳಿಂದಾಗಿ ಮನೆಯಲ್ಲೇ ಕೂತು ಆನ್‌ಲೈನ್‌ನಲ್ಲಿ ಐಟಿಆರ್ ಮುಗಿಸಬಹುದು.
7. ಕೋವಿನ್ ಆಪ್ (CoWIN)
ಕರೋನಾ ಟೈಮ್‌ನಲ್ಲಿ ಬಂದ ‘ಕೋವಿನ್’ ಪ್ಲಾಟ್‌ಫಾರ್ಮ್ ಜಗತ್ತಿನಲ್ಲೇ ಅತಿ ದೊಡ್ಡ ಡಿಜಿಟಲ್ ಲಸಿಕಾ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಗಿ ಹೊರಹೊಮ್ಮಿತು. ಇಷ್ಟು ದೊಡ್ಡ ದೇಶದಲ್ಲಿ ಕೋಟ್ಯಂತರ ಜನರಿಗೆ ವ್ಯಾಕ್ಸಿನ್ ಸ್ಲಾಟ್ ಬುಕ್ ಮಾಡೋದು ಮತ್ತು ಡಿಜಿಟಲ್ ಸರ್ಟಿಫಿಕೇಟ್ ಕೊಡೋದು ಕೋವಿನ್ ಆಪ್‌ನಿಂದಾಗಿ ತುಂಬಾ ಈಸಿಯಾಯಿತು.
8. ಡಿಜಿಲಾಕರ್ ಮತ್ತು ಉಮಂಗ್ ಆಪ್
ಇನ್ನು 'ಡಿಜಿಲಾಕರ್' (DigiLocker) ಬಂದ ಮೇಲಂತೂ ಡಿಎಲ್, ಪ್ಯಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್‌ಗಳನ್ನು ಒರಿಜಿನಲ್ ಆಗಿ ಪಾಕೆಟ್‌ನಲ್ಲಿ ಇಟ್ಟುಕೊಂಡು ತಿರುಗಾಡೋ ಹಾಗಿಲ್ಲ. ಮೊಬೈಲ್‌ನಲ್ಲಿರೋ ಡಿಜಿಲಾಕರ್ ತೋರಿಸಿದರೆ ಸಾಕು, ಅದು ಆಫೀಶಿಯಲ್ ಆಗಿ ವ್ಯಾಲಿಡ್ ಇರುತ್ತೆ. ಸದ್ಯ ಇದಕ್ಕೆ 53 ಕೋಟಿಗೂ ಹೆಚ್ಚು ಯೂಸರ್ಸ್ ಇದ್ದಾರೆ. ಅದೇ ರೀತಿ 'ಉಮಂಗ್' ಆಪ್ ಮೂಲಕ ನೂರಾರು ಸರ್ಕಾರಿ ಸೇವೆಗಳು ಒಂದೇ ಕಡೆ ಸಿಗುತ್ತಿವೆ.
ಮೋದಿ ಸರ್ಕಾರದ ಕಳೆದ 12 ವರ್ಷದ ಅತಿ ದೊಡ್ಡ ಸಾಧನೆ ಅಂದ್ರೆ ಬರೀ ರಸ್ತೆ, ಫ್ಲೈಓವರ್ ಕಟ್ಟಿದ್ದಲ್ಲ; ಬದಲಾಗಿ ಭಾರತೀಯರ ಮೈಂಡ್ ಸೆಟ್ ಬದಲಾಯಿಸಿದ್ದು. 2014 ಕ್ಕಿಂತ ಮುಂಚೆ ಇಲ್ಲದ ಒಂದು ಕಾನ್ಫಿಡೆನ್ಸ್ ಇವತ್ತು ಪ್ರತಿಯೊಬ್ಬ ಭಾರತೀಯನಲ್ಲೂ ಬಂದಿದೆ.