ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಎಂಟ್ರಿ ಚುನಾವಣಾ ಕಣವನ್ನೇ ರಂಗೇರಿಸಿದೆ. ಏಪ್ರಿಲ್ 11ರಂದು ಮೋದಿ ಅವರು ಬಂಗಾಳದ ವಿವಿಧೆಡೆ ನಡೆಸಿದ ಪ್ರಚಾರ ಕಾರ್ಯಕ್ರಮಗಳು ಮತ್ತು ರೋಡ್ ಶೋಗಳು ಭಾರಿ ಸದ್ದು ಮಾಡುತ್ತಿವೆ.
ಅಂದು ಮೋದಿ ಅವರು ಪೂರ್ವ ಬರ್ಧಮಾನ್, ಜಂಗೀಪುರ ಮತ್ತು ದಕ್ಷಿಣ ದಿನಾಜ್‌ಪುರದಲ್ಲಿ ಸಾಲು ಸಾಲು ರ‍್ಯಾಲಿಗಳನ್ನು ನಡೆಸಿದರು. ಇದಾದ ಮೇಲೆ ಸಿಲಿಗುರಿಯಲ್ಲಿ ನಡೆದ 15 ಕಿಲೋಮೀಟರ್ ಉದ್ದದ ಭರ್ಜರಿ ರೋಡ್ ಶೋ ಎಲ್ಲರ ಕಣ್ಣು ಕುಕ್ಕುವಂತಿತ್ತು. ಅಲ್ಲಿ ನೆರೆದಿದ್ದ ಜನಸ್ತೋಮವನ್ನು ಕಂಡು ಸ್ವತಃ ಮೋದಿ ಅವರೇ ಅಚ್ಚರಿ ಪಟ್ಟರು. "ನನ್ನ ಸ್ವಂತ ರಾಜ್ಯ ಗುಜರಾತ್‌ನಲ್ಲೂ ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ನಾನು ನೋಡಿರಲಿಲ್ಲ, ಇಲ್ಲಿನ ಪ್ರೀತಿ ಅದನ್ನೂ ಮೀರಿಸಿದೆ" ಎಂದು ಅವರು ಮನಸಾರೆ ಹೊಗಳಿದರು.
15 kms of unparalleled affection!
— Narendra Modi (@narendramodi) April 12, 2026
Here are highlights from Siliguri. A BJP Government will address local developmental issues and at the same time bring new opportunities for the youth of West Bengal. pic.twitter.com/qiyAZoB8YK
ಟಿಎಂಸಿ ವಿರುದ್ಧ ಮೋದಿ ವಾಗ್ದಾಳಿ
ತಮ್ಮ ಭಾಷಣದುದ್ದಕ್ಕೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಮೇಲೆ ಮೋದಿ ಚಾಟಿ ಬೀಸಿದರು. ಬಂಗಾಳದಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ, 'ಸಿಂಡಿಕೇಟ್ ರಾಜ್' ಮತ್ತು 'ಕಟ್ ಮನಿ' (ಕಮಿಷನ್) ಸಂಸ್ಕೃತಿಯ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಬಂಗಾಳದ ಜನರ ಸಮಸ್ಯೆಗಳಿಗೆ ಬಿಜೆಪಿಯೇ ಏಕೈಕ ಪರಿಹಾರ" ಎಂದು ಅವರು ಜನರಿಗೆ ಭರವಸೆ ನೀಡಿದರು. ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ಮುಂದಿನ ಹಂತದ ಮತದಾನಕ್ಕೆ ಮುನ್ನ ಈ ಮಾತುಗಳು ಭಾರಿ ಮಹತ್ವ ಪಡೆದುಕೊಂಡಿವೆ.
ಅಂಬ್ಯುಲೆನ್ಸ್‌ಗೆ ದಾರಿ ಬಿಟ್ಟ ಮೋದಿ: ವೈರಲ್ ಆದ ವಿಡಿಯೋ
ಈ ಇಡೀ ದಿನದ ಕಾರ್ಯಕ್ರಮದಲ್ಲಿ ಒಂದು ವಿಶೇಷ ಘಟನೆ ಎಲ್ಲರ ಗಮನ ಸೆಳೆಯಿತು. ಮೋದಿ ಅವರ ಬೆಂಗಾವಲು ಪಡೆ (ಕಾನ್ವಾಯ್) ಹೋಗುತ್ತಿದ್ದಾಗ, ಎದುರಿನಿಂದ ಒಂದು ಅಂಬ್ಯುಲೆನ್ಸ್ ಬಂದಿತು. ಇದನ್ನು ಗಮನಿಸಿದ ತಕ್ಷಣ ಪ್ರಧಾನಿ ಮೋದಿ ತಮ್ಮ ವಾಹನಗಳನ್ನು ನಿಲ್ಲಿಸಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬೆಂಬಲಿಗರು ಇದನ್ನು "ಜನರೇ ಮೊದಲು ಎಂಬ ಮೋದಿ ಅವರ ಗುಣ" ಎಂದು ಹೊಗಳುತ್ತಿದ್ದರೆ, ವಿರೋಧ ಪಕ್ಷದವರು ಇದು "ಪಕ್ಕಾ ಸ್ಕ್ರಿಪ್ಟೆಡ್ ನಾಟಕ" ಎಂದು ಟೀಕಿಸುತ್ತಿದ್ದಾರೆ.
ಬಿಜೆಪಿಯ ಬಿಗ್ ಪ್ಲಾನ್!
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಪಣ ತೊಟ್ಟಿದೆ. 2016ರಲ್ಲಿ ಕೇವಲ 3 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, 2021ರಲ್ಲಿ 77 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಮಟ್ಟದ ಬೆಳವಣಿಗೆ ಕಂಡಿತ್ತು. ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಕೇಸರಿ ಪಡೆ, ಬಂಗಾಳದ ಮೂಲೆ ಮೂಲೆಯಲ್ಲೂ ಪ್ರಚಾರ ನಡೆಸುತ್ತಿದೆ.